ಮಧು ವಿರುದ್ಧ ಬೀದಿಗಿಳಿದ ಕುಮಾರ
ಶಿವಮೊಗ್ಗ: ಮಾಜಿ ಸಚಿವ, ಕಾಂಗ್ರೆಸ್ ಮುಖಂಡ ಕುಮಾರ್ ಬಂಗಾರಪ್ಪ ಅವರು ತಮ್ಮ ಮಧು ಬಂಗಾರಪ್ಪ ಅವರ ವಿರುದ್ಧ ಸಮರ ಸಾರಿದ್ದಾರೆ. ನಗರಕ್ಕೆ ದಿಢೀರನೇ ಆಗಮಿಸಿದ ಅವರು ಶರಾವತಿ ಡೆಂಟಲ್ ಕಾಲೇಜಿನ ಎದುರು ತಮ್ಮ ಬೆಂಬಲಿಗರೊಂದಿಗೆ ಬೆಳಗಿನಿಂದ ಮಧ್ಯಾಹ್ನದವರೆಗೆ ಪ್ರತಿಭಟನೆ ನಡೆಸಿಯೇ ಬಿಟ್ಟರು. ಇದೂವರೆಗೆ ನಾಲ್ಕು ಗೋಡೆಗಳ ನಡುವೆ, ಇಲ್ಲವೇ ಹೇಳಿಕೆ- ಪ್ರತಿ ಹೇಳಿಕೆಗೆ ಸೀಮಿತವಾಗಿದ್ದ ಸಮರ ಈ ಪ್ರತಿಭಟನೆಯೊಂದಿಗೆ ಬೀದಿಗೆ ಬಂದಿತು.
ಕುಮಾರ್ ಆಕ್ರೋಶಕ್ಕೆ ಕಾರಣವಾಗಿದ್ದು ಶರಾವತಿ ಡೆಂಟಲ್ ಕಾಲೇಜಿಗೆ ಸಂಬಂಧಿಸಿದ ಆಸ್ತಿ ವಿವಾದ. ಈ ಕಾಲೇಜಿನ ಭೂಮಿ ಈಡಿಗ ಸಮುದಾಯಕ್ಕೆ ಸೇರಿದ್ದು, ಮಧು ಬಂಗಾರಪ್ಪ ಅವರು ಅಕ್ರಮವಾಗಿ ಈ ಭೂಮಿಯನ್ನು ಸೈಟುಗಳನ್ನಾಗಿ ಪರಿವರ್ತಿಸಿ ಮಾರಾಟ ಮಾಡಲು ಮುಂದಾಗಿದ್ದಾರೆ ಎಂಬುದು ಅವರ ನೇರ ಆರೋಪ.
ಟ್ರಸ್ಟ್ ಆಸ್ತಿಯನ್ನು ದುರುಪಯೋಗ ಮಾಡಿಕೊಂಡಿರುವ ಈ ಪ್ರಕರಣವನ್ನು ಸರ್ಕಾರ ಕೂಡಲೇ ಸಿಐಡಿ ತನಿಖೆಗೆ ಒಪ್ಪಿಸಬೇಕು ಎಂದು ಕುಮಾರ್ ಬಂಗಾರಪ್ಪ ಒತ್ತಾಯಿಸಿದ್ದು, ಈ ಸಂಬಂಧ ಮುಖ್ಯಮಂತ್ರಿ, ಗೃಹ ಸಚಿವರು, ಕಂದಾಯ ಸಚಿವರು, ಸಹಕಾರ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಿಗೆ ಮನವಿ ಸಲ್ಲಿಸಲಾಗುವುದು ಎಂದಿದ್ದಾರೆ.
ಶರಾವತಿ ಡೆಂಟಲ್ ಕಾಲೇಜು ಸಂರಕ್ಷಣಾ ಸಮಿತಿ ಎಂಬ ಹೆಸರಿನ ವೇದಿಕೆ ಅಡಿಯಲ್ಲಿ ಹಮ್ಮಿಕೊಂಡಿದ್ದ ಪ್ರತಿಭಟನೆಯಲ್ಲಿ ಮಾಜಿ ಶಾಸಕ ಡಾ. ಜಿ.ಡಿ. ನಾರಾಯಣಪ್ಪ, ಸಮಾಜದ ಮುಖಂಡರಾದ ಜೆ. ಶಿವಾನಂದಪ್ಪ, ತಬಲಿ ಬಂಗಾರಪ್ಪ, ಇಕ್ಕೇರಿ ರಮೇಶ್, ಮಂಡಗಳಲೆ ಹುಚ್ಚಪ್ಪ, ಮಹೇಶ್ ಹುಲ್ಮಾರ್, ಹಾಲೇಶ್, ಲೋಲಾಕ್ಷಮ್ಮ, ದಿವಾಕರ್, ಹೊಳೆಕೊಪ್ಪ ಹಾಲಪ್ಪ, ಅಣ್ಣಪ್ಪ, ಚೌಡಪ್ಪ, ಪ್ರಶಾಂತ್ ಸೇರಿದಂತೆ ಹಲವರು ಭಾಗವಹಿಸಿದ್ದರು.
ಆರೋಪವೇನು?: 1991ರಲ್ಲಿ ಈಡಿಗ ಸಮಾಜದ ಮುಖಂಡರು ಶರಾವತಿ ಎಜುಕೇಷನ್ ಟ್ರಸ್ಟ್ ಆರಂಭಿಸಿ ಸಮಾಜದ ಅಭಿವೃದ್ಧಿ ಚಟುವಟಿಕೆ ಆರಂಭಿಸಿದರು. ಗಾಡಿಕೊಪ್ಪದಲ್ಲಿ 85 ಎಕರೆ ಭೂಮಿಯನ್ನು ಟ್ರಸ್ಟಿಗಳ ಹೆಸರಿನಲ್ಲಿ ಖರೀದಿಸಿ ಡೆಂಟಲ್ ಕಾಲೇಜು ಆರಂಭಿಸಿದರು. ಸಾರ್ವಜನಿಕರಿಂದ ದೇಣಿಗೆ ಸಂಗ್ರಹಿಸಿ ಡೆಂಟಲ್ ಕಾಲೇಜು ಕಟ್ಟಡ ನಿರ್ಮಿಸಿ, ವಿದ್ಯಾರ್ಥಿಗಳ ವ್ಯಾಸಂಗಕ್ಕೆ ಅನುಕೂಲವಾಗುವಂತೆ ವೈದ್ಯಕೀಯ ಉಪಕರಣ, ಪೀಠೋಪಕರಣ ಖರೀದಿಸಿ ವ್ಯವಸ್ಥೆ ಮಾಡಲಾಗಿತ್ತು. ಆದರೆ, ಟ್ರಸ್ಟಿನ ಆಸ್ತಿ ಕಬಳಿಸಲು ಮಧು ಬಂಗಾರಪ್ಪ ಅವರು ಮೂಲ ಟ್ರಸ್ಟಿಗಳನ್ನು ಮೂಲೆಗುಂಪು ಮಾಡಿದ್ದಾರೆ. ಟ್ರಸ್ಟ್ ಆಸ್ತಿ ಕಬಳಿಸಲು ಮೂಲ ದಾಖಲಾತಿಗಳನ್ನು ನಾಶ ಮಾಡಿದ್ದಾರೆ. ಸಮಾಜದವರಿಗೆ ದ್ರೋಹ ಬಗೆದಿದ್ದಾರೆ ಎಂದು ಕುಮಾರ್ ಬಂಗಾರಪ್ಪ ಆರೋಪಿಸಿದ್ದಾರೆ.
ನಕಲಿ ದಾಖಲೆ: ಈ ಜಾಗದಲ್ಲಿ ಬಂಗಾರಪ್ಪ ಹಾಗೂ ಡಾ. ರಾಜ್ಕುಮಾರ್ ಅವರ ಹೆಸರಿನಲ್ಲಿ ಸಮುದಾಯ ಭವನ ಕಟ್ಟಲು ತೀರ್ಮಾನಿಸಲಾಗಿತ್ತು. ಸಾರ್ವಜನಿಕ ಬಳಕೆಯ ಆಸ್ಪತ್ರೆ, ಕಾಲೇಜು, ಹಾಸ್ಟೆಲ್ ನಿರ್ಮಾಣಕ್ಕೆ ಮೀಸಲಿಡಲಾಗಿತ್ತು. ಆದ್ದರಿಂದ ಈ ಜಾಗವನ್ನು ಯಥಾಸ್ಥಿತಿಯಲ್ಲಿ ಉಳಿಸಬೇಕೆಂದು ಒತ್ತಾಯಿಸಿದ ಅವರು, ಮಧು ಬಂಗಾರಪ್ಪ ಅವರು ನಕಲಿ ದಾಖಲೆ ಸೃಷ್ಟಿಸಿ ಸಮಾಜದ ಆಸ್ತಿಯನ್ನು ಕಬಳಿಸುತ್ತಿದ್ದಾರೆ. ಕಾರವಾರ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಭೀಮಣ್ಣ ನಾಯಕ, ನಾಟಾ ವ್ಯಾಪಾರಿ ಚಂದ್ರಶೇಖರಪ್ಪ, ಪತ್ನಿ ಅನಿತಾ ಅವರ ಹೆಸರಿನಲ್ಲಿ ನಕಲಿ ದಾಖಲೆ ಸೃಷ್ಟಿಸಿ ಸಮಾಜದ ಆಸ್ತಿ ದುರುಪಯೋಗಪಡಿಸಿಕೊಂಡಿದ್ದಾರೆ. ಅವರು ಕೂಡಲೇ ಟ್ರಸ್ಟಿಗೆ ರಾಜಿನಾಮೆ ನೀಡಬೇಕು ಎಂದಿದ್ದಾರೆ.
ಮಧು ಬಂಗಾರಪ್ಪ ಜೆಡಿಎಸ್ ಪಕ್ಷದವರು. ಅವರ ಜತೆಗೆ ಸಂಬಂಧ ಹೊಂದಿರುವ ಕಾರವಾರ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಭೀಮಣ್ಣ ನಾಯಕ ಅವರನ್ನು ಕೂಡಲೇ ಆ ಸ್ಥಾನದಿಂದ ವಜಾ ಮಾಡಬೇಕು ಎಂದು ಒತ್ತಾಯಿಸಿದ್ದಾರೆ.
ಸದುದ್ದೇಶದಿಂದ ಸಮಾಜದವರು ಖರೀದಿಸಿದ 85 ಎಕರೆ ಆಸ್ತಿಯನ್ನು ಮಧು ಬಂಗಾರಪ್ಪ ಕಬಳಿಸಿದ್ದಾರೆ. ನನ್ನ ಸಹಿಯನ್ನು ಫೋರ್ಜರಿ ಮಾಡಿದ್ದು, ಫೋರೆನ್ಸಿಕ್ ಲ್ಯಾಬಿನವರಿಗೂ ಲಂಚ ಕೊಟ್ಟಿದ್ದಾರೆ. ಈ ಬಗ್ಗೆ ಮರು ತನಿಖೆ ಮಾಡುವಂತೆ ಮನವಿ ಮಾಡಿದ್ದೇನೆ ಎಂದಿದ್ದಾರೆ.