ಬ್ಲಾಕ್ಮೇಲ್ ಮಾಡಿ ಹಣ ವಸೂಲಿ: ತನಿಖೆಗೆ ಆಗ್ರಹ
ಹೊಸನಗರ: ಶ್ರೀರಾಮಚಂದ್ರಾಪುರ ಮಠದ ವಿರುದ್ಧ ಸಾರ್ವಜನಿಕ ಹಿತಾಸಕ್ತಿ ದಾವೆ ಹೂಡಿರುವುದಾಗಿ ಹೇಳಿ ಬ್ಲಾಕ್ ಮೇಲ್ ಮಾಡಿ ಹಣ ವಸೂಲಿಗೆ ಪ್ರಯತ್ನಿಸಿ ಜೈಲು ಸೇರಿದ ಪ್ರಕರಣದಲ್ಲಿ ಆರೋಪಿಗಳ ಹಿಂದೆ ಇರುವ ಜಾಲದ ಕುರಿತು ತನಿಖೆ ನಡೆಯಬೇಕು ಎಂದು ಹವ್ಯಕ ಮಹಾಮಂಡಲದ ಅಧ್ಯಕ್ಷ ವೈ.ವಿ. ಕೃಷ್ಣಮೂರ್ತಿ ಒತ್ತಾಯಿಸಿದ್ದಾರೆ.
ಶ್ರೀಗಳ ತೇಜೋವಧೆಗೆ ನಡೆಸಲಾದ ಈ ಸಂಚಿನಲ್ಲಿ ಗೋಕರ್ಣದ ಹಿತರಕ್ಷಣಾ ಸಮಿತಿ ಎಂದು ಹೇಳಿಕೊಂಡವರ ನೇರ ಭಾಗವಹಿಸುವಿಕೆ ಇದೆ ಎಂಬುದು ಕಾರ್ಯಾಚರಣೆ ವೇಳೆ ಬಯಲಾಗಿದೆ. ಹೀಗೆ ನಿರಂತರ ಪ್ರಕರಣ ಸೃಷ್ಟಿಸುತ್ತಿರುವವರ ಮೇಲೆ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಅವರು ಒತ್ತಾಯಿಸಿದ್ದಾರೆ.
ಆರೋಪಿಗಳಾದ ಮಲ್ಲಿಕಾರ್ಜುನ ಪಾಟೀಲ್ ಮತ್ತು ಚಂದನ್ ನಡೆಸಿದ ಸಂಚು ವಿಫಲವಾಗಿದ್ದು, ಈ ಹಿನ್ನೆಲೆಯಲ್ಲಿ ಪೊಲೀಸ್ ಮತ್ತು ಮಾಧ್ಯಮಗಳ ಸಹಕಾರವನ್ನು ಅಭಿನಂದಿಸುವುದಾಗಿ ಅವರು ತಿಳಿಸಿದರು.
ಆರೋಪಿ ಚಂದನ್ ನಡೆಸುತ್ತಿರುವ ಅಸ್ತ್ರ ಎಂಬ ಎನ್ಜಿಒವನ್ನು ನಿರ್ಬಂಧಗೊಳಿಸಿ ಅದಕ್ಕೆ ಬರುತ್ತಿರಬಹುದಾದ ಎಲ್ಲಾ ಹಣಕಾಸು ನೆರವುಗಳನ್ನು ಸ್ಥಗಿತಗೊಳಿಸಬೇಕು ಮತ್ತು ಈ ಸಂಸ್ಥೆಯ ಬಗ್ಗೆ ತನಿಖೆ ನಡೆಸಬೇಕು ಎಂದು ಅವರು ಒತ್ತಾಯಿಸಿದರು.
ನಿಜ ಬಣ್ಣ ಬಯಲು: ಪಿಐಎಲ್ನಂಥ ಗೌರವಾನ್ವಿತ ವ್ಯವಸ್ಥೆಯನ್ನು ಹೀನಾಯ ಸ್ಥಿತಿಗೆ ತರುವ ಇಂಥ ಸಮಾಜದ್ರೋಹಿ ಕಾರ್ಯಕರ್ತರು ಒಟ್ಟಾರೆ ವ್ಯವಸ್ಥೆಗೆ ಅಪಾಯಕಾರಿಗಳಾಗಿದ್ದಾರೆ. ಆರೋಪಿ ಚಂದನ್ ಎಮ್.ಸಿ. ಅತ್ಯಾಚಾರದಂಥ ಪ್ರಕರಣಗಳಲ್ಲೂ ಭಾಗಿಯಾಗಿದವರ ಜೊತೆ ಸೇರಿ ಗೋಕರ್ಣ ಹಿತರಕ್ಷಣಾ ಸಮಿತಿ ನಡೆಸಿದ ಷಡ್ಯಂತ್ರ ಅದರ ನಿಜ ಬಣ್ಣ ಬಯಲು ಮಾಡಿದೆ ಎಂದು ಅವರು ಹೇಳಿದರು.
2010ರಲ್ಲಿ ಸ್ವಾಮೀಜೀಯವರ ಬಗ್ಗೆ ನಕಲಿ ಸಿ.ಡಿ ತಯಾರಿಸಿ ಅದರಲ್ಲಿ ಅಶ್ಲೀಲ ಕೃತ್ರಿಮ ಹಾಗೂ ಕೃತಕ ಚಿತ್ರ ತಯಾರಿಸಿ, ಗುರುಗಳ ಹಾಗೂ ಮಠದ ತೇಜೋವಧೆ ಮಾಡಲು ಯತ್ನಿಸಿದ ಪ್ರಕರಣ ಬಯಲಾಗಿ ಆರೋಪಿಗಳು ಜೈಲು ಸೇರಿದ್ದರು. ಇತ್ತೀಚೆಗೆ ಗೋಕರ್ಣದಲ್ಲಿ ಮಹಾರಥದ ಕೀಲು ತಪ್ಪಿಸುವ ಕೆಲಸ ನಡೆಯಿತು. ಈ ಎಲ್ಲಾ ಪ್ರಕರಣಗಳ ಹಿಂದೆ ಇರುವ ಈ ಸಮಿತಿಯ ಕೃತ್ಯ ಇದೆ. ತನಿಖೆಯಿಂದ ಅದನ್ನು ಬಯಲು ಮಾಡಬೇಕು ಎಂದು ಅವರು ತಿಳಿಸಿದರು.
ರಕ್ಷಣೆಗೆ ಒತ್ತಾಯ: ಶ್ರೀ ರಾಮಚಂದ್ರಾಪುರ ಮಠದ ವಿರುದ್ಧ ಬ್ಲಾಕ್ಮೇಲ್ ನಡೆಸಿ ಬಂಧಿತರಾದ ಆರೋಪಿಗಳ ವಿರುದ್ಧ ಕಾರ್ಯಾಚರಣೆ ನಡೆಸಿದ ಶ್ರೀಗಳ ಆಪ್ತ ಕಾರ್ಯದರ್ಶಿ ಮೋಹನ ಭಾಸ್ಕರ ಹೆಗಡೆ ಮತ್ತು ನ್ಯಾಯವಾದಿ ಅರುಣ್ ಶ್ಯಾಂ ಅವರಿಗೆ ಸರಕಾರ ಪೊಲೀಸ್ ರಕ್ಷಣೆ ಒದಗಿಸಬೇಕು ಎಂದು ಆಗ್ರಹಿಸಿದ ಅವರು, ಕಾರ್ಯಾಚರಣೆ ನಡೆಸಿದ ಈ ಇಬ್ಬರ ವಿರುದ್ಧ ಪ್ರಕರಣದಲ್ಲಿ ಭಾಗಿಯಾಗಿರುವ ಕ್ರಿಮಿನಲ್ ಜಾಲ ಕಣ್ಣಿಟ್ಟಿದ್ದು, ಅವರ ಜೀವಕ್ಕೆ ಅಪಾಯ ತಂದೊಡ್ಡುವ ಸಾಧ್ಯತೆ ಇದೆ. ಆದ್ದರಿಂದ ಸರಕಾರ ಕೂಡಲೇ ಇಬ್ಬರಿಗೂ ರಕ್ಷಣೆ ಒದಗಿಸಬೇಕು ಎಂದು ಆಗ್ರಹಿಸಿದ್ದಾರೆ.
ಭಾನುವಾರವೂ ಪಹಣಿ ಲಭ್ಯ
ಹೊಸನಗರ: ರೈತರ ಅನುಕೂಲಕ್ಕಾಗಿ ಮಾ.30ರ ಭಾನುವಾರವೂ ಪಹಣಿ ವಿತರಣಾ ಕೇಂದ್ರದಲ್ಲಿ ಪಹಣಿ ವಿತರಿಸಲಾಗುವುದು, ರೈತರು ಅದರ ಪ್ರಯೋಜನವನ್ನು ಪಡೆದುಕೊಳ್ಳಬಹುದು ಎಂದು ತಹಸೀಲ್ದಾರ್ ಸಿ.ಎಂ. ಕುಲಕರ್ಣಿ ತಿಳಿಸಿದ್ದಾರೆ.
ಮಾರ್ಚ್ ಅಂತ್ಯದೊಳಗೆ ಸಹಕಾರಿ ಸಂಘ ಮತ್ತು ಬ್ಯಾಂಕ್ ವ್ಯವಹಾರಕ್ಕೆ ಪಹಣಿ ಅತ್ಯಗತ್ಯವಾಗಿರುವುದರಿಂದ ಕಳೆದ 15 ದಿನಗಳಿಂದ ಒಮ್ಮೆಲೆ ಪಹಣಿ ಕೇಂದ್ರಗಳಲ್ಲಿ ಒತ್ತಡ ಉಂಟಾಗಿತ್ತು. ಸರತಿ ಸಾಲಿನಲ್ಲಿ ನಿಂತು ರೈತರು ಪಹಣಿಗೆ ಪರದಾಡಿರುವುದನ್ನು ಗಮನಿಸಿ ಈ ಕ್ರಮ ಕೈಗೊಳ್ಳಲಾಗಿದೆ ಎಂದರು.
ಮಾ.31ರಂದು ಯುಗಾದಿ ಹಬ್ಬದ ಪ್ರಯುಕ್ತ ಸರಕಾರಿ ರಜೆ ಇರುತ್ತದೆ. ಹಾಗಾಗಿ ರೈತರಿಗೆ ಅನಾನುಕೂಲವಾಗಬಾರದೆನ್ನುವ ಕಾಳಜಿಯಿಂದ ಮುನ್ನ ದಿನವಾದ ಮಾ.30ರಂದು ಕೇಂದ್ರ ತೆರೆಯಲಾಗುತ್ತಿದೆ.
ತಾಲೂಕಿನ ಎಲ್ಲ ಹೋಬಳಿ ಕೇಂದ್ರಗಳಲ್ಲಿ ಅಲ್ಲಿನ ನಾಡಕಚೇರಿಗಳಲ್ಲಿ ಅಂದು ಪಹಣಿ ಲಭ್ಯವಿರುತ್ತದೆ ಎಂದು ತಿಳಿಸಿದ್ದಾರೆ.