ಸಮರ್ಪಕ ವಿದ್ಯುತ್‌ಗೆ ಆಗ್ರಹಿಸಿ ಪ್ರತಿಭಟನೆ
ಕ.ಪ್ರ.ವಾರ್ತೆ, ಸೊರಬ, ಮಾ.26 ನಮ್ಮ ಮಕ್ಕಳಿಗೆ ವಸತಿ ಮತ್ತು ಶಾಲೆಯನ್ನು ಇಲ್ಲಿಯೇ ಕೊಡಿ ಎಂಬ ಆಗ್ರಹ ತಾಲೂಕಿನ ಉಳವಿ ಹೋಬಳಿ, ಚಿಟ್ಟೂರು ಗಾಪಂ ವ್ಯಾಪ್ತಿಯ ಕಾರೇಕೊಪ್ಪ ಗ್ರಾಮಸ್ಥರಿಂದ ವ್ಯಕ್ತವಾಯಿತು.
ಗ್ರಾಮದಲ್ಲಿನ ಅಸಮರ್ಪಕ ವಿದ್ಯುತ್ ಅವ್ಯವಸ್ಥೆ ಖಂಡಿಸಿ, ಪಟ್ಟಣದ ಮೆಸ್ಕಾಂ ಕಚೇರಿಗೆ ಬುಧವಾರ ಗ್ರಾಮಸ್ಥರು ಮುತ್ತಿಗೆ ಹಾಕಿ ಕೆಲಕಾಲ ಕಚೇರಿ ಬಾಗಿಲನ್ನು ಮುಚ್ಚಿದ್ದರು.
ಅನಿಯಮಿತ ವಿದ್ಯುತ್ ಕಡಿತ: ಹಲವು ದಿನದಿಂದ ಗ್ರಾಮಕ್ಕೆ ವೋಲ್ಟೇಜ್ ಇಲ್ಲದ ಬೆಳಕು, ಸವರ್ಪಕ ಲೈನ್ ಇಲ್ಲದಿರುವುದು ಹಾಗೂ ಅನಿಯಮಿತ ವಿದ್ಯುತ್ ಕಡಿತದಿಂದ ಜನಜೀವನ ಅಸ್ತವ್ಯವಸ್ತವಾಗಿದೆ. ಈ ಸಮಸ್ಯೆ ಕುರಿತು ಪ್ರಶ್ನಿಸೋಣ ಎಂದು ಮುಂಚಿತವಾಗಿ ತಿಳಿಸಿ ಬಂದಿದ್ದರೂ, ಅಧಿಕಾರಿಗಳು ಗೈರು ಹಾಜರಾಗಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಇದರಿಂದ ಕೆಲಕಾಲ ಪೊಲೀಸರು ಮತ್ತು ಪ್ರತಿಭಟನಕಾರರ ನಡುವೆ ಮಾತಿನ ಚಕಮಕಿ ನಡೆಯಿತು.
ಗ್ರಾಮಸ್ಥ ಶಿವಯ್ಯ ಮಾತನಾಡಿ, ನಮ್ಮ ಗ್ರಾಮಕ್ಕೆ ಹಲವು ವರ್ಷದಿಂದ ಸಮರ್ಪಕ ವಿದ್ಯುತ್ ನೀಡುತ್ತಿಲ್ಲ. ಈ ಬಗ್ಗೆ ಹಲವಾರು ಬಾರಿ ಕಚೇರಿಗೆ ಮನವಿ ಮಾಡಿದ್ದರೂ, ಅಧಿಕಾರಿಗಳು ಬೇಜವಾಬ್ದಾರಿ ಉತ್ತರ ನೀಡಿದ್ದಾರೆಯೇ ಹೊರತು, ವಿದ್ಯುತ್ ವಿತರಣೆ ಸರಿಯಾಗಿಲ್ಲ ಎಂದು ದೂರಿದರು.
ಅನಾರೋಗ್ಯ: ನಲ್ಲಿ ನೀರಿಲ್ಲದೆ ಅನಿವಾರ್ಯವಾಗಿ ಕೆರೆ ನೀರನ್ನು ಬಳಸಿದ ಕೆಲ ಗ್ರಾಮಸ್ಥರಿಗೆ ವಾಂತಿ-ಭೇದಿ ಆರಂಭವಾಗಿದೆ. ಬೆಳೆ ಸುಟ್ಟು ಒಣಗಿದೆ, ಮಕ್ಕಳ ವಿದ್ಯಾಭ್ಯಾಸವಂತೂ ಕಮರಿಹೋಗಿದೆ. ನಾವು ಗ್ರಾಮದಲ್ಲಿ ವಾಸಮಾಡಲು ಸಾಧ್ಯವಿಲ್ಲದಂತಾಗಿದೆ. ನಮಗೆ ಕುಡಿಯುವ ನೀರು ಮತ್ತು ಸಮರ್ಪಕ ವಿದ್ಯುತ್ ನೀಡುವವರೆಗೆ ಹಾಗೂ ಮೇಲಧಿಕಾರಿಗಳು ಬರುವವರೆಗೂ ಇಲ್ಲಿಂದ ಕದಲುವುದಿಲ್ಲ ಎಂದು ಪಟ್ಟು ಹಿಡಿದು ಕುಳಿತಿದ್ದರು.
ಪ್ರತಿಭಟನೆಯಲ್ಲಿ ಕೆ.ಪಿ. ಪರಮೇಶ್ವರಪ್ಪ, ಚೌಡಪ್ಪ, ಹುಚ್ಚರಾಯಪ್ಪ, ಶಿವಯ್ಯ, ಷಣ್ಮುಖ, ಯುವರಾಜ್, ರತ್ನಾಕರ, ರವಿ, ರಮೇಶ, ರುದ್ರಪ್ಪ, ವಿಜಯೇಂದ್ರ, ನಾರಾಯಣಪ್ಪ, ಸೋಮಪ್ಪ, ರಾಮಚಂದ್ರ ಸೇರಿದಂತೆ ನೂರಾರು ಗ್ರಾಮಸ್ಥರು ಪಾಲ್ಗೊಂಡಿದ್ದರು.
--