ಹೆದ್ದಾರಿಗೆ ಆಮೆಗತಿ ಡಾಂಬರು
ಕಾನುಗೋಡು- ಮಾಸ್ತಿಕಟ್ಟೆ ರಸ್ತೆ ಕಾಮಗಾರಿ ನೀತಿಗೆ ಸ್ಥಳೀಯರ ಅಸಮಧಾನ
ಜಖಂಗೊಂಡಿರುವ ಕಡೆ ರಸ್ತೆ ಕಿತ್ತು ಕಾಮಗಾರಿ ನಿರ್ವಹಿಸಲು ಸೂಚನೆ: ಎಇಇ
ಹೊಸನಗರ: ನೆನೆಗುದಿಗೆ ಬಿದ್ದಿದ್ದ ತೀರ್ಥಹಳ್ಳಿ-ಕುಂದಾಪುರ ಹೆದ್ದಾರಿ ವ್ಯಾಪ್ತಿಗೆ ಬರುವ ಕಾನುಗೋಡು-ಮಾಸ್ತಿಕಟ್ಟೆ ರಸ್ತೆ ಕಾಮಗಾರಿಗೆ ಚಾಲನೆ ನೀಡಲಾಗಿದೆ. ಆದರೆ ಮೂರು ಮತ್ತೊಂದು ಕಾರ್ಮಿಕರು ಕೆಲಸದಲ್ಲಿ ನಿರತರಾಗಿದ್ದು, ಹೀಗೆ ಆದರೆ ಮಳೆಗಾಲ ಪ್ರಾರಂಭದೊಳಗೆ ಕಾಮಗಾರಿ ಮುಗಿಯುವ ಸಾಧ್ಯತೆ ಇಲ್ಲ ಎಂಬುದು ಸ್ಥಳೀಯರ ಅಸಮಧಾನಕ್ಕೆ ಕಾರಣವಾಗಿದೆ.
ಕಾನುಗೋಡು- ಮಾಸ್ತಿಕಟ್ಟೆ ಹೆದ್ದಾರಿ ಅವ್ಯವಸ್ಥೆ ಬಗ್ಗೆ ಮಾ.17ರಂದು 'ಕನ್ನಡಪ್ರಭ'ದಲ್ಲಿ ವಿಸ್ತಾರ ವರದಿ ಪ್ರಕಟವಾಗಿತ್ತು. ಈ ಹಿನ್ನೆಲೆಯಲ್ಲಿ ರಸ್ತೆ ಅವ್ಯವಸ್ಥೆ ಪರಿಶೀಲಿಸಿದ ಅಧಿಕಾರಿಗಳು ಮಾಸ್ತಿಕಟ್ಟೆಯಲ್ಲಿ ಸಭೆ ನಡೆಸಿ ಕೂಡಲೇ ಕಾಮಗಾರಿ ಆರಂಭಿಸುವಂತೆ ಗುತ್ತಿಗೆದಾರರಿಗೆ ಸೂಚಿಸಿದ್ದರು.
ಕಾಮಗಾರಿ ಆರಂಭ: ಮೂರು ದಿನಗಳ ಹಿಂದೆ ಕಾಮಗಾರಿ ಆರಂಭಗೊಂಡಿದ್ದು, ರಸ್ತೆ ಅವ್ಯವಸ್ಥೆಯಿಂದ ಪರದಾಟ ಪಡುತ್ತಿದ್ದ ಸ್ಥಳೀಯರಿಗೆ ಕೊಂಚ ಸಮಾಧಾನ ತಂದಿತ್ತು. ಆದರೆ ಮೂರು ಮತ್ತೊಂದು ಕಾರ್ಮಿಕರು ರಸ್ತೆಯ ದುರಸ್ತಿ ಕಾರ್ಯ ನಡೆಸುತ್ತಿದ್ದು ಆಮೆಗತಿಯಲ್ಲಿ ಸಾಗುತ್ತಿದೆ. ಇದೇ ರೀತಿ ಕಾಮಗಾರಿ ನಿರ್ವಹಿಸಿದರೆ ಮಳೆಗಾಲದ ಆರಂಭಕ್ಕೂ ಮುನ್ನ ಕಾಮಗಾರಿ ಪೂರ್ಣಗೊಳ್ಳುವುದು ಕಷ್ಟ ಸಾಧ್ಯ ಸ್ಥಳೀಯ ಜಿ.ವೈ. ರವೀಂದ್ರ ಅಭಿಪ್ರಾಯಪಟ್ಟಿದ್ದಾರೆ.
ಚುರುಕು ಮುಟ್ಟಿಸಿ: ಕೊಲ್ಲೂರು ಘಾಟ್ ರಸ್ತೆಯಲ್ಲಿ ಕಾಮಗಾರಿ ನಡೆಯುತ್ತಿರುವ ಹಿನ್ನೆಲೆಯಲ್ಲಿ ಮಾರ್ಗ ಬಂದ್ ಮಾಡಲಾಗಿದೆ. ಹಾಗಾಗಿ ಅಲ್ಲಿ ಸಾಗುತ್ತಿದ್ದ ವಾಹನಗಳು ಮಾಸ್ತಿಕಟ್ಟೆ ಹುಲಿಕಲ್ ಮಾರ್ಗದಲ್ಲೇ ಸಂಚರಿಸುವುದು ಅನಿವಾರ್ಯವಾಗಿದ್ದು, ಕೂಡಲೇ ಕಾಮಗಾರಿ ಒಂದು ಹಂತಕ್ಕೆ ಬರಬೇಕು. ರಾಜ್ಯದಲ್ಲೆ ಅತಿಹೆಚ್ಚು ಮಳೆ ಬೀಳುವ ಪ್ರದೇಶವಾಗಿರುವ ಇಲ್ಲಿ ಮಳೆ ಆರಂಭವಾಯಿತೆಂದರೆ ಬಿಡುವು ಇಲ್ಲ. ಈ ಹಿನ್ನೆಲೆಯಲ್ಲಿ ಅಧಿಕಾರಿಗಳು ಮತ್ತು ಗುತ್ತಿಗೆದಾರರು ಮುತುವರ್ಜಿ ವಹಿಸಿ ಕಾಮಗಾರಿ ಪೂರೈಸಬೇಕಾಗಿದ್ದು ಕೂಡಲೆ ಸಮಾರೋಪಾದಿ ಕಾಮಗಾರಿಗೆ ಚುರುಕು ಮುಟ್ಟಿಸುವಂತೆ ಸ್ಥಳೀಯರು ಆಗ್ರಹಿಸಿದ್ದಾರೆ.
ಚುರುಕಾಗಲಿದೆ-ಎಇಇ: ಈ ಬಗ್ಗೆ 'ಕನ್ನಡಪ್ರಭ'ಕ್ಕೆ ಮಾಹಿತಿ ನೀಡಿದ ಲೋಕೋಪಯೋಗಿ ಇಲಾಖೆ ಎಇಇ ಲೋಕೇಶ್, ರಸ್ತೆ ಸಂಪೂರ್ಣವಾಗಿ ಜಖಂಗೊಂಡಿರುವ ಕಾರಣ ಕೆಲವೆಡೆ ಗುಂಡಿ ಮುಚ್ಚುವ ಮತ್ತು ಇನ್ನು ಕೆಲವು ಕಡೆ ಸಂಪೂರ್ಣ ರಸ್ತೆಯನ್ನೇ ಕಿತ್ತು ಕಾಮಗಾರಿ ನಿರ್ವಹಿಸಲು ಸೂಚಿಸಲಾಗಿದೆ. ಆರಂಭಿಕ ದುರಸ್ತಿ ಕೈಗೊಂಡ ನಂತರ ಕಾಮಗಾರಿ ಚುರುಕುಗೊಳಿಸಲು ಸಂಬಂಧ ಗುತ್ತಿಗೆದಾರರೊಂದಿಗೆ ಮಾತನಾಡಿ ಕ್ರಮ ಕೈಗೊಳ್ಳುತ್ತೇನೆ ಎಂದಿದ್ದಾರೆ.