'ಈಡಿಗ ಮತಗಳು ಬಂಗಾರಪ್ಪ ಕುಟುಂಬಕ್ಕೆ ಸೀಮಿತವಲ್ಲ'
ತ್ಯಾಗರ್ತಿ: ಈಡಿಗ ಸಮುದಾಯದ ಮತಗಳು ಬಂಗಾರಪ್ಪ ಕುಟುಂಬಕ್ಕೆ ಮಾತ್ರ ಸೀಮಿತವಲ್ಲ ಎಂದು ಶಿವಮೊಗ್ಗ ಲೋಕಸಭಾ ಕ್ಷೇತ್ರದ ಸಂಯುಕ್ತ ಜನತಾದಳ ಅಭ್ಯರ್ಥಿ ಧರ್ಮಪ್ಪ ಹೇಳಿದ್ದಾರೆ.
ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜಿಲ್ಲೆಯ ಸಮಸ್ಯೆಯ ಅರಿವಿಲ್ಲದ ಬಂಗಾರಪ್ಪ ಕುಟುಂಬಸ್ಥರು ಅನುಕಂಪದ ಮತ ಪಡೆಯಲು ಅವರ ಮಗಳನ್ನು ಅಭ್ಯರ್ಥಿಯನ್ನಾಗಿಸಿರುವುದು ನಾಚಿಕೆಗೇಡು. ಅದೇ ರೀತಿ, ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪನವರು ಸಹ ತಮ್ಮ ಮಕ್ಕಳಿಗೆ ಅಧಿಕಾರ ನೀಡುವ ಬಗ್ಗೆ ಗಮನ ಕೇಂದ್ರೀಕರಿಸಿ ಕಾಲಹರಣ ಮಾಡಿದರು. ಅಭಿವೃದ್ಧಿಯ ಹೆಸರಿನಲ್ಲಿ ಜಾತಿ ಬಾಂಧವರು ಮತ್ತು ಎಲ್ಲಾ ಮಠಗಳಿಗೆ ಹಣ ನೀಡಿ ಇತರ ಹಿಂದುಳಿದ ಗ್ರಾಮಗಳ ನೈಜ ಸಮಸ್ಯೆ ಬಗೆಹರಿಸಲು ಆಸಕ್ತಿ ತೋರಿಸಲಿಲ್ಲ ಎಂದು ಟೀಕಿಸಿದರು.
ಆಚಾಪುರ ಗ್ರಾಪಂ ಮಾಜಿ ಅಧ್ಯಕ್ಷ ಪ್ರಕಾಶ ತಂಗಳವಾಡಿ, ಗಿಳಾಲಗುಂಡಿ ಮಂಡಲ ಪಂಚಾಯ್ತಿ ಮಾಜಿ ಅಧ್ಯಕ್ಷ ಲಕ್ಷ್ಮಣ, ಜೆಡಿಯು ಮುಖಂಡರಾದ ಲೋಕಪಾಲಜೈನ್, ಜಯ ಪ್ರಕಾಶ, ನಟರಾಜ ಸಾಗರ, ಸತ್ಯನಾರಾಯಣ, ಫಲಿತ್‌ಕುಮಾರ್ ತಂಗಳವಾಡಿ ಇನ್ನಿತರರಿದ್ದರು.