ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಶಿವಮೊಗ್ಗ

ಮೋದಿ ಪ್ರಧಾನಿಯಾಗಲೆಂಬುದೇ ಎಲ್ಲರ ಆಶಯ

Rashmi Kasaragodu
Updated On : 31 Mar 2014, 1:55 am

ಕ.ಪ್ರ.ವಾರ್ತೆ, ಶಿವಮೊಗ್ಗ, ಮಾ.30
ಈ ಚುನಾವಣೆ ಜನರ ಆಂದೋಲನ ಎಂದರೆ ಉತ್ಪ್ರೇಕ್ಷವಾಗುತ್ತದೋ ಇಲ್ಲವೋ ಗೊತ್ತಿಲ್ಲ. ಆದರೆ, ಎಲ್ಲಾ ವರ್ಗದ ಜನರೂ ದೇಶಕ್ಕಾಗಿ ನರೇಂದ್ರ ಮೋದಿ ಪ್ರಧಾನಿ ಆಗಬೇಕೆಂದು ಬಯಸುತ್ತಿದ್ದಾರೆ. ಬಿಜೆಪಿಯಲ್ಲಿ ಕೆಲವರು ಒಪ್ಪಬಹುದು, ಒಪ್ಪದೇ ಇರಬಹುದು. ದೇಶ ಉಳಿಸುವ ವ್ಯವಸ್ಥೆ ಆಗಿಯೇ ತೀರುತ್ತದೆ ಎಂದು ಮಾಜಿ ಡಿಸಿಎಂ ಕೆ.ಎಸ್.ಈಶ್ವರಪ್ಪ ಹೇಳಿದ್ದಾರೆ.
ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಭಾನುವಾರ ನಡೆದ ಚುನಾವಣಾ ರಾಜಕೀಯ, ಸಂಘಟನಾತ್ಮಕ ಸಭೆ ಸಮಾರೋಪದಲ್ಲಿ ಮಾತನಾಡಿದ ಅವರು, ಮೋದಿ ಪ್ರಧಾನಿ ಆಗಬೇಕು ಎಂದು ಬಿಜೆಪಿ ಕಾರ್ಯಕರ್ತರಷ್ಟೇ ಹೇಳುತ್ತಿಲ್ಲ. ಇತರೆ ಪಕ್ಷದ ಕಾರ್ಯಕರ್ತರು ಮುಖಂಡರಲ್ಲೂ ಆಸಕ್ತಿ ಬಂದಿದೆ. ನರೇಂದ್ರ ಮೋದಿಗೆ ಈ ಬಾರಿ ಅವಕಾಶ ಎಂದು ಕಾಂಗ್ರೆಸ್ ಧುರೀಣರೇ ಹೇಳಿದ್ದಾರೆ ಎಂದು ಹೇಳಿದರು.
ಮೋದಿ ಗೆಲವು ಅನಿವಾರ್ಯ:  ನರೇಂದ್ರ ಮೋದಿ ಪ್ರಧಾನಿ ಆಗಬೇಕೆಂಬುದು ರಾಷ್ಟ್ರೀಯವಾದಿಗಳ ಆಶಯ. ಅಮೆರಿಕವು ಭಾರತಕ್ಕೆ ಗೌರವ ಕೊಡದೇ ಇರುವುದು. ಪಾಕಿಸ್ತಾನ ನಮ್ಮನ್ನು ಶಕ್ತಿಹೀನ ಎಂದುಕೊಂಡಿರುವುದು, ದೇಶದಲ್ಲಿ ಜಾತಿ ತಾಂಡವ ಆಡುತ್ತಿರುವ ಸಂದರ್ಭ ಇಂತಹ ಆತಂಕಕ್ಕೆ ವಿರಾಮ ಕೊಡಬೇಕೆಂದರೆ ಮೋದಿ ಗೆಲ್ಲುವುದು ಅನಿವಾರ್ಯ ಎಂದು ತಿಳಿಸಿದರು.
ಕುಮಾರ್ ಬಂಗಾರಪ್ಪ ಅವರೇ ಶಿವಮೊಗ್ಗ ಕಾಂಗ್ರೆಸ್ ಅಭ್ಯರ್ಥಿ ದುರ್ಬಲ ಎಂಬರ್ಥದಲ್ಲಿ ಹೇಳಿಕೆ ನೀಡಿದ್ದಾರೆ. ಅಂದರೆ, ಜೆಡಿಎಸ್ ಕಾಂಗ್ರೆಸ್ ಒಳಒಪ್ಪಂದ ಆಗಿರಲಿಕ್ಕಿಲ್ಲ ಎಂದೇನು ಇಲ್ಲವಲ್ಲ. ಮಂಜುನಾಥ ಭಂಡಾರಿ ಅವರು ದುಡ್ಡು ಬಳಸಿಕೊಂಡು ಬೇರೆ ಬೇರೆ ಜಾತಿ ವ್ಯವಸ್ಥೆ ಮೂಲಕ ಕುತಂತ್ರದ ರಾಜಕಾರಣ ಮಾಡುತ್ತಿದ್ದು, ಇದಕ್ಕೆ ನಾವು ಪ್ರತಿತಂತ್ರ ಮಾಡಬೇಕಾಗಿದೆ ಎಂದರು.
ರಾಜ್ಯಸಭಾ ಸದಸ್ಯ ಆಯನೂರು ಮಂಜುನಾಥ್ ಮಾತನಾಡಿ, ಈಗಾಗಲೇ ಯುದ್ಧಭೂಮಿಯಲ್ಲಿದ್ದೇವೆ. ಯುದ್ಧದ ದಿನಾಂಕ ನಿಶ್ಚಯವಾಗಿದೆ. ಯುದ್ಧ ಭೂಮಿ ಸರ್ವೆ ಮಾಡಿಕೊಂಡು ಬಂದಿದ್ದು ಆಯಕಟ್ಟಿನ ಜಾಗ ಯಾವುದು, ಅಪಾಯದ ಜಾಗ ಯಾವುದು, ಸುರಕ್ಷಿತ ಜಾಗ ಯಾವುದೆಂದು ಗೊತ್ತಾಗಿದೆ. ನಮ್ಮ ವಿರೋಧಿಗಳಿಗಿಂತ ವ್ಯವಸ್ಥಿತ ಹೆಜ್ಜೆ ಇಟ್ಟಿದ್ದೇವೆ ಎಂದು ನುಡಿದರು.
ಬೇರೆ ಪಕ್ಷದವರಿಗೆ ಹೋಲಿಸಿದರೆ ಇಡೀ ಕ್ಷೇತ್ರದಲ್ಲಿ ಬಿಜೆಪಿ ಕ್ರಿಯಾಶೀಲವಾಗಿದೆ. ವಾಸ್ತವವಾಗಿ ಇನ್ನೂ ತಳಮಟ್ಟಕ್ಕೆ ಹೋಗಬೇಕು. ನಾವಿನ್ನು ಹೋಬಳಿ ಮಟ್ಟದಲ್ಲಿದ್ದು, ಇನ್ನೂ ಕೆಳಗೆ ಹೋಗಬೇಕು ಎಂದರು.
ವಿಶೇಷವೆಂದರೆ ನಮಗಿಂತ ಮುಂಚೆ ಮೋದಿ ಮನೆ ಮನೆ ಮುಟ್ಟಿದ್ದಾರೆ. ಪ್ರಚಾರಕ್ಕೆ ಹೋದಾಗ ನರೇಂದ್ರ ಮೋದಿ ಮತದಾರರ ಮನ ಮುಟ್ಟಿರುವುದು ಗೊತ್ತಾಗುತ್ತಿದೆ. ಆತ್ಮವಿಶ್ವಾಸವೂ ಬಂದಿದೆ. ಆದರೆ ನಮ್ಮಗಳಲ್ಲಿ ಅತಿ ವಿಶ್ವಾಸ ಆಗದಿರಲಿ. ಎದುರಾಳಿಗಳು ಅಖಾಡಕ್ಕೆ ಧುಮುಕುತ್ತಾರೆ, ಅವರ ಧೂಳು ಏಳುತ್ತದೆ. ಅವರ ಧೂಳಿನಲ್ಲಿ ನಮ್ಮ ಮತಗಳು ಕಳೆದುಹೋಗದಂತೆ ನೋಡಿಕೊಳ್ಳಬೇಕು ಎಂದು ಹೇಳಿದರು.
ಸಂಸದ ಬಿ.ವೈ.ರಾಘವೇಂದ್ರ, ನಮ್ಮಗಳ ನಡುವೆ ವಿರೋಧಪಕ್ಷದವರು ವಿಷ ಬೀಜ ಬಿತ್ತುವ ಕೆಲಸ ಮಾಡುತ್ತಿದ್ದಾರೆ, ಒಡಕು ಮೂಡಿಸಲು ಯತ್ನಿಸುತ್ತಾರೆ. ಜಾತಿ ಜಾತಿ ನಡುವೆ ಬೆಂಕಿ ಹಚ್ಚುವ ಸಾದ್ಯತೆ ಇದ್ದು, ಈ ಹಿನ್ನೆಲೆಯಲ್ಲಿ ಎಚ್ಚರಿಕೆಯಿಂದ ಚುನಾವಣಾ ಪ್ರಚಾರದಲ್ಲಿ ಪಾಲ್ಗೊಳ್ಳಬೇಕಾಗಿದೆ ಎಂದರು.
ಎಂ.ಬಿ. ಭಾನುಪ್ರಕಾಶ್, ಭಾರತಿ ಶೆಟ್ಟಿ, ಎಸ್.ದತ್ತಾತ್ರಿ, ಕೆ.ಜಿ.ಕುಮಾರಸ್ವಾಮಿ ಮತ್ತಿತರರು ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement