ಗೀತಾ ಭಾಷಣ ಸುಧಾರಣೆ ಖುಷಿ ವಿಷಯ: ಚಿತ್ರನಟ ಶಿವರಾಜ್ಕುಮಾರ್
ಕ.ಪ್ರ.ವಾರ್ತೆ , ಶಿವಮೊಗ್ಗ , ಮಾ.29
ನನ್ನ ಪತ್ನಿಗೆ ರಾಜಕೀಯವಾಗಿ ಎಷ್ಟೆಲ್ಲಾ ವಿಷಯ ಗೊತ್ತಿದೆ ಎಂದು ತಿಳಿದಿರಲೇ ಇಲ್ಲ. ಅವರ ಭಾಷಣದಲ್ಲಿ ಮುಂಚೆಗಿಂತ ಸಾಕಷ್ಟು ಸುಧಾರಣೆಯಾಗಿದ್ದು, ಖುಷಿಯಾಗುತ್ತಿದೆ ಎಂದು ಶಿವಮೊಗ್ಗ ಲೋಕಸಭಾ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಗೀತಾ ಪತಿ ನಟ ಶಿವರಾಜ್ಕುಮಾರ್ ಅಭಿಪ್ರಾಯಪಟ್ಟಿದ್ದಾರೆ.
ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿ, ಶೂಟಿಂಗ್ ಮಧ್ಯೆಯೇ ಗೀತಾ ಭಾಷಣವನ್ನು ನೇರವಾಗಿ ಮೊಬೈಲ್ ಮುಖಾಂತರ ಆಲಿಸುತ್ತಿದ್ದೆ. ಆರಂಭಕ್ಕಿಂತ ಈಗ ಮಾತುಗಳು ಸುಧಾರಿಸಿದೆ, ಗೀತಾರಲ್ಲಿ ಸಾಕಷ್ಟು ಆತ್ಮವಿಶ್ವಾಸ ಮೂಡಿದೆ ಎಂದು ಶಹಬ್ಬಾಸ್ಗಿರಿಯನ್ನೂ ನೀಡಿದರು.
ಮಹಿಳೆಯರ ಮೆಚ್ಚುಗೆ: ನಾನು ಆ್ಯಕ್ಟಿಂಗ್ ಮಾಡುತ್ತೇನೆ, ರಿಯಲ್ ಲೈಫ್ನಲ್ಲಿ ಆ್ಯಕ್ಟಿಂಗ್ ಮಾಡೋ ಅಭ್ಯಾಸ ನನಗಿಲ್ಲ. ಯಾವುದೇ ದೃಷ್ಟಿಕೋನದಲ್ಲಿ ನೋಡಿದರೂ ಕೆಟ್ಟ ಉದ್ದೇಶ ನನಗಿಲ್ಲ. ನಮ್ಮ ತಂದೆ ನಮಗೆ ಕೆಟ್ಟದ್ದನ್ನು ಹೇಳಿಕೊಟ್ಟಿಲ್ಲ ಎಂದರು.
ನನ್ನ ದಾರಿ ಬೇರೆ: ನೀವೇ ಚುನಾವಣೆಗೆ ನಿಲ್ಲಬಹುದಿತ್ತಲ್ಲ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ನನ್ನ ದಾರಿ ಬೇರೆ ಇದೆ ಎಂದರು.
ರಾಜ್ ಕುಟುಂಬ ಸಂಪೂರ್ಣವಾಗಿ ಚುನಾವಣೆಗೆ ತೊಡಗಿಸಿಕೊಂಡಿಲ್ಲ ಎಂಬ ಕೊರಗು ರಾಜ್ ಅಭಿಮಾನಿಗಳಲ್ಲಿದೆಯಲ್ಲ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ಎಲ್ಲರಿಗೂ ಅವರದ್ದೇ ಭಾವನೆಗಳಿರುತ್ತವೆ ಎಂದರು.
ಜೀವನವನ್ನು ಒಂದು ಮೈದಾನಕ್ಕೆ ಹೋಲಿಸಿಕೊಂಡರೆ ಅಲ್ಲಿ ಸೋಲು ಹಾಗೂ ಗೆಲವು ಅನಿವಾರ್ಯ. ಅದನ್ನು ಎದುರಿಸಬೇಕು. ನಾಳೆ ಏನು ಬೇಕಾದರೂ ಆಗಬಹುದು. ಮಾನಸಿಕವಾಗಿ ಸಿದ್ಧವಾಗಿರಬೇಕು. ನೀನು ಯಶಸ್ಸು ಗಳಿಸು ಎಂದು ನನ್ನ ಪತ್ನಿಯನ್ನು ರಾಜಕೀಯಕ್ಕೆ ಕಳುಹಿಸಿಕೊಟ್ಟಿದ್ದೇನೆ. ಫಲಿಂತಾಶ ಬೇರೆಯೇ ಆದರೆ ತಲೆಕೆಡಿಸಿಕೊಳ್ಳಲ್ಲ ಎಂದರು.
ನೀವು ರಾಜಕೀಯಕ್ಕೆ ಬರುತ್ತೀರಾ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ನನ್ನ ಪತ್ನಿ ಪರವಾಗಿ ಮಾತನಾಡುತ್ತಿದ್ದೇನೆ. ರಾಜಕೀಯದವರಂತೆ ಕಾಣುತ್ತೇನೆಯೇ ಎಂದು ಮರುಪ್ರಶ್ನೆ ಹಾಕಿದ ಶಿವಣ್ಣ, ನನಗೆ ರಾಜಕೀಯಕ್ಕೆ ಬರುವ ಯಾವುದೇ ಐಡಿಯಾ ಇಲ್ಲವೆಂದರು.