ಮಳೆಹಾನಿ ಪರಿಹಾರದಲ್ಲಿ ತಾರತಮ್ಯ ಬೇಡ
ಕ.ಪ್ರ.ವಾರ್ತೆ ಶಿರಾಳಕೊಪ್ಪ ಮೇ 2
ರಾಜ್ಯದಲ್ಲಿ ನಾನೇ ಇರಲಿ, ಮತ್ತೊಬ್ಬರೇ ಅಧಿಕಾರದಲ್ಲಿರಲಿ, ಅಥವಾ ಯಾವುದೇ ಸರ್ಕಾರ ಆಡಳಿತಕ್ಕೆ ಬಂದಿರಲಿ. ಪ್ರಕೃತಿ ವಿಕೋಪ ಸಂಭವಿಸಿದಾಗ ಯಾವುದೇ ತಾರತಮ್ಯ ಮಾಡದೇ ಜನಸಾಮಾನ್ಯರಿಗೆ ಸೂಕ್ತ ಹಾಗೂ ಶೀಘ್ರ ಪರಿಹಾರ ಕಲ್ಪಿಸಲಾಗುವುದು. ಈ ನಿಟ್ಟಿನಲ್ಲಿ ಯಾವುದೇ ಆತಂಕ ಬೇಡ ಎಂದು ಮಾಜಿ ಮುಖ್ಯ ಮಂತ್ರಿ ಬಿ.ಎಸ್. ಯಡಿಯೂರಪ್ಪ ಅಭಯ ನೀಡಿದರು.
ಶಿರಾಳಕೊಪ್ಪ ಭಾಗದಲ್ಲಿ ಪ್ರಕೃತಿ ವಿಕೋಪಕ್ಕೆ ತುತ್ತಾದ ಮಳೂರ ಮತ್ತು ಜಾವಗಟ್ಟಿ ಗ್ರಾಮಗಳಿಗೆ ಭೇಟಿ ನೀಡಿದ ಅವರು, ಪ್ರವಾಹೋಪಾದಿಯಲ್ಲಿ ಆಗಮಿಸಿದ ಸಂತ್ರಸ್ತರನ್ನು ಸಮಾಧಾನಪಡಿಸಿದರು. ಈಗ ಬಂದಿರುವ ಪರಿಹಾರ ಮೊದಲು ಪಡೆದುಕೊಳ್ಳಿ. ನಂತರ ಹೆಚ್ಚು ಹಾನಿ ಆದವರ ಮತ್ತು ಪರಿಹಾರ ಬಾರದವರ ಬಗ್ಗೆ ಪ್ರಯತ್ನಿಸೋಣ ಎಂದು ತಿಳಿಸಿದರು.
ಮೊದಲು ಬಳ್ಳಿಗಾವಿ ಗ್ರಾಪಂಗೆ ಭೇಟಿ ನೀಡಿದ ಅವರು, ಅಧಿಕಾರಿಗಳೊಂದಿಗೆ ಈವರೆಗೆ ಹಾನಿ ಸಂಭವಿಸಿರುವ ಗ್ರಾಮಗಳಲ್ಲಿ ಕೈಗೊಂಡ ಕಾರ್ಯದ ಬಗ್ಗೆ ಮತ್ತು ಎಷ್ಟು ಹಾನಿ ಸಂಭವಿಸಿದೆ, ಎಷ್ಟು ಸಂತ್ರಸ್ತರು ಅರ್ಜಿ ಕೊಟ್ಟಿದ್ದಾರೆ ಎಂಬಿತ್ಯಾದಿ ಮಾಹಿತಿ ಪಡೆದು, ಹಾನಿಗೊಳಗಾದವರಿಗೆ ಯಾವುದೇ ಅನ್ಯಾಯ ಆಗದಂತೆ ಕ್ರಮ ಕೈಗೊಂಡು ಸಂತ್ರಸ್ತರ ಕೈಗೆ ಪರಿಹಾರಧನದ ಚೆಕ್ ನೀಡುವಂತಾಗಬೇಕು ಎಂದು ತಿಳಿಸಿದರು.
ಭಯಬೇಡ: ಈವರೆಗೆ ಯಾರು ಅರ್ಜಿ ಕೊಟ್ಟಿದ್ದೀರಿ ಅವರಿಗೆ ತಕ್ಷಣ ಪರಿಹಾರ ಸಿಗಲಿದೆ. ಅರ್ಜಿ ಕೊಡುತ್ತಿರುವವರಿಗೂ ಪರಿಹಾರ ದೊರಯಲಿದೆ. ಅರ್ಜಿ ಕೊಡುವುದು ವಿಳಂಬವಾಗಿದ್ದಲ್ಲಿ, ತಕ್ಷಣ ಈ ಬಗ್ಗೆ ಮುತುವರ್ಜಿ ವಹಿಸಬೇಕು. ಈ ವಿಷಯದಲ್ಲಿ ಯಾವುದೇ ತಾರತಮ್ಯ ಮಾಡದೇ ಅಧಿಕಾರಿಗಳು ಉತ್ತಮವಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಗ್ರಾಮಸ್ಥರು ಅವರೊಂದಿಗೆ ಸಹಕರಿಸಬೇಕು ಎಂದರು.
ಬಿ.ಎಸ್. ಯಡಿಯೂರಪ್ಪ ಅವರು ಬರುತ್ತಾರೆ ಎಂಬ ಸಂಗತಿ ಅರಿತ ವಿಶೇಷವಾಗಿ ಮಹಿಳೆಯರು ಗ್ರಾಪಂಗೆ ಆಗಮಿಸಿ ತಮ್ಮ ನಾಯಕ ಏನು ಹೇಳುತ್ತಾರೆ ಎಂಬುದನ್ನು ಕೇಳಿ ಗ್ರಾಪಂನಲ್ಲಿ ಚೆಕ್ ವಿತರಣೆಯಲ್ಲಿ ಭಾಗವಹಿಸಿದ ಗ್ರಾಮಸ್ಥರು ಸಾಲಾಗಿ ನಿಂತು ಚೆಕ್ ಪಡೆದರು.
48 ಗಂಟೆಯಲ್ಲಿ ಪರಿಹಾರ: ಮಳೂರ ಮತ್ತು ಜಾವಗಟ್ಟಿ ಗ್ರಾಮಸ್ಥರಿಗೆ ಪ್ರಕೃತಿ ವಿಕೋಪ ಸಂಭವಿಸಿದ 48 ಗಂಟೆಯಲ್ಲಿ ಸ್ಥಳ ಪರಿಶೀಲಿಸಿ 600 ಸಂತ್ರಸ್ತರ ಅರ್ಜಿ ಪಡೆದು, ಹಣ ಬಿಡುಗಡೆಯಾದ 420 ಗ್ರಾಮಸ್ಥರಿಗೆ ಪರಿಹಾರ ವಿತರಣೆಯ ಚೆಕ್ ಅನ್ನು ಶುಕ್ರವಾರ ವಿತರಿಸಲಾಗಿದೆ. ಉಳಿದ ಸಂತ್ರಸ್ತರಿಗೆ ಚೆಕ್ ಸಿದ್ಧವಿದೆ ಎಂದು ಅಧಿಕಾರಿಗಳಿಂದ ತಿಳಿದುಬಂದಿದೆ.
ರಾತ್ರಿ ಪೂರ್ಣ ಕೆಲಸ: ಉಪವಿಭಾಗಾದಿಕಾರಿ ಡಾ.ಉದಯಕುಮಾರ್ ಶೆಟ್ಟಿ ಮತ್ತು ತಹಸೀಲ್ದಾರ್ ಜಗದೀಶ್, ಉಪತಹಸೀಲ್ದಾರ್ ಆನಂದ ಗರಡಿ ಹಾಗೂ ಸಿಬ್ಬಂದಿ ಅವರ ಹಗಲು ರಾತ್ರಿ ಪರಿಶ್ರಮದಿಂದ ಸಂತ್ರಸ್ತರಿಗೆ ಕೇವಲ 48 ಗಂಟೆಯಲ್ಲಿ ಪರಿಹಾರ ವಿತರಿಸಿ ಎಲ್ಲರ ಪ್ರಶಂಸೆಗೆ ಪಾತ್ರರಾಗಿದ್ದಾರೆ. ಇದೊಂದು ಸಾಹಸದ ಕಾರ್ಯ ಎಂದು ಮಾಜಿ ಶಾಸಕ ಮಹಲಿಂಗಪ್ಪ ಮತ್ತು ಜಿಪಂ ಸ್ಥಾಯಿ ಸಮಿತಿ ಅಧ್ಯಕ್ಷ ರುದ್ರಪ್ಪ ದಾನೇರ್ ಪ್ರತಿಕ್ರಿಯೆ ವ್ಯಕ್ತಪಡಿಸಿದ್ದಾರೆ.
ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ಜೊತೆ ಸಂಸದ ಬಿ.ವೈ. ರಾಘವೇಂದ್ರ, ಮಾಜಿ ಶಾಸಕ ಮಹಲಿಂಗಪ್ಪ, ಜಿಪಂ ಸ್ಥಾಯಿ ಸಮಿತಿ ಅಧ್ಯಕ್ಷ ರುದ್ರಪ್ಪ ದಾನೇರ್, ಡಿಸಿಸಿ ಬ್ಯಾಂಕ್ ನಿರ್ದೇಶಕ ಚೆನ್ನವೀರಪ್ಪ, ತಾಪಂ ಸದಸ್ಯ ಈಶ್ವರಪ್ಪ, ಗ್ರಾಪಂ ಸದಸ್ಯ ಜಾವಗಟ್ಟಿ ಪಾಲಾಕ್ಷಪ್ಪ, ಲೋಕೇಶ್, ಮಂಚಿ ಶಿವಣ್ಣ ಹಾಗೂ ತಹಸೀಲ್ದಾರ್ ಜಗದೀಶ್, ತಾಪಂ ಕಾರ್ಯನಿರ್ವಣಾಧಿಕಾರಿ ಡಾ.ಚಂದ್ರಶೇಖರ ಇತರ ಹಲವಾರು ಪ್ರಮುಖರು ಇದ್ದರು.