ಬಿಜೆಪಿಯಲ್ಲಿ ಬೌಬೌ ಕ್ಯಾರೆಕ್ಟರ್ ಡಿವಿಜನ್: ಮಧು
ಶಿವಮೊಗ್ಗ: ಬಿಜೆಪಿಯಲ್ಲಿ ಬೌಬೌ ಕ್ಯಾರೆಕ್ಟರ್ ಡಿವಿಜನ್ ಇದೆ. ಅಲ್ಲಿ ಆಯನೂರು ಅವರಿಗೆ ಬೌಬೌ ಕಾಂಟ್ರಾಕ್ಟ್ ಕೊಟ್ಟ ಹಾಗೆ ಕಾಣುತ್ತದೆ ಎಂದು ಸೊರಬ ಶಾಸಕ ಮಧು ಬಂಗಾರಪ್ಪ ವ್ಯಂಗ್ಯವಾಡಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಬಾಯಿಗೆ ಬಂದಂತೆ ಮಾತನಾಡುವ ಆಯನೂರು ಮಂಜುನಾಥ್ ಅನಗತ್ಯವಾಗಿ ನನ್ನ ಹೇರ್ ಕಟ್ ಬಗ್ಗೆಯೂ ಮಾತನಾಡುತ್ತಾರೆ. ಬಿಜೆಪಿಯಲ್ಲಿಯೇ ಇಂತಹದ್ದೊಂದು ಬೌಬೌ ವಿಂಗ್ ಇದೆ ಎಂದು ಟೀಕಿಸಿದರು.
ಏ.17ರಂದು ಸಂಜೆ ಮತದಾನ ಮುಗಿದ ಮರುಕ್ಷಣವೇ ನಾನು ನನ್ನ ತಲೆ ಕೊಡುತ್ತೇನೆ, ಹೇರ್ ಕಟ್ ಮಾಡಲಿ ಎಂದು ಆಯನೂರು ಮಂಜುನಾಥ್‌ಗೆ ಸವಾಲೆಸೆದ ಅವರು, ಮತ ಕೇಳಲು ಮಂಜುನಾಥ್ ಮರ್ಯಾದೆ ಇಟ್ಟುಕೊಂಡಿಲ್ಲ ಎಂದರು.
ನನ್ನ ಪ್ರಕಾರ ಬಿಜೆಪಿ ಅಭ್ಯರ್ಥಿ ರಾಜಕೀಯದಲ್ಲಿ ಸತ್ತು ಹೋಗಿದ್ದಾರೆ. ನಿರ್ನಾಮ ಆಗಿದ್ದಾರೆ. ನಾನು ಬಂಗಾರಪ್ಪನವರ ಹಾದಿಯಲ್ಲಿ ನಡೆದುಕೊಂಡು ಹೋಗುತ್ತೇನೆ. ನನ್ನ ಹಾದಿಯಲ್ಲಿ ಗೀತಾ ನಡೆಯಬೇಕು. ಬಂಗಾರಪ್ಪ ಚಿಂತನೆ ಸಾವಿಲ್ಲ ಎಂಬ ಉತ್ತರ ಚುನಾವಣೆಯಲ್ಲಿ ಸಿಗಲಿದೆ. ಅಡಕೆ ಬೆಳೆಗಾರರು, ಬಗರ್‌ಹುಕುಂ ಸಾಗುವಳಿದಾರರ ಸಂಕಷ್ಟ ಅರಿಯದ ಬಿಎಸ್‌ವೈ ಅವರಿಗೆ ಈಗ ದೇಶದ ಚಿಂತನೆ ಬಂದಿದೆ. ಅವರು ಮೋದಿಯನ್ನು ಪ್ರಧಾನಮಂತ್ರಿ ಮಾಡಲು ಹೊರಟಿದ್ದಾರೆ ಎಂದು ಹೇಳಿದರು.
'ರೋಲ್‌ಕಾಲ್‌ಗೆ ಇಳಿದ ಕುಮಾರ್'
ಶಿವಮೊಗ್ಗ: ಕುಮಾರ್ ಬಂಗಾರಪ್ಪ ರೋಲ್‌ಕಾಲ್ ಲೆವೆಲ್‌ಗೆ ಬಂದಿದ್ದಾರೆ. ಡೀಲ್ ಮಾಡಿಕೊಂಡಿದ್ದಾರೆ ಎಂಬ ಭಾವನೆ ಬಂದಿದೆ ಎಂದು ಮಧು ಬಂಗಾರಪ್ಪ ವ್ಯಂಗ್ಯವಾಡಿದ್ದಾರೆ.
ಶರಾವತಿ ಡೆಂಟಲ್ ಕಾಲೇಜು ವಿಚಾರದಲ್ಲಿ ಕುಮಾರ್ ಬಂಗಾರಪ್ಪ ಅನಗತ್ಯವಾಗಿ ಪ್ರತಿಭಟನೆ ನಡೆಸಿದ್ದಾರೆ. ವಾಸ್ತವವಾಗಿ ಕಾಲೇಜಿನ ಜಾಗ ಯಾವುದೇ ಸಮಾಜಕ್ಕೆ ಸೇರಿದ್ದಲ್ಲ. ಈಡಿಗ ಸಮುದಾಯದ ಮುಖಂಡರು ಕೇಳಲಿ ಅದು ಯಾರ ಜಾಗವೆಂದು ಉತ್ತರ ಕೊಡುತ್ತೇನೆ ಎಂದರು.
ಆಸ್ತಿ ವಿಚಾರದಲ್ಲಿ ದಾಖಲೆ ಬಿಡುಗಡೆ ಮಾಡುತ್ತೇನೆ ಎಂದು ಪದೇ ಪದೇ ಕುಮಾರ್ ಬಂಗಾರಪ್ಪ ಹೇಳುತ್ತಿದ್ದಾರೆ. ಇದೇನು ಪಿಕ್ಚರ್ರಾ ಎಂದು ವ್ಯಂಗ್ಯವಾಗಿ ಹೇಳಿದ ಮಧು ಬಂಗಾರಪ್ಪ, ಬೇಕಿದ್ದರೆ ನ್ಯಾಯಾಲಯದ ಮೆಟ್ಟಿಲೇರಲಿ ಎಂದು ಸವಾಲೆಸೆದರು.