'ಸ್ಪರ್ಧಾತ್ಮಕ ಪ್ರಪಂಚದಲ್ಲಿ ಪೈಪೋಟಿ ಅನಿವಾರ್ಯ'
ಸೊರಬ: ಜಾಗತೀಕರಣದಿಂದಾಗಿ ತಂತ್ರಜ್ಞಾನ ನಾಗಾಲೋಟದಲ್ಲಿದ್ದು, ಗ್ರಾಮೀಣ ಪ್ರದೇಶದ ಮಕ್ಕಳು ಸ್ಪರ್ಧಾತ್ಮಕ ಪ್ರಪಂಚಕ್ಕೆ ಹೊಂದಿಕೊಳ್ಳುವುದು ಅನಿವಾರ್ಯವಾಗಿದೆ ಎಂದು ದೈಹಿಕ ಶಿಕ್ಷಕ ಎಚ್.ಆರ್. ಈಶ್ವರಪ್ಪ ಹೇಳಿದರು.
ತಾಲೂಕಿನ ಬಿಳವಾಣಿ ಗ್ರಾಮದ ಶ್ರೀ ವೀರಭದ್ರೇಶ್ವರ ಗ್ರಾಮಾಂತರ ಪ್ರೌಢಶಾಲೆಯಲ್ಲಿ ಎಸ್‌ಡಿಎಂಸಿ ಹಾಗೂ ಶಿಕ್ಷಕ ವೃಂದದವರು ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಹಮ್ಮಿಕೊಂಡಿದ್ದ ಸನ್ಮಾನ ಸಮಾರಂಭದಲ್ಲಿ ಮಾತನಾಡಿದರು.
ಈ ನಿಟ್ಟಿನಲ್ಲಿ ಗ್ರಾಮಾಂತರ ಪ್ರದೇಶದ ಮಕ್ಕಳಿಗೆ ಅಗತ್ಯ ಸೌಲಭ್ಯಗಳ ಅವಶ್ಯಕತೆ ಇದ್ದು, ಸಂಘ ಸಂಸ್ಥೆಗಳು ಹಾಗೂ ಸರ್ಕಾರ ಖಾಸಗಿ ಶಾಲೆಗಳಿಗೆ ಹೆಚ್ಚಿನ ನೆರವು ನೀಡಬೇಕು ಎಂದರು.
ಕ್ರೀಡಾಪಟುಗಳಿಗೆ ಪ್ರೋತ್ಸಾಹ ನೀಡಲು ಕ್ರೀಡಾಶಾಲೆಗಳನ್ನು ತೆರೆದಿದೆ. ಇದರ ಸದುಪಯೋಗವನ್ನು ಗ್ರಾಮೀಣ ಮಕ್ಕಳು ಪಡೆಯಬೇಕು ಎಂದರು.
ಈ ಸಂದರ್ಭದಲ್ಲಿ ಖೋ-ಖೋ ಪಂದ್ಯಾವಳಿಯಲ್ಲಿ ರಾಷ್ಟ್ರಮಟ್ಟದಲ್ಲಿ ಭಾಗವಹಿಸಿ, ಬೆಳ್ಳಿ ಪದಕ ಗಳಿಸಿದ ವಿದ್ಯಾರ್ಥಿನಿ ಯು.ಕೆ. ಮೋನಿಷಾ, ವೈ.ಎಸ್. ಶೋಭಾ ಅವರನ್ನು ಸನ್ಮಾನಿಸಿ, ಪ್ರೋತ್ಸಾಹ ಧನ ನೀಡಲಾಯಿತು.
ಮುಖ್ಯ ಶಿಕ್ಷಕ ಆರ್. ಹಿರಣ್ಯಪ್ಪ ಅಧ್ಯಕ್ಷತೆ ವಹಿಸಿದ್ದರು. ಶಿಕ್ಷಕರಾದ ಎಚ್.ಜಿ. ಗಣಪತಿ, ಎಂ. ಪ್ರಭುದೇವ, ಬಿ.ಎಚ್. ರೇವಣಪ್ಪ, ಎಚ್.ಆರ್. ಪ್ರಕಾಶ್, ಎಸ್.ಎಚ್. ಶಿವಪುತ್ರಪ್ಪ, ಟಿ.ಎಚ್. ಗಿಡ್ಡಪ್ಪ, ಫಯಾಜ್, ಸಿಬ್ಬಂದಿಗಳಾದ ರಫಿಕ್, ಶಶಿಧರ, ಮಂಜುನಾಥ ಇದ್ದರು.
--