ಎಲ್ಲ ನಾಮಪತ್ರ ಊರ್ಜಿತ
ಶಿವಮೊಗ್ಗ: ಶಿವಮೊಗ್ಗ ಕ್ಷೇತ್ರ ಕಣಕ್ಕೆ 18 ಉಮೇದುವಾರರು ಸಲ್ಲಿಸಿದ್ದ 32 ನಾಮಪತ್ರಗಳು ಊರ್ಜಿತವಾಗಿದ್ದು, ಯಾವ ನಾಮಪತ್ರವೂ ತಿರಸ್ಕೃತವಾಗಿಲ್ಲ.
ಜಿಲ್ಲಾ ಚುನಾವಣಾಧಿಕಾರಿ ವಿಪುಲ್ ಬನ್ಸಲ್ ಅವರ ಸಮ್ಮುಖದಲ್ಲಿ ಗುರುವಾರ ಬೆಳಗ್ಗೆ ನಾಮಪತ್ರ ಪರಿಶೀಲನೆ ಕಾರ್ಯ ನಡೆದಿದ್ದು, ಅವರು ಎಲ್ಲಾ ನಾಮಪತ್ರಗಳನ್ನು ಅಂಗೀಕರಿಸಿದರು.
ಈ ಸಂದರ್ಭದಲ್ಲಿ ಸಂಯುಕ್ತ ಜನತಾದಳ ಬಂಡಾಯ ಅಭ್ಯರ್ಥಿ ಶಿವರುದ್ರಯ್ಯ ಸ್ವಾಮಿ ಅವರು ಯಡಿಯೂರಪ್ಪ ಅವರ ನಾಮಪತ್ರದ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದರು. ಯಡಿಯೂರಪ್ಪ ಅವರು ಇಂದಿಗೂ ಕರ್ನಾಟಕ ಜನತಾ ಪಕ್ಷದ ಶಾಸಕರಾಗಿದ್ದಾರೆ. ಹಾಗಾಗಿ ಅವರನ ನಾಮಪತ್ರ ತಿರಸ್ಕರಿಸಬೇಕು ಎಂದು ಪ್ರಸ್ತಾಪಿಸಿದರು. ಇದಕ್ಕೆ ಪ್ರತ್ಯುತ್ತರಿಸಿದ ಬಿಜೆಪಿ ಪರ ವಕೀಲ ಅನಂತಶಾಸ್ತ್ರಿ, ಇದು ಸರಿ ಅಲ್ಲ. ಯಡಿಯೂರಪ್ಪ ಅವರು ಕ್ರಮಬದ್ಧವಾಗಿಯೇ ಸ್ಪೀಕರ್ ಅವರ ಪತ್ರ ನೀಡಿ ಬಿಜೆಪಿ ಸೇರಿದ್ದಾರೆ ಎಂದರು.
ಜಿಲ್ಲಾ ಚುನಾವಣಾಧಿಕಾರಿ ವಿಪುಲ್ ಬನ್ಸಲ್ ಅವರು ಎರಡೂ ವಾದಗಳನ್ನು ಆಲಿಸಿ ಯಡಿಯೂರಪ್ಪ ಅವರ ನಾಮಪತ್ರವನ್ನು ಅಂಗೀಕರಿಸಿರುವುದಾಗಿ ಹೇಳಿದರು. ಇನ್ನು ಬೇರೆ ಯಾವ ನಾಮಪತ್ರಗಳ ಬಗ್ಗೆಯೂ, ಯಾರಿಂದಲೂ ಆಕ್ಷೇಪಣೆ ವ್ಯಕ್ತವಾಗಲಿಲ್ಲ. ನಾಮಪತ್ರ ಹಿಂಪಡೆಯಲು ಮಾ. 29 ಕೊನೆಯ ದಿನವಾಗಿದೆ.