'ಮತದಾನ ನಿರ್ಲಕ್ಷ್ಯ ಸ್ವಾರ್ಥದ ಸಂಕೇತ'
ಕ.ಪ್ರ.ವಾರ್ತೆ, ಸಾಗರ, ಮಾ.30
ಇಲ್ಲಿನ ಆಟೋ ಕಾಂಪ್ಲೆಕ್ಸ್ ಕೈಗಾರಿಕಾ ಪ್ರದೇಶದಲ್ಲಿ ಮತದಾನ ಅರಿವು ಕಾರ್ಯಕ್ರಮ ನಡೆಯಿತು.
ಕೈಗಾರಿಕೆಗಳ ಮಾಲೀಕರಿಗೆ ಮತ್ತು ಕಾರ್ಮಿಕರಿಗಾಗಿ ನಡೆದ ಕಾರ್ಯಕ್ರಮದಲ್ಲಿ ಶಿವಮೊಗ್ಗ ಜಿಲ್ಲಾ ಕೈಗಾರಿಕಾ ಕೇಂದ್ರದ ಜಂಟಿ ನಿರ್ದೇಶಕರ ಹಾಗೂ ಸ್ವೀಪ್ ನೋಡಲ್ ಅಧಿಕಾರಿ ಎಚ್.ಎಂ. ಶ್ರೀನಿವಾಸ ಮಾತನಾಡಿ, ಮತದಾನ ಭಾರತದ ಸಂವಿಧಾನ ಕಲ್ಪಿಸಿದ ಒಂದು ಪವಿತ್ರ ಹಕ್ಕು. ಇದನ್ನು ಸುಭದ್ರ ಸರ್ಕಾರ, ಯೋಗ್ಯ ನಾಯಕನ್ನು ಚುನಾಯಿಸಲು ತಪ್ಪದೇ ಬಳಸಬೇಕಿದೆ ಎಂದರು.
ಮತದಾನವನ್ನು ನಿರ್ಲಕ್ಷಿಸುವವನು ಸ್ವಾರ್ಥಿ. ದೇಶದ್ರೋಹ ಮಾಡಿದಂತೆ, ಆತ್ಮವಂಚನೆ ಮಾಡಿಕೊಂಡಂತೆ. ಇವರು ಮುಂದೆ ಸರ್ಕಾರದಿಂದ ಯಾವುದೇ ಸವಲತ್ತು ನೀರೀಕ್ಷಿಸುವ ನೈತಿಕ ಹಕ್ಕಿಲ್ಲ ಎಂದು ಅಭಿಪ್ರಾಯಪಟ್ಟರು.
ಆಯ್ಕೆಯಲ್ಲಿ ಹಿನ್ನಡೆ: ದೇಶದ ಎಲ್ಲಾ ಮತದಾರರು ತಪ್ಪದೇ ಮತದಾನ ಮಾಡಿದರೆ ಇಂತಹ ಅಭ್ಯರ್ಥಿಯನ್ನು, ಸರ್ಕಾರವನ್ನು ಆಯ್ಕೆ ಮಾಡಲು ಸಾಧ್ಯ. ನಗರ ಪ್ರದೇಶಗಳ ಮತದಾರರು, ಪ್ರಜ್ಞಾವಂತರು, ಶೈಕ್ಷಣಿಕವಾಗಿ ಮುಂದುವರಿದವರು ಮತದಾನ ಮಾಡಲು ನಿರಾಸಕ್ತಿ ತೋರಿರುವುದು ಕಂಡುಬಂದಿರುತ್ತದೆ. ಇದರಿಂದ ಅರ್ಹ ಅಭ್ಯರ್ಥಿಯನ್ನು ಆಯ್ಕೆ ಮಾಡುವಲ್ಲಿ ಹಿನ್ನಡೆ ಉಂಟಾಗುತ್ತದೆ ಎಂದರು.
ಹಿಂದಿನ ದಿನಗಳಲ್ಲಿ ಮತದಾರನು ತನಗೆ ಯಾವ ಅಭ್ಯರ್ಥಿಯೂ ಯೋಗ್ಯನಲ್ಲ ಎಂದು ಮತದಾನ ಮಾಡುತ್ತಿರಲಿಲ್ಲ. ಆದರೆ, ಈ ಚುನಾವಣೆಯಲ್ಲಿ ನೋಟಾ (ನನ್ ಆಫ್ ದಿ ಎಬವ್) ಎನ್ನುವ ಬಟನ್ ಅನ್ನು ವಿದ್ಯುನ್ಮಾನ ಯಂತ್ರದಲ್ಲಿ ಅಳವಡಿಸಲಾಗಿದೆ. ಮತದಾರನು ತನ್ನ ಈ ಅಭಿಪ್ರಾಯ ವ್ಯಕ್ತಪಡಿಸಬಹುದು ಎಂದು ತಿಳಿಸಿದರು.
ಪ್ರತಿಜ್ಞಾವಿಧಿ ಬೋಧನೆ: ಎಲ್ಲರಿಗೂ ಮತದಾನ ಮಾಡುವ ಬಗ್ಗೆ, ಮತದಾನದ ಅರಿವು ಮೂಡಿಸುವ ಬಗ್ಗೆ ಪ್ರತಿಜ್ಞಾವಿಧಿ ಬೋಧಿಸಿದರು. ನಂತರ ಕೈಗಾರಿಕಾ ವಸಹಾತುವಿನಲ್ಲಿ ಜಾಥಾ ನಡೆಸಿ ಎಲ್ಲಾ ಕೈಗಾರಿಕೆಗಳ ಕಾರ್ಮಿಕರಿಗೆ ತಪ್ಪದೇ ಮತದಾನ ಮಾಡುವಂತೆ ಕೋರಿ ಮತ್ತು ಮತದಾನ ಪ್ರಾಮುಖ್ಯತೆ ಬಗ್ಗೆ ತಿಳಿಸಲಾಯಿತು.
ಕಾರ್ಯಕ್ರಮವನ್ನು ಸಾಗರ ಆಟೋ ಕಾಂಪ್ಲೆಕ್ಸ್ ಕೈಗಾರಿಕೆಗಳ ಸಂಘದ ಸಹಯೋಗದೊಂದಿಗೆ ಆಯೋಜಿಸಲಾಗಿತ್ತು. ಈ ಸಂದರ್ಭ ಸಂಘದ ಅಧ್ಯಕ್ಷ ಶಿವಾನಂದ, ಕೈಗಾರಿಕಾ ವಿಸ್ತರಣಾಧಿಕಾರಿ ವೆಂಕಟೇಶ ಮತ್ತಿತರರು ಹಾಜರಿದ್ದರು.