'ಮರಳು ಗಣಿಗಾರಿಕೆಯಿಂದ ಅಂತರ್ಜಲ ಕುಸಿತ'
ಹೊಸನಗರ: ನದಿ ಪ್ರದೇಶದಲ್ಲಿ ನಡೆಯುತ್ತಿರುವ ವ್ಯಾಪಕ ಮರಳು ಗಣಿಗಾರಿಕೆಯಿಂದ ಅಂತರ್ಜಲ ಕುಸಿಯುತ್ತಿದೆ ಎಂದು ಪರಿಸರವಾದಿ ಜಲತಜ್ಞ ಚಕ್ರವಾಕ ಸುಬ್ರಹ್ಮಣ್ಯ ಕಳವಳ ವ್ಯಕ್ತಪಡಿಸಿದರು.
ತಾಲೂಕಿನ ಸಂಪೇಕಟ್ಟೆಯ ಸರ್ಕಾರಿ ಪ್ರೌಢಶಾಲೆಯಲ್ಲಿ ಕೊಡಚಾದ್ರಿ ಇಕೋ ಕ್ಲಬ್, ಗ್ರಾಮಭಾರತಿ ಟ್ರಸ್ಟ್ ಕಾರಣಣಗಿರಿ ಸಂಯುಕ್ತವಾಗಿ ಹಮ್ಮಿಕೊಂಡಿದ್ದ ವಿಶ್ವ ಜಲದಿನಾಚರಣೆಯಲ್ಲಿ ಉಪನ್ಯಾಸ ನೀಡಿದ ಅವರು, ಅಭಿವೃದ್ಧಿಗೆ ಮರಳು ಬೇಕು. ಆದರೆ ನದಿ ಪಾತ್ರವನ್ನು ಬಗೆದು ಬೇಕಾಬಿಟ್ಟಿ ಮರಳು ಗಣಿಗಾರಿಕೆ ನಡೆಸುವುದಕ್ಕೆ ಕಡಿವಾಣ ಹಾಕಬೇಕು ಎಂದರು.
ಬರಿದಾಗುತ್ತಿದೆ ಮಲೆನಾಡು: ಶುದ್ಧ ನೀರು, ಪರಿಸರಕ್ಕೆ ಹೆಸರಾಗಿದ್ದ ಹಚ್ಚಹಸಿರಿನ ಮಲೆನಾಡು ಬರಿದಾಗುತ್ತಿದೆ. ಮಲೆನಾಡ ನಡುಮನೆಯಲ್ಲೂ ಶುದ್ಧ ನೀರಿಗೆ ಬರ ಮತ್ತು ನೀರಿಗಾಗಿ ಹಾಹಾಕಾರ ಉಂಟಾಗುತ್ತಿದ್ದು, ಭವಿಷ್ಯದ ಆತಂಕಕ್ಕೆ ಕಾರಣವಾಗಿದೆ ಎಂದವರು ಹೇಳಿದರು.
ಕೇವಲ ಹಣದಾಸೆ, ಐಷಾರಾಮಿ ಬದುಕಿಗಾಗಿ ನಮ್ಮ ಪರಿಸರವನ್ನು ನಾವೇ ಹಾಳು ಮಾಡುತ್ತಿದ್ದು, ಮುಂದಿನ ಪೀಳಿಗೆಗೆ ಕೆಟ್ಟ ಬದುಕನ್ನು ನಾವೇ ನಿರ್ಮಿಸುತ್ತಿದ್ದೇವೆ ಎಂದು ವಿಷಾದ ವ್ಯಕ್ತಪಡಿಸಿದರು.
ಬ್ರೆಜಿಲ್ ಬಿಟ್ಟರೆ ಅತ್ಯಂತ ತೇವಾಂಶ ಹೊಂದಿರುವ ಹೆಗ್ಗಳಿಗೆ ಹೊಂದಿದ ಭಾರತದಲ್ಲಿ ದಿನಕಳೆದಂತೆ ಎಲ್ಲವೂ ಬರಡಾಗುತ್ತಿದೆ. ನಮ್ಮ ಪರಿಸರದ ಸತ್ವ ಉಳಿಸುವ ನಿಟ್ಟಿನಲ್ಲಿ ತುರ್ತುಕ್ರಮ ಕೈಗೊಳ್ಳಬೇಕು. ವಿದ್ಯಾರ್ಥಿ ದಿಸೆಯಿಂದಲೇ ಅರಿವು ಮೂಡಿಸಬೇಕು. ಭವಿಷ್ಯದ ಆಲೋಚನೆ ಹುಟ್ಟುಹಾಕಿ ಶುದ್ಧ ಗಾಳಿ, ನೀರು, ಪರಿಸರ ನಿರ್ಮಾಣ ಮಾಡುವ ಸಂಕಲ್ಪ ಮಾಡಬೇಕಾದ ಅಗತ್ಯವಿದೆ ಎಂದರು.
ಇಂಗು ಗುಂಡಿ ಮಹತ್ವ: ಗ್ರಾಪಂ ಉಪಾಧ್ಯಕ್ಷ ಮೋಹನಶೆಟ್ಟಿ ಮಾತನಾಡಿ, ಅಂತರ್ಜಲ ಉಳಿಸಬೇಕಾದ ಜವಾಬ್ದಾರಿ ಎಲ್ಲರ ಮೇಲಿದೆ. ಸಾಧ್ಯವಾದಷ್ಟು ಇಂಗುಗುಂಡಿಯನ್ನು ನಿರ್ಮಿಸುವ ಮೂಲಕ ನೀರಿನ ಸಂರಕ್ಷಣೆಗೆ ಕೆಳಹಂತದಿಂದಲೇ ಕಾರ್ಯಕ್ರಮ ರೂಪುಗೊಳ್ಳಬೇಕಿದೆ.
ಎಂದರಲ್ಲದೆ ಸಂಪೇಕಟ್ಟೆ ಗ್ರಾಪಂ ವ್ಯಾಪ್ತಿಯಲ್ಲಿ ಇಂಗು ಗುಂಡಿ ನಿರ್ಮಾಣಕ್ಕೆ ಹೆಚ್ಚಿನ ಒತ್ತು ನೀಡಲಾಗಿದೆ ಎಂದರು.
ಸಾಮಾಜಿಕ ಕಾರ್ಯಕರ್ತ ಹನಿಯ ರವಿ ಮಾತಾಡಿ, ಜಗತ್ತಿನಲ್ಲಿ ಅತಿ ಹೆಚ್ಚು ಜನ ಸಾಯುತ್ತಿರುವುದು ನೀರಿನ ಕಾರಣದಿಂದ. ನೀರಿಲ್ಲದೆ ಹಲವರು ಸತ್ತರೆ ಮಲಿನ ನೀರು ಕುಡಿದು ಇನ್ನು ಹಲವರು ಸಾಯುತ್ತಿದ್ದಾರೆ. ಈ ಬಗ್ಗೆ ಎಚ್ಚರಿಕೆ ಅಗತ್ಯ ಎಂದರು.
ಮುಖ್ಯಶಿಕ್ಷಕಿ ಸೌಮ್ಯ ಅಧ್ಯಕ್ಷತೆ ವಹಿಸಿದ್ದರು. ಗ್ರಾಪಂ ಅಧ್ಯಕ್ಷೆ ರಮಾವತಿ, ಸದಸ್ಯ ಸುಬ್ರಹ್ಮಣ್ಯ, ಶಾಲಾಭಿವೃದ್ಧಿ ಸಮಿತಿ ಸದಸ್ಯ ಶ್ರೀನಿವಾಸ ಉಪಸ್ಥಿತರಿದ್ದರು. ಮಧುಸೂದನ ಸ್ವಾಗತಿಸಿದರು. ಆದಿತ್ಯ ವಂದಿಸಿದರು. ಪ್ರಕಾಶ್ ನಿರೂಪಿಸಿದರು.
ವಿದ್ಯಾರ್ಥಿಗಳಿಗೆ ಜಲಜಾಗೃತಿಯ ಕಿರುಹೊತ್ತಿಗೆ ವಿತರಿಸಲಾಯಿತು.