ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಶಿವಮೊಗ್ಗ

'ಭಾರಿ ಬಹುಮತದಿಂದ ಬಿಎಸ್‌ವೈ ಗೆಲ್ಲಿಸುತ್ತೇವೆ'

Lingaraj Badiger
Updated On : 28 Mar 2014, 12:23 pm

ಕ.ಪ್ರ.ವಾರ್ತೆ, ಶಿವಮೊಗ್ಗ, ಮಾ.27
ಬಿಜೆಪಿಯಿಂದ ಮುನಿಸಿಕೊಂಡು, ಜೆಡಿಎಸ್ ಕದ ತಟ್ಟಿ, ಅಲ್ಲಿಯೂ ಏಳಿಗೆಯಾಗದೆ ಮತ್ತೆ ಬಿಜೆಪಿಗೆ ವಾಪಸ್ಸಾದ ಮಾಜಿ ಶಾಸಕ ಬೇಳೂರು ಗೋಪಾಲಕೃಷ್ಣ ಅವರಿಗೆ ಗುರುವಾರ ಬಿಜೆಪಿ ಕಚೇರಿಯಲ್ಲಿ ಹಾರ್ದಿಕವಾಗಿ ಸ್ವಾಗತಿಸಲಾಯಿತು.
ಈ ಸಂದರ್ಭದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ ಅವರು, ಪಕ್ಷದಲ್ಲಿನ ಕೆಲ ವ್ಯತ್ಯಾಸಗಳಿಂದ ಬಿಜೆಪಿ ತೊರೆದಿದ್ದೆ. ಜೆಡಿಎಸ್ ರಾಜ್ಯ ನಾಯಕರು ಅವಕಾಶ ನೀಡಿದ್ದರು. ಆದರೆ ಸ್ಥಳೀಯ ನಾಯಕರಿಂದ ಉತ್ತಮ ಸ್ಪಂದನೆ ಸಿಗಲಿಲ್ಲ. ಬಿಜೆಪಿಗೆ ಸೇರುವುದಾಗಿ ಹೇಳಿದಾಗ ಉತ್ತಮ ಸ್ಪಂದನೆ ಸಿಕ್ಕಿತು ಎಂದರು.
ದೇಶದ ಹಿತದೃಷ್ಟಿಯಿಂದ ಮೋದಿ ಅವರನ್ನು ಪ್ರಧಾನಿ ಮಾಡಲು ಯುವಜನತೆ ಪಣ ತೊಟ್ಟಿದ್ದಾರೆ. ಅದಕ್ಕಾಗಿ ಬಿಜೆಪಿ ಸೇರುತ್ತಿದ್ದೇನೆ. ಮತ್ತೆ ಯಾವ ಕಾರಣಕ್ಕೂ ಬಿಜೆಪಿ ತೊರೆಯುವುದಿಲ್ಲ. ಪಕ್ಷದ ಜಿಲ್ಲಾ ಸಮಿತಿ ಹಾಗೂ ರಾಜ್ಯ ಸಮಿತಿ ಮುಖಂಡರು ತಾವು ಬಿಜೆಪಿ ಸೇರುವುದಕ್ಕೆ ತುಂಬು ಮನಸಿನ ಒಪ್ಪಿಗೆ ಸೂಚಿಸಿದ್ದಾರೆ. ಮೋದಿ ಪ್ರಧಾನಿ ಮಾಡುವುದು ನಮ್ಮ ಗುರಿ. ಅದಕ್ಕಾಗಿ ಯಡಿಯೂರಪ್ಪ ಅವರನ್ನು ಗೆಲ್ಲಿಸಲು ಶ್ರಮಿಸುತ್ತೇನೆ. ಯಾವುದೇ ಷರತ್ತು ವಿಧಿಸದೆ ಪಕ್ಷ ಸೇರಿದ್ದೇನೆ ಎಂದರು.
ಬಿಜೆಪಿ ಅಭ್ಯರ್ಥಿ ಬಿ.ಎಸ್. ಯಡಿಯೂರಪ್ಪ ಅವರನ್ನು ಭಾರಿ ಬಹುಮತದಿಂದ ಗೆಲ್ಲಿಸುತ್ತೇನೆ ಎಂದಿರುವ ಅವರು, ಪಕ್ಷದಿಂದ ದೂರವಾದವರನ್ನು ಬಿಜೆಪಿ ಮುಖಂಡರು ಒಂದುಗೂಡಿಸುತ್ತಿದ್ದಾರೆ. ವಿವಿಧ ಕಾರಣಗಳಿಂದ ಬೇರೆಯಾದವರು ಪಕ್ಷ ಸೇರುತ್ತಿರುವುದು ಪಕ್ಷಕ್ಕೆ ಶಕ್ತಿ ತಂದಿದೆ ಎಂದರು.
ನಿಷ್ಕ್ರಿಯ: ಜಿಲ್ಲೆಯ ರಾಜಕಾರಣ ನಿಷ್ಕ್ರಿಯವಾಗಿದೆ. ಸಚಿವರು, ಶಾಸಕರು ಜನರ ಸಮಸ್ಯೆಗೆ ಸ್ಪಂದಿಸುತ್ತಿಲ್ಲ. ಸಚಿವರು, ಶಾಸಕರು ಜನರಿಗೆ ಸ್ಪಂದಿಸುತ್ತಿಲ್ಲ. ಸಾಗರವನ್ನು ಅಭಿವೃದ್ಧಿ ಮಾಡುವುದಾಗಿ ಹೇಳಿ ಗೆದ್ದ ಕಾಗೋಡು ತಿಮ್ಮಪ್ಪ ಅಭಿವೃದ್ಧಿ ಮಾಡುವುದಿರಲಿ, ಜನರನ್ನು ಸೌಜನ್ಯದಿಂದ ಮಾತನಾಡಿಸುತ್ತಿಲ್ಲ ಎಂದು ಬೇಳೂರು ಟೀಕಿಸಿದರು.
ಕುಮಾರ್ ಬಂಗಾರಪ್ಪ ಅವರಿಗೆ ಕಾಗೋಡು ತಿಮ್ಮಪ್ಪ ಅವರೇ ಕಾಂಗ್ರೆಸ್ ಟಿಕೆಟ್ ತಪ್ಪಿಸಿದ್ದಾರೆ ಎಂದು ಆ ಪಕ್ಷದ ಮುಖಂಡರೇ ಮಾತನಾಡುತ್ತಿದ್ದಾರೆ. ನಮಗೆ ಎದುರಾಳಿ ಕಾಂಗ್ರೆಸ್ ಅಲ್ಲ, ಜೆಡಿಎಸ್. ಸ್ಟಾರ್ ಪ್ರಚಾರಕರು ನಮ್ಮ ಪಕ್ಷದಲ್ಲೂ ಇದ್ದಾರೆ. ಅವರು ಪ್ರಚಾರಕ್ಕೆ ಬರುತ್ತಾರೆ ಎಂದರು.
ಕ್ಷೇತ್ರದಲ್ಲಿ ಕೆಲವರು ಜಾತಿ ಆಧಾರಿತ ಚುನಾವಣೆ ನಡೆಸಲು ಮುಂದಾಗಿದ್ದಾರೆ. ರಾಜಕಾರಣಕ್ಕೆ ಎಲ್ಲಾ ಜಾತಿಯವರೂ ಮುಖ್ಯ. ಪಕ್ಷ ಮತ್ತು ವಿಷಯ ಆಧಾರಿತ ಚುನಾವಣೆ ನಡೆಸಬೇಕೇ ಹೊರತು ಜಾತಿಯಿಂದಲ್ಲ ಎಂದು ಹೇಳಿದರು.
ಹತಾಷರಲ್ಲ: ಜಿಲ್ಲಾ ಪ್ರಧಾನ ಕಾರ್ಯದರ್ಶಿ ದತ್ತಾತ್ರಿ, ಯಡಿಯೂರಪ್ಪ ಅವರು ಹತಾಶೆಯಿಂದ ಮತಯಾಚಿಸುತ್ತಿದ್ದಾರೆ ಎಂದು ಹೇಳಿರುವುದು ಸರಿ ಅಲ್ಲ. ಮಧು ಬಂಗಾರಪ್ಪ ಅವರ ವಯಸ್ಸಿಗಿಂತ ಹೆಚ್ಚು ರಾಜಕೀಯ ಅನುಭವ ಯಡಿಯೂರಪ್ಪ ಅವರಿಗಿದೆ. ಯಡಿಯೂರಪ್ಪ ಅವರು ತಂದೆ ಹೆಸರಿನಿಂದ ಬೆಳೆದವರಲ್ಲ ಎಂದು ಕುಟುಕಿದರು.
ಮುಖಂಡರಾದ ಎಸ್.ಎನ್. ಚನ್ನಬಸಪ್ಪ, ಬಿ.ಆರ್. ಮಧುಸೂದನ್, ಕೆ.ವಿ. ಅಣ್ಣಪ್ಪ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement