ಜೆನರ್ಮ್ ಬಸ್ ಯೋಜನೆ ಸ್ಟಾರ್ಟ್ ಆಗಲು ಸಾಧ್ಯವೇ?
ವಿಶೇಷ ವರದಿ
ಕ.ಪ್ರ. ವಾರ್ತೆ ಶಿವಮೊಗ್ಗ ಮೇ 1
ಶಿವಮೊಗ್ಗ ಹಾಗೂ ಭದ್ರಾವತಿ ನಗರದಲ್ಲಿ ಸರ್ಕಾರಿ ನಗರ ಸಾರಿಗೆ ಬಸ್ ಯೋಜನೆಗೆ ಈಗ ಪ್ರಸವ ವೇದನೆ ಸಮಯ.
ಕೇಂದ್ರ ಸರ್ಕಾರದ ಜೆನರ್ಮ್ ಯೋಜನೆಯಡಿ ಈ ಎರಡೂ ನಗರಗಳಲ್ಲಿ ನಗರ ಸಾರಿಗೆ ಆರಂಭಿಸಲು ಹಣ ಮಂಜೂರಾಯಿತು. ಮೊದಲ ಕಂತಿನ ಹಣವೂ ಬಿಡುಗಡೆಯಾಯಿತು. ಆದರೆ, ಜಿಲ್ಲಾಡಳಿತದ ಧೋರಣೆಯಿಂದಾಗಿ ಯೋಜನೆ ಕಾರ್ಯರೂಪಕ್ಕೆ ಬರುವುದೇ ಅನುಮಾನ ಎಂಬಂತಾಗಿದೆ.
2013ರ ಸೆ.17ರ ಮಾಹಿತಿಯಂತೆ ಯೋಜನೆಯಡಿ ಶಿವಮೊಗ್ಗಕ್ಕೆ 65 ಬಸ್ ಹಾಗೂ ಭದ್ರಾವತಿ ನಗರಕ್ಕೆ 35 ಬಸ್ ಸೇವೆ ಒದಗಿಬರಲಿದೆ. ಯೋಜನೆ ಬಾಬ್ತು ಶಿವಮೊಗ್ಗಕ್ಕೆ 18.5 ಕೋಟಿ, ಭದ್ರಾವತಿಗೆ 10.15 ಕೋಟಿ ಮಂಜೂರಾಯಿತು. ಮೊದಲ ಹಂತದಲ್ಲಿ ಶಿವಮೊಗ್ಗ 7.54 ಕೋಟಿ, ಭದ್ರಾವತಿಗೆ 4.6 ಕೋಟಿ ಮಂಜೂರಾಯಿತು. ಯೋಜನೆಗೆ ಹಣ ಬಿಡುಗಡೆಯಾದ 2 ತಿಂಗಳಲ್ಲಿ ಯೋಜನೆ ಕಾರ್ಯರೂಪಕ್ಕೆ ಬರಬೇಕು ಎಂಬ ನಿಯಮ ಹಾಕಲಾಗಿತ್ತು. ಬಸ್ ಕಾರ್ಯನಿರ್ವಹಿಸಲು ಅಗತ್ಯವಾದಂತಹ ಬಸ್ ಟರ್ಮಿನಲ್, ಡಿಪೋ, ವರ್ಕ್ಶಾಪ್ ಆಗಬೇಕಾಗಿದ್ದು, ಇದಕ್ಕೆ ಸಂಬಂಧಪಟ್ಟ ಜಾಗ ನೀಡುವುದು ಜಿಲ್ಲಾಡಳಿತ ಹೊಣೆ. ಅಚ್ಚರಿ ಎಂದರೆ ಕಳೆದ 8-9 ತಿಂಗಳಿಂದಲೂ ಜಿಲ್ಲಾಡಳಿತಕ್ಕೆ ಶಿವಮೊಗ್ಗ ನಗರ ವ್ಯಾಪ್ತಿಯಲ್ಲಿ ಈ ಕಾರ್ಯಕ್ಕೆ ಜಾಗ ಗುರುತು ಮಾಡಲು ವಿಫಲವಾಗಿದೆ. ಅಂತಿಮವಾಗಿ ಯೋಜನೆ ವಾಪಸ್ ಹೋಗುವ ಹಂತಕ್ಕೆ ಬಂದಿದ್ದು, ಜಿಲ್ಲಾಡಳಿತ ಒಂದು ಸಮರ್ಥ ನಿರ್ಧಾರ ತೆಗೆದುಕೊಳ್ಳದೇ ಹೋದಲ್ಲಿ ಅರ್ಥಾತ್ ಯೋಜನೆ ಕಾರ್ಯಾರಂಭ ಮಾಡದೇ ಇದ್ದರೆ 100 ಬಸ್ಗಳ ಯೋಜನೆ ಗೋತಾ ಹೊಡೆಯಲಿದೆ.
ಹೋರಾಟದ ಹಾದಿ: ಜಿಲ್ಲಾಡಳಿತದ ಉದಾಸೀನ ಧೋರಣೆಯಿಂದ ಈ ಯೋಜನೆ ಎಂದೋ ಗೋತಾ ಹೊಡೆಯಬೇಕಾಗಿತ್ತು. ಆದರೆ, ಸಾಮಾಜಿಕ ಹೋರಾಟಗಾರರ ನಿರಂತರ ಕಳಕಳಿ ಯೋಜನೆ ಇನ್ನೂ ಜೀವಂತವಾಗಿದೆ. 2013ರ ಅಕ್ಟೋಬರ್ನಿಂದ ಜಿಲ್ಲಾಡಳಿತ ಹಾಗೂ ಸರ್ಕಾರವನ್ನು ಸಾಮಾಜಿಕ ಹೋರಾಟಗಾರರು ಎಚ್ಚರಿಸುತ್ತಾ ಬಂದಿದ್ದಾರೆ. ಪ್ರಮುಖವಾಗಿ ಶಾಂತವೇರಿ ಗೋಪಾಲಗೌಡ ಅಧ್ಯಯನ ಕೇಂದ್ರದ ಕಲ್ಲೂರು ಮೇಘರಾಜ್ ಹಾಗೂ ಅಣ್ಣಾ ಹಜಾರೆ ಹೋರಾಟ ಸಮಿತಿಯ ಅಶೋಕ್ ಯಾದವ್ ನಿರಂತರವಾಗಿ ಯೋಜನೆಯ ಬೆನ್ನುಬಿದ್ದಿದ್ದಾರೆ.
8 ತಿಂಗಳಿಂದೀಚೆಗೆ ಸಾರಿಗೆ ಸಚಿವರು, ನಗರಾಭಿವೃದ್ಧಿ ಸಚಿವರು, ನಗರಾಭಿವೃದ್ಧಿ ಪ್ರಾಧಿಕಾರದ ರಾಜ್ಯ ಕಾರ್ಯದರ್ಶಿ ಟಿ.ಕೆ. ಅನಿಲ್ಕುಮಾರ್ ಸೇರಿದಂತೆ ಜಿಲ್ಲಾಡಳಿತಕ್ಕೆ ಖುದ್ದಾಗಿ ಮನವಿ ನೀಡುತ್ತಲೇ ಬಂದಿದ್ದಾರೆ. ಸಾರ್ವಜನಿಕರು ಹಾಗೂ ಜಿಲ್ಲಾಡಳಿತದ ಗಮನ ಸೆಳೆಯಲು 4 ಪತ್ರಿಕಾಗೋಷ್ಠಿ ನಡೆಸಿದ್ದಾರೆ. 5 ಬಾರಿ ಹೋರಾಟ ನಡೆಸಿದ್ದಾರೆ. ಒಮ್ಮೆ ಕೆಎಸ್ಆರ್ಟಿಸಿ ಡಿಪೋ ಮುಂಭಾಗ ಮಲಗಿ ಪ್ರತಿಭಟಿಸಿದ್ದೂ ಇದೆ. ವಿದ್ಯಾರ್ಥಿಗಳನ್ನು ಸೇರಿಸಿ ದೊಡ್ಡ ಹೋರಾಟವೂ ನಡೆಯಿತು. ಹೋರಾಟವಷ್ಟೇ ಅಲ್ಲ, ಬಸ್ ಟರ್ಮಿನಲ್, ಡಿಪೋ, ವರ್ಕ್ ಶಾಪ್ಗೆ ಅಗತ್ಯ ಜಾಗ ಸಹ ವೀಕ್ಷಿಸಿ ಜಿಲ್ಲಾಡಳಿತಕ್ಕೆ ಸಲಹೆ ನೀಡಿತು. ಆದರೆ, ಹೋರಾಟಗಾರರ ಸಲಹೆ ಜಿಲ್ಲಾಡಳಿತ ತಿರಸ್ಕರಿಸಿತು. ಸೋಗಾನೆಯಲ್ಲಿ 8.9 ಎಕರೆ ಜಾಗವನ್ನು ಜಿಲ್ಲಾಡಳಿತ ಗುರುತಿಸಿತು.
ವಿಶೇಷವೆಂದರೆ ಕೆಎಸ್ಆರ್ಟಿಸಿ ಅಧಿಕಾರಿಗಳು ಜಿಲ್ಲಾಡಳಿತ ಸರ್ವೆ ನಡೆಸಿದ ಜಾಗ ಯೋಜನೆಗೆ ಸರಿಯಲ್ಲ ಎಂದು ಅಭಿಪ್ರಾಯಪಟ್ಟರು. ಜಿಲ್ಲಾಡಳಿತ ನೋಡಿದ ಜಾಗದಿಂದ ಪ್ರತಿದಿನ ಬಸ್ ಶಿವಮೊಗ್ಗಕ್ಕೆ ಬಂದು ಹೋಗಲು 600 ಯಷ್ಟು ಡೀಸಲ್ ಬೇಕಾಗಬಹುದು. ಹಾಗೆಯೇ ಬಸ್ ಚಾಲಕರು, ನಿರ್ವಾಹಕರಿಗೂ ಸಮಸ್ಯೆಯಾಗಲಿದೆ ಎಂದು ಅಭಿಪ್ರಾಯಪಟ್ಟರು. ಈ ನಡುವೆಯೇ ಶಿವಮೊಗ್ಗ ನಗರದಲ್ಲಿ ಹಾಲಿ ಸಂಚರಿಸುತ್ತಿರುವ ಖಾಸಗಿ ಸಿಟಿ ಬಸ್ ಮಾಲೀಕರು- ಕಾರ್ಮಿಕರು ನಗರ ಸಾರಿಗೆಗೆ ಅವಕಾಶ ಬೇಡ. ಇನ್ನೊಂದೆಡೆ ಸರ್ಕಾರಿ ನಗರ ಸಾರಿಗೆ ಬೇಕೆಂಬ ಹೋರಾಟ ಮುಂದುವರಿಯಿತು. ಹೋರಾಟಗಾರರಿಗೆ ಜಿಲ್ಲಾಧಿಕಾರಿ ಅವರು ಬಸ್ಗೆ ಪರ್ಮಿಟ್ ನೀಡಲು ನಾವು ಸಿದ್ಧ ಎಂದೂ ಹೇಳಿಬಿಟ್ಟರು. ಸದ್ಯದ ಮಾಹಿತಿ ಪ್ರಕಾರ ಜಿಲ್ಲಾಡಳಿತ ಯಾವುದೇ ನಿರ್ಧಾರ ತೆಗೆದುಕೊಂಡಿಲ್ಲ.
ಒಂದು ವೇಳೆ ಯಥಾಸ್ಥಿತಿ ಮುಂದುವರಿದರೆ ಯೋಜನೆ ಕಾರ್ಯಗತವಾಗುವುದು ಅನುಮಾನ ಎಂದು ಸರ್ಕಾರಿ ನಗರ ಸಾರಿಗೆಗಾಗಿ ಹೋರಾಟ ಮಾಡಿಕೊಂಡು ಬಂದಿರುವ ಸಾಮಾಜಿಕ ಕಾರ್ಯಕರ್ತರು ಅಭಿಪ್ರಾಯಪಡುತ್ತಾರೆ.
ಅನಗತ್ಯ ಗೊಂದಲ ಸೃಷ್ಟಿ: ಡಿಸಿ
ಬಸ್ ಖರೀದಿ ರಾಜ್ಯ ಸರ್ಕಾರದ ಮಟ್ಟದಲ್ಲಿ ನಡೆಯುವ ಪ್ರಕ್ರಿಯೆ. ಜಿಲ್ಲಾಡಳಿತ ಈ ವಿಚಾರದಲ್ಲಿ ನಿರ್ಧಾರ ತೆಗೆದುಕೊಳ್ಳಲು ಸ್ವತಂತ್ರವಲ್ಲ. ಅವರು ಬಸ್ ಖರೀದಿಸಿ ನೀಡಿದರೆ, ಉಳಿದ ಪ್ರಕ್ರಿಯೆಯನ್ನು ಜಿಲ್ಲಾಡಳಿತ ಮುಂದುವರಿಸುತ್ತದೆ. ಮೊದಲು ರಾಜ್ಯ ಸರ್ಕಾರದಿಂದ ಟೆಂಡರ್ ಆಗಬೇಕು. ಅದನ್ನು ಜಿಲ್ಲಾಡಳಿತಕ್ಕೆ ಹಸ್ತಾಂತರಿಸಬೇಕು. ಆದರೆ, ಕೆಲವು ವ್ಯಕ್ತಿಗಳು, ಸಂಘಟನೆಗಳು ಅನಗತ್ಯವಾಗಿ ಪ್ರತಿಭಟನೆ ಮಾಡಿ ಗೊಂದಲ ಸೃಷ್ಟಿಸುತ್ತಿದ್ದಾರೆ ಎಂದು ಜಿಲ್ಲಾಧಿಕಾರಿ ವಿಪುಲ್ ಬನ್ಸಲ್ ಪ್ರತಿಕ್ರಿಯೆ ನೀಡಿದ್ದಾರೆ.
ಬೇಜವಾಬ್ದಾರಿ ಪರಮಾವಧಿ
8 ತಿಂಗಳ ಹಿಂದೆ ಜೆನರ್ಮ್ ಯೋಜನೆಯಡಿ ಮಂಜೂರಾದ ಬಸ್ಗಳನ್ನು ಸಾರ್ವಜನಿಕ ಸೇವೆಗೆ ಬಿಡುವಲ್ಲಿ ಜಿಲ್ಲಾಡಳಿತ ಎಡವಿದೆ, ಮಹಾ ನಿರ್ಲಕ್ಷ್ಯ ತೋರಿದೆ ಎಂದು ಅಣ್ಣಾ ಹಜಾರೆ ಹೋರಾಟ ಸಮಿತಿಯ ಅಶೋಕ್ ಯಾದವ್ ಹೇಳಿದ್ದಾರೆ. ಡಿಪೋ, ಕಾರ್ಯಾಗಾರಕ್ಕೆ ಅಗತ್ಯ ಜಾಗ ಹುಡುಕುವಲ್ಲಿಯೇ ಉದಾಸೀನ ಮಾಡಿ ಕಾಲಕಳೆಯಿತು. ಕನಿಷ್ಠ ನಾವು ಸಲಹೆ ಮಾಡಿದ ಜಾಗವನ್ನು ಒಪ್ಪಿಕೊಳ್ಳದೇ ನಾನಾ ಕಾರಣ ನೀಡಿತು ಎಂದು ತಿಳಿಸಿದ್ದಾರೆ.
ಜಿಲ್ಲಾಧಿಕಾರಿ ಬದಲಾಯಿಸಿ...
ಶಿವಮೊಗ್ಗ- ಭದ್ರಾವತಿ ನಗರಕ್ಕೆ ಕೇಂದ್ರ ಸರ್ಕಾರಿಂದ ಬಂದಿರುವ ಯೋಜನೆಯನ್ನು ಅನುಷ್ಠಾನ ಮಾಡಲು ಉದಾಸೀನ ಮಾಡುತ್ತಿರುವ ಜಿಲ್ಲಾಧಿಕಾರಿ ಅವರ ಅಭಿವೃದ್ಧಿ ಕಾಳಜಿ ಎಷ್ಟೆಂಬುದು ಗೊತ್ತಾಗುತ್ತದೆ. ಇಂತಹ ಅಭಿವೃದ್ಧಿಪರ ಚಿಂತನೆ ಇಲ್ಲದ ಜಿಲ್ಲಾಧಿಕಾರಿ ನಮಗೆ ಬೇಡವೇ ಬೇಡ. ಲೋಕಸಭಾ ಸದಸ್ಯ ಬಿ.ವೈ.ರಾಘವೇಂದ್ರ, ರಾಜ್ಯಸಭಾ ಸದಸ್ಯ ಆಯನೂರು ಮಂಜುನಾಥ್, ಉಸ್ತುವಾರಿ ಸಚಿವ ಕಿಮ್ಮನೆ ರತ್ನಾಕರ್, ಶಾಸಕ ಕೆ.ಬಿ.ಪ್ರಸನ್ನಕುಮಾರ್, ವಿಧಾನ ಪರಿಷತ್ ಸದಸ್ಯರಾದ ಎಂ.ಬಿ. ಭಾನುಪ್ರಕಾಶ್, ಆರ್.ಕೆ. ಸಿದ್ದರಾಮಣ್ಣ ಸೇರಿದಂತೆ ಮೇಯರ್ ಅವರು ಈ ಯೋಜನೆಯ ವಿಳಂಬ ನೀತಿ ಬಗ್ಗೆ ದನಿ ಎತ್ತಬೇಕು. ಇಲ್ಲವಾದರೆ ನಿಮ್ಮ ವಿರುದ್ಧವೇ ಜನ ದನಿ ಎತ್ತುತ್ತಾರೆ ಎಂದು ಎಂದು ಶಾಂತವೇರಿ ಗೋಪಾಲಗೌಡ ಅಧ್ಯಯನ ಕೇಂದ್ರದ ಕಲ್ಲೂರು ಮೇಘರಾಜ್ ಹಾಗೂ ಅಶೋಕ್ ಯಾದವ್ ಅಭಿಪ್ರಾಯಪಟ್ಟಿದ್ದಾರೆ.