'ಮೌಲ್ಯಾಧಾರಿತ ರಾಜಕಾರಣ ಮರುಸ್ಥಾಪನೆ ಜೆಡಿಯು ಉದ್ದೇಶ'
ಸಾಗರ: ರಾಮಕೃಷ್ಣ ಹೆಗಡೆ ಅವರ ಕಾಲದ ಮೌಲ್ಯಾಧಾರಿತ ರಾಜಕಾರಣದ ಮರುಸ್ಥಾಪನೆ ಜೆಡಿಯು ಉದ್ದೇಶವಾಗಿದೆ. ಜೆಡಿಯು ಈ ಬಾರಿ ಹಣ- ಹೆಂಡ ಹಂಚುವವರ ವಿರುದ್ಧವಾಗಿ ಸ್ಪರ್ಧಿಸಿದ್ದು, ಮತದಾರರು ನಮ್ಮನ್ನು ಪುರಸ್ಕರಿಸುತ್ತಾರೆ ಎನ್ನುವ ವಿಶ್ವಾಸವಿದೆ ಎಂದು ಪಕ್ಷದ ರಾಜ್ಯ ಕಾರ್ಯದರ್ಶಿ ಲೋಕಪಾಲ ಜೈನ್ ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಗುರುವಾರ ಮಾತನಾಡಿ, ರಾಜ್ಯದಲ್ಲಿ ಜೆಡಿಯು ಸಣ್ಣ ಪಕ್ಷವಾಗಿದ್ದರೂ, ದೇಶದಲ್ಲಿ ಪಕ್ಷವು ಸುಭದ್ರವಾಗಿದೆ ಎಂದರು.
ಇತ್ತೀಚಿನ ದಿನಗಳಲ್ಲಿ ದೇಶದ ಜನ ಅರಾಜಕತೆ, ಭ್ರಷ್ಟಾಚಾರದಿಂದ ಬೇಸತ್ತು ಹೋಗಿದ್ದಾರೆ. ಬದಲಾವಣೆ ಬಯಸುವ ಹಾಗೂ ರಾಜಕೀಯದ ಮೌಲ್ಯ ಕಾಪಾಡುವ ನಿಟ್ಟಿನಲ್ಲಿ ಜೆಡಿಯುಗೆ ಜನಬೆಂಬಲ ವ್ಯಕ್ತವಾಗುತ್ತಿದೆ. ಕೇಂದ್ರದಲ್ಲಿ ಮೈತ್ರಿಕೂಟ ಸರ್ಕಾರ ರಚನೆಯಾಗುವ ಸಾಧ್ಯತೆ ಇದ್ದು, ಜೆಡಿಯು ಪ್ರಮುಖ ಪಾತ್ರ ವಹಿಸಲಿದೆ ಎಂದರು.
ರಾಜ್ಯದಲ್ಲಿ ಜೆಡಿಯು 6 ಕ್ಷೇತ್ರಗಳಲ್ಲಿ ಜಯ ಗಳಿಸುವ ವಿಶ್ವಾಸವಿದೆ. 1967ರಲ್ಲಿ ಜೆ.ಎಚ್. ಪಟೇಲ್ ಜಿಲ್ಲೆಯಲ್ಲಿದ್ದ ಕಾಂಗ್ರೆಸ್ ಅಸ್ತಿತ್ವ ಮುರಿದಿದ್ದರು. ಅದೇ ಸನ್ನಿವೇಶ ಈ ಬಾರಿಯ ಚುನಾವಣೆಯಲ್ಲಿ ಮರುಕಳಿಸಲಿದ್ದು, ನಮ್ಮ ಅಭ್ಯರ್ಥಿ ಬಿ. ಧರ್ಮಪ್ಪ ಗೆಲವು ಸಾಧಿಸುವ ಸಾಧ್ಯತೆ ನಿಚ್ಚಳವಾಗಿದೆ. ಶಿವಮೊಗ್ಗ ಜಿಲ್ಲೆಯ ಪ್ರಜ್ಞಾವಂತ ಜನರು ಜೈಲಿಗೆ ಹೋಗಿ ಬಂದು ಮತಯಾಚನೆ ಮಾಡುವವರಿಗೆ ಮತ ನೀಡುವುದಿಲ್ಲ ಎಂದರು.
ಮಾಜಿ ಸಚಿವ ಕುಮಾರ ಬಂಗಾರಪ್ಪ ಅವರನ್ನು ನಾವು ಜೆಡಿಯುಗೆ ಆಹ್ವಾನಿಸಿಲ್ಲ. ನಮ್ಮ ಪಕ್ಷದಲ್ಲಿ ಲೋಕಸಭೆಗೆ ಸ್ಪರ್ಧಿಸುವ ಅಭ್ಯರ್ಥಿಗಳು ಇರುವಾಗ ಅವರನ್ನು ಕರೆತರುವ ಅಗತ್ಯ ಸಹ ನಮಗೆ ಇಲ್ಲ. ಪಕ್ಷದಲ್ಲಿ ಸ್ಥಾನಮಾನ ಸಿಗದೆ ಇದ್ದಾಗ ಬ್ಲಾಕ್‌ಮೇಲ್ ರಾಜಕಾರಣಿಗಳಿಗೆ ಸಣ್ಣ- ಪುಟ್ಟ ಪಕ್ಷಗಳು ನೆನಪಾಗುತ್ತದೆ. ಆ ಕೆಲಸ ಕುಮಾರ್ ಬಂಗಾರಪ್ಪ ಮಾಡಿದ್ದಾರೆ ಎಂದರು.
ಗೋಷ್ಠಿಯಲ್ಲಿ ರಾಜ್ಯ ಸಂಚಾಲಕ ಜಯಪ್ರಕಾಶ್, ಪಕ್ಷದ ವಕ್ತಾರ ನಟರಾಜ ಕಾನುಗೋಡು, ನಾಗರಾಜ, ಮಂಡಾಲಿ ನಾಗಪ್ಪ ಹಾಜರಿದ್ದರು.