ಗುತ್ತಿಗೆ ಕಾರ್ಮಿಕರಿಗೆ ಸಮಾನ ವೇತನ ಜಾರಿಯಾಗಲಿ
ಕ.ಪ್ರ.ವಾರ್ತೆ ಟಿ ಶಿವಮೊಗ್ಗ ಟಿ ಮೇ 1
ಕಾರ್ಮಿಕ ದಿನಾಚರಣೆ ಹಿನ್ನೆಲೆ ವಿವಿಧ ಸಂಘ ಸಂಸ್ಥೆ ಹಾಗೂ ಸಂಘಟನೆಗಳ ನೌಕರರು ಗುರುವಾರ ನಗರದಲ್ಲಿ ಮೆರವಣಿಗೆ ನಡೆಸಿ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿದರು.
ನಗರದ ಸೈನ್ಸ್ ಮೈದಾನದಿಂದ ಹೊರಟ ಕಾರ್ಮಿಕರು ಪ್ರಧಾನ ಅಂಚೆ ಕಚೇರಿ ಎದುರು ಸಮಾವೇಶಗೊಂಡರು.
ಈ ಸಂದರ್ಭದಲ್ಲಿ ಮಾತನಾಡಿದ ಕಾರ್ಮಿಕ ಸಂಘಟನೆಗಳ ಪ್ರಮುಖರು, ಕಾರ್ಮಿಕ ದಿನಾಚರಣೆಯ ವಿಶೇಷತೆ ತಿಳಿಸಿದರಲ್ಲದೇ, ಕಾರ್ಮಿಕ ಸಮುದಾಯವು ಇಂದು ಅನೇಕ ಸಂಕಟ ಎದುರಿಸುತ್ತಿದೆ. ಶಾಸನಗಳಿಂದ ಕಾರ್ಮಿಕ ಚಳವಳಿಗಳನ್ನು ಹತ್ತಿಕ್ಕಲಾಗುತ್ತಿದೆ. ಜಾಗತೀಕರಣ, ಉದಾರೀಕರಣ, ಖಾಸಗೀಕರಣ ನೀತಿಗಳಿಂದ ಸುಲಿಗೆ ಮಾಡಲಾಗುತ್ತಿದೆ. ಇದರ ವಿರುದ್ಧದ ಹೋರಾಟ ನಡೆಸಬೇಕಾದ ಅನಿವಾರ್ಯವಿದೆ ಎಂದು ಕರೆ ನೀಡಿದರು.
ಸಭೆಯಲ್ಲಿ ಕಾರ್ಮಿಕ ಸಂಬಂಧಿ ವಿವಿಧ ಬೇಡಿಕೆ ಈಡೇರಿಸುವಂತೆ ಕೇಂದ್ರ ಹಾಗೂ ರಾಜ್ಯ ಸರ್ಕಾರವನ್ನು ಒತ್ತಾಯಿಸಲಾಯಿತು.
ಬೇಡಿಕೆಗಳು: ಕನಿಷ್ಠ ವೇತನ ತಿಂಗಳಿಗೆ 10 ಸಾವಿರಕ್ಕಿಂತ ಕಡಿಮೆ ಇರಬಾರದು. ಗ್ರಾಹಕರ ಬೆಲೆ ಸೂಚ್ಯಂಕ ಹೊಂದಿಕೊಂಡಂತೆ ನಿಗದಿಯಾಗಬೇಕು. ಅಂತರಾಜ್ಯ ವಲಸೆ ಕಾರ್ಮಿಕರ ಕಾನೂನು ಒಳಗೊಂಡಂತೆ ಎಲ್ಲಾ ಕಾರ್ಮಿಕ ಕಾನೂನುಗಳನ್ನು ಕಠಿಣವಾಗಿ ಅನುಷ್ಠಾನಗೊಳಿಸಬೇಕು.
ಗುತ್ತಿಗೆ ಪದ್ಧತಿ ಮತ್ತು ಕ್ಯಾಜಿಯೋಲ್ ಪದ್ಧತಿಯಲ್ಲಿ ಕೆಲಸ ನಿರ್ವಹಿಸುವುದನ್ನು ಪ್ರೋತ್ಸಾಹಿಸಬಾರದು. ಗುತ್ತಿಗೆ ಕಾರ್ಮಿಕ ಕಾನೂನನ್ನು ಕಟ್ಟುನಿಟ್ಟಾಗಿ ಜಾರಿಗೆ ತರಬೇಕು. ಗುತ್ತಿಗೆ ಕಾರ್ಮಿಕರಿಗೆ ಕಾಯಂ ಕಾರ್ಮಿಕರಿಗೆ ಸಮನಾದ ವೇತನ ಮತ್ತು ಸೌಲಭ್ಯಗಳನ್ನು ಜಾರಿಗೊಳಿಸಬೇಕು. ಕಾರ್ಮಿಕ ಇಲಾಖೆಯನ್ನು ಬಲಪಡಿಸಬೇಕು.
ಕಾನೂನು ಜಾರಿ ಇಲಾಖೆಗಳಿಗಿರುವ ಕಾರ್ಮಿಕ ಮತ್ತು ಕಾರ್ಖಾನೆ ನಿರೀಕ್ಷಕರ ಕಚೇರಿಗಳಿಗೆ ಅಗತ್ಯವಿರುವ ಸಿಬ್ಬಂದಿ ನೇಮಕ ಮಾಡಬೇಕು. ವಿವಿಧ ಇಲಾಖೆಗಳಲ್ಲಿ ಖಾಲಿ ಇರುವ ಹುದ್ದೆಗಳನ್ನು ಕೂಡಲೇ ಭರ್ತಿ ಮಾಡಬೇಕು.
ಕಾರ್ಮಿಕ ನ್ಯಾಯಾಲಯ ಅಥವಾ ಟ್ರಿಬ್ಯುನಲ್ಗಳಲ್ಲಿ ಖಾಲಿ ಇರುವ ನ್ಯಾಯಮೂರ್ತಿಗಳು ಮತ್ತು ಸಿಬ್ಬಂದಿ ಹುದ್ದೆಯನ್ನು ಕೂಡಲೇ ಭರ್ತಿ ಮಾಡಬೇಕು.
ಅಸಂಘಟಿತ ಕಾರ್ಮಿಕರ ರಾಷ್ಟ್ರೀಯ ನಿಯಮವನ್ನು ಅಗತ್ಯ ಹಣಕಾಸಿನ ನೆರವಿನೊಂದಿಗೆ ಸ್ಥಾಪಿಸಬೇಕು. ಬಡತನರೇಖೆಯ ಲೆಕ್ಕಾಚಾರಗಳನ್ನು ಬದಿಗಿಟ್ಟು ಎಲ್ಲಾ ಅಸಂಘಟಿತ ಕಾರ್ಮಿಕರನ್ನು ಸಾರ್ವತ್ರಿಗೊಳಿಸಬೇಕು. ಕನಿಷ್ಠ ಸಾಮಾಜಿಕ ಭದ್ರತೆಯ ಸೌಲಭ್ಯಗಳಾದ ವೃದ್ಧಾಪ್ಯ ವೇತನ, ಆರೋಗ್ಯ, ಹೆರಿಗೆ ಭತ್ಯೆ, ಮಕ್ಕಳ ಆರೈಕೆ, ಅಪಘಾತ ಮತ್ತು ಜೀವವಿಮೆ ಒಳಗೊಂಡಿರಬೇಕು.
ಹೊಸ ರಾಷ್ಟ್ರೀಯ ಪಿಂಚಣಿ ಯೋಜನೆಯನ್ನು ರದ್ದುಗೊಳಿಸಬೇಕು. ಖಚಿತವಾದ ಪಿಂಚಣಿ ನೀಡುವ ಯೋಜನೆ ಜಾರಿಗೊಳಿಸಬೇಕು. ಗುಪ್ತ ಮತದಾನದ ಮೂಲಕ ಕಾರ್ಮಿಕ ಸಂಘಗಳಿಗೆ ಮಾನ್ಯತೆ ನೀಡಬೇಕು. ಕಾರ್ಮಿಕರ ಸಂಘಗಳ ಹಕ್ಕಿಗೆ ರಕ್ಷಣೆ ನೀಡಬೇಕು.
ರಾಜ್ಯ ಮತ್ತು ಕೇಂದ್ರ ಸರ್ಕಾರದ ಎಲ್ಲಾ ಇಲಾಖೆಗಳಲ್ಲಿ ಗುತ್ತಿಗೆ ಇಲಾಖೆಗಳಲ್ಲಿರುವ ಗುತ್ತಿಗೆ ಕಾರ್ಮಿಕರನ್ನು ಕಾಯಂಗೊಳಿಸಬೇಕು, ಗ್ರಾಮೀಣ ಸೇವಕರನ್ನು ಕಾಯಂಗೊಳಿಸಬೇಕು. ಅಂಗನವಾಡಿ, ಆಶಾ, ಬಿಸಿಯೂಟ, ಪ್ಯಾರಾ ಟೀಚರ್ಸ್ ಸಿಬ್ಬಂದಿಯನ್ನು ಕಾರ್ಮಿಕರು ಎಂದು ಮಾನ್ಯತೆ ನೀಡಬೇಕು, ಈ ಕಾರ್ಮಿಕರಿಗೆ ಕನಿಷ್ಠ ವೇತನ, ಸಾಮಾಜಿಕ ಭದ್ರತಾ ಸೌಲಭ್ಯಗಳಾದ ಪಿಂಚಣಿ, ಗ್ರಾಚುಯಿಟಿ ಪಾವತಿ ಮಾಡಬೇಕು. ಎಲ್ಲಾ ಮಹಿಳಾ ಕಾರ್ಮಿಕರು ಮತ್ತು ನೌಕರರಿಗೆ ಸಮಾನ ವೇತನ ಜಾರಿಗೊಳಿಸಬೇಕು. ಹೆರಿಗೆ ಸೌಲಭ್ಯ, ಶಿಶುಪಾಲನಾ ಕೇಂದ್ರದ ವ್ಯವಸ್ಥೆ ಒದಗಿಸಬೇಕು.
ಸಿಐಟಿಯು ಜಿಲ್ಲಾಧ್ಯಕ್ಷ ಜಿ.ಎಸ್. ನಾಗರಾಜ್, ಪ್ರಮುಖರಾದ ಶಿವಶಂಕರ್, ಸಿ.ಬಿ. ಕುಲಕರ್ಮಿ, ಯೋಗೀಶ್, ರವಿ ಮುಂತಾದವರು ಸಭೆಯಲ್ಲಿ ಪಾಲ್ಗೊಂಡಿದ್ದರು.
ಗ್ರಾಮ ಪಂಚಾಯಿತಿ ನೌಕರರ ಸಂಘ, ಅಕ್ಷರ ದಾಸೋಹ ನೌಕರರ ಸಂಘ, ಅಂಗನವಾಡಿ ನೌಕರರ ಸಂಘ, ಪೆಟ್ರೋಲಿಯಂ ಮತ್ತು ಗ್ಯಾಸ್ ವರ್ಕರ್ಸ್ ಯೂನಿಯನ್, ಬಿಎಸ್ಎನ್ಎಲ್ ವರ್ಕರ್ಸ್ ಯೂನಿಯನ್, ಮೆಡಿಕಲ್ ರೆಪ್ರಸೆಂಟಿಟಿವ್ ಯೂನಿಯನ್, ಕೆಎಸ್ಆರ್ಟಿಸಿ ನೌಕರರ ಸಂಘದ ಸದಸ್ಯರು ಸಭೆಯಲ್ಲಿ ಪಾಲ್ಗೊಂಡಿದ್ದರು.