ಚಿಕ್ಕಪ್ಪನ ಕೊಂದವಗೆ ಜೀವಾವಧಿ
ಬೆಂಗಳೂರು: ಆಸ್ತಿ ವಿವಾದಕ್ಕೆ ಸಂಬಂಧಿಸಿದಂತೆ ತನ್ನ ಚಿಕ್ಕಪ್ಪನನ್ನೇ ಕೊಲೆ ಮಾಡಿದ ಆರೋಪಿಗೆ ಹೈಕೋರ್ಟ್ ಜೀವಾವಧಿ ಶಿಕ್ಷೆ ವಿಧಿಸಿದೆ.
ಆರೋಪಿಯನ್ನು ಖುಲಾಸೆಗೊಳಿಸಿದ್ದ ಅಧೀನ ನ್ಯಾಯಾಲಯದ ಆದೇಶ ಪ್ರಶ್ನಿಸಿ ಸರ್ಕಾರ ಸಲ್ಲಿಸಿದ್ದ ಮೇಲ್ಮನವಿ ವಿಚಾರಣೆ ನಡೆಸಿದ ನ್ಯಾ. ಭಕ್ತವತ್ಸಲ ಹಾಗೂ ನ್ಯಾ.ಕೆಂಪಣ್ಣ ಅವರಿದ್ದ ವಿಭಾಗೀಯ ಪೀಠ, ಈ ಆದೇಶ ನೀಡಿದೆ.
ತನ್ನ ಚಿಕ್ಕಪ್ಪನನ್ನು ದೊಣ್ಣೆ ಹಾಗೂ ಕೊಡಲಿಯಿಂದ ಹೊಡೆದು ಸಾಯಿಸಿದ ಆರೋಪದ ಮೇಲೆ ಬಂಧಿತನಾಗಿದ್ದ 19 ವರ್ಷದ ಗಿರೀಶ್ ಎಂಬಾತನನ್ನು ಸಾಕ್ಷ್ಯಾಧಾರಗಳ ಕೊರತೆ ಹಿನ್ನೆಲೆಯಲ್ಲಿ ಅಧೀನ ನ್ಯಾಯಾಲಯ ಬಿಡುಗಡೆಗೊಳಿಸಿತ್ತು. ಆದರೆ, ಹತ್ಯೆಗೆ ಸಂಬಂಧಿಸಿದಂತೆ ಪ್ರತ್ಯಕ್ಷ ಸಾಕ್ಷಿಯಾಗಿರುವ ಮೃತನ ಪತ್ನಿಯ ಹೇಳಿಕೆಯ ಆಧಾರದ ಮೇಲೆ ಆರೋಪ ಸಾಭೀತುಗೊಂಡಿದ್ದು ನ್ಯಾಯಪೀಠ ಅಪರಾಧಿಗೆ ಜೀವಾವಧಿ ಶಿಕ್ಷೆ ವಿಧಿಸಿದೆ.
ಪ್ರಕರಣದ ಹಿನ್ನೆಲೆ: ಜಮೀನು ವಿವಾದಕ್ಕೆ ಸಂಬಂಧಿಸಿದಂತೆ ಶಿವಮೊಗ್ಗದ ಗುಡ್ಡೆಕಲ್ಲಿನ ಗಿರೀಶ್ ಜಮೀನಿನಲ್ಲಿ ಕೆಲಸ ಮಾಡುತ್ತಿದ್ದ ತನ್ನ ಚಿಕ್ಕಪ್ಪ ಗುರುರಾಜ್ ಎಂಬುವರನ್ನು 2006ರ ಫೆಬ್ರವರಿಯಲ್ಲಿ ಕೊಡಲಿ ಹಾಗೂ ದೊಣ್ಣೆಯಿಂದ ಹೊಡೆದು ಸಾಯಿಸಿದ್ದನು. ನಂತರ ಅವುಗಳನ್ನು ನೀರಿನಿಂದ ತೊಳೆದಿದ್ದನ್ನು. ಈ ಹಿನ್ನೆಲೆಯಲ್ಲಿ ನ್ಯಾಯಾಲಯಕ್ಕೆ ಸಾಕ್ಷ್ಯಾಧಾರಗಳು ಲಭ್ಯವಾಗಿರಲಿಲ್ಲ.
ಆದ್ದರಿಂದ ಆರೋಪಿಗಳು ಖುಲಾಸೆಯಾಗಿದ್ದರು. ಇದನ್ನು ಪ್ರಶ್ನಿಸಿ ಸರ್ಕಾರ ಮೇಲ್ಮನವಿ ಸಲ್ಲಿಸಿತ್ತು.