ಸಪ್ತಸೂತ್ರ ಜಗತ್ತಿನ ಅತಿ ದೊಡ್ಡ ನೈತಿಕ ಪಾಠ
ಕ.ಪ್ರ.ವಾರ್ತೆ ಟಿ ಶಿವಮೊಗ್ಗ ಟಿ ಮೇ 2
ಬಸವಣ್ಣನವರು ಕಲಬೇಡ, ಕೊಲಬೇಡ ಎಂದು ಹೇಳಿದ ಸಪ್ತಸೂತ್ರಗಳು ಜಗತ್ತಿನ ಅತಿ ದೊಡ್ಡ ನೈತಿಕ ಪಾಠಗಳು. ಇದನ್ನು ಪಾಲಿಸಿದರೆ ಯಾವ ಆಗಮ, ಉಪನಿಷತ್ತುಗಳೂ ಬೇಡ ಎಂದು ಕವಲೆದುರ್ಗದ ಕೆಳದಿ ಸಂಸ್ಥಾನ ಮಠದ ರಾಜಗುರು ಡಾ. ಸಿದ್ದಲಿಂಗ ಶಿವಾಚಾರ್ಯ ಮಹಾಸ್ವಾಮೀಜಿ ಹೇಳಿದರು.
ನಗರದಲ್ಲಿ ಶುಕ್ರವಾರ ಸಂಜೆ ಕುವೆಂಪು ರಂಗಮಂದಿರದಲ್ಲಿ ಆಯೋಜಿಸಿದ್ದ ಬಸವ ಜಯಂತಿ ಕಾರ್ಯಕ್ರಮವನ್ನು ಬೆಕ್ಕಿನಕಲ್ಮಠ ಶ್ರೀಗಳೊಡಗೂಡಿ ಉದ್ಘಾಟಿಸಿ ಉಪನ್ಯಾಸ ನೀಡಿದ ಅವರು, ಸಮಾಜದಲ್ಲೀಗ ನೈತಿಕ ಮೌಲ್ಯ ಕುಸಿದಿದೆ. ಟಿವಿ ಚಾನಲ್ ಗಳನ್ನು ನೋಡಿದರೆ ನೈತಿಕ ಮೌಲ್ಯ ಎಷ್ಟು ಹಾಳಾಗಿದೆ ಎಂದು ಗೊತ್ತಾಗುತ್ತದೆ ಎಂದು ವಿಷಾದಿಸಿದರು.
ತನಗೆ ಜನಿವಾರ ಹಾಕುತ್ತಾರೆ ತನ್ನ ಅಕ್ಕನಿಗೆ ಏಕೆ ಇಲ್ಲ ಎಂದು ಪ್ರಶ್ನಿಸಿ ವೈದಿಕ ಧರ್ಮದಿಂದ ಹೊರಬಂದ ಬಸವಣ್ಣ ವೀರಶೈವ ಧರ್ಮ ಸ್ವೀಕಾರ ಮಾಡಬೇಕಾಯಿತು. ಅಂದು ಜಾತಿ ಸಂಘರ್ಷ, ವರ್ಣಾಶ್ರಮ ವ್ಯವಸ್ಥೆ ಪ್ರಭಾವಶಾಲಿಯಾಗಿತ್ತು. ಅವುಗಳ ವಿರುದ್ಧ ಹೋರಾಡಿ ಸಮಾಜದಲ್ಲಿ ಸಮಾನತೆ ತರುವ ಪ್ರಯತ್ನ ನಡೆಸಿದರು ಎಂದರು.
ಸಂಪತ್ತು ಕೂಡಿಡಬೇಡಿ ಎಂದು ಬಸವಣ್ಣನವರು ಅಂದೇ ಹೇಳಿದ್ದರು ಎಂದು ತಿಳಿಸಿದರು.
ಬಸವಣ್ಣಗೆ ಅಪಚಾರ: ರಾಜ್ಯಸಭಾ ಸದಸ್ಯ ಆಯನೂರು ಮಂಜುನಾಥ್, ಬಸವಣ್ಣನವರ ಅನುಯಾಯಿಗಳು ಎಂದು ಹೇಳಿಕೊಳ್ಳುವವರಲ್ಲೇ ವಿರೋಧಾಬಾಸಗಳು ಕಾಣುತ್ತಿವೆ. ಎಲ್ಲರೂ ಸಮಾನರು ಎಂದು ಬಸವಣ್ಣನವರು ಹೇಳಿದರೆ, ಇಂದು ಹಿಂದುಳಿಯಲು ಪೈಪೋಟಿ ನಡೆಯುತ್ತಿದೆ. ವೀರಶೈವರು-ಲಿಂಗಾಯಿತರು ಬೇರೆಬೇರೆ ಎಂದು ಗುರುಗಳೇ ಬಹಿರಂಗವಾಗಿ ಚರ್ಚೆ ಮಾಡುತ್ತಿದ್ದಾರೆ. ಇದು ಬಸವಣ್ಣನಿಗೆ ಮಾಡುವ ಅಪಚಾರ ಎಂದರು.
ಬಸವ ಜಯಂತಿ ಕಾರ್ಯಕ್ರಮಕ್ಕೆ ಮಾತುಗಳನ್ನು ಕೇಳಲು ಜನ ಬರುವುದಿಲ್ಲ. ಆದರೆ ದಾಹೋಹಕ್ಕೆ ಖಂಡಿತಾ ಎರಡುಪಟ್ಟು ಜನ ಬರುತ್ತಾರೆ. ಈ ಮನಸ್ಥಿತಿ ಏಕೆ ಗುರುಗಳಿರುವುದೇ ಮಾತನಾಡೋಕೆ. ನಾವು ನಮ್ಮ ಪಾಡಿಗೆ ಇರೋಣ ಎಂದು ಚಿಂತಿಸುತ್ತಾರೆ ಎಂದು ಮಂಜುನಾಥ್ ಕಟುವಾಗಿ ಹೇಳಿದರು.
ಶಾಸಕ ಕೆ.ಬಿ. ಪ್ರಸನ್ನಕುಮಾರ್ ಅಧ್ಯಕ್ಷತೆ ವಹಿಸಿದ್ದ ಕಾರ್ಯಕ್ರಮದಲ್ಲಿ ಸಂಸದ ಬಿ.ವೈ. ರಾಘವೇಂದ್ರ, ಶ್ರೀ ಬಸವೇಶ್ವರ ವೀರಶೈವ ಸಮಾಜ ಸೇವಾ ಸಂಘದ ಅಧ್ಯಕ್ಷ ಎಸ್.ಎಸ್. ಜ್ಯೋತಿ ಪ್ರಕಾಶ್ ಸೇರಿದಂತೆ ಹಲವರು ಮಾತನಾಡಿದರು.
ಬೆಕ್ಕಿನಕಲ್ಮಠದ ಶ್ರೀ ಮಲ್ಲಿಕಾರ್ಜುನ ಮುರುಘರಾಜೇಂದ್ರ ಸ್ವಾಮೀಜಿಗಳು, ಬಸವಕೇಂದ್ರದ ಶ್ರೀ ಬಸವ ಮರುಳಸಿದ್ಧ ಸ್ವಾಮೀಜಿಗಳು ಸಾನ್ನಿಧ್ಯ ವಹಿಸಿದ್ದರು.
ಕಾರ್ಯಕ್ರಮದಲ್ಲಿ ಮಹಾನಗರಪಾಲಿಕೆ ಸದಸ್ಯರಾದ ಎನ್.ಜೆ. ರಾಜಶೇಖರ್, ರೇಣುಕಾ ನಾಗರಾಜ್, ಅರ್ಚನಾ ಬಳ್ಳೇಕೆರೆ, ಎಸ್.ಎಸ್. ಸತೀಶ್, ನಾಗರಾಜ ಕಂಕಾರಿ, ಮಾಲತೇಶ್, ಪಾಲಿಕೆ ಆಯುಕ್ತ ಮೂಕಪ್ಪ ಕರಭೀಮಣ್ಣನವರ್, ತಹಸೀಲ್ದಾರ್ ರಾಜಗೋಪಾಲ್, ರಾಜ್ಯ ಸರ್ಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷ ಸಿ.ಎಸ್. ಷಡಾಕ್ಷರಿ, ಶ್ರೀ ಬಸವೇಶ್ವರ ವೀರಶೈವ ಸಮಾಜ ಸಮಾಜ ಸೇವಾ ಸಂಘದ ಉಪಾಧ್ಯಕ್ಷ ಪಿ. ಆನಂದವಾಲಿ ಸೇರಿದಂತೆ ಹಲವರು ಪಾಲ್ಗೊಂಡಿದ್ದರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಕುಮಾರ ಬೆಕ್ಕೆರಿ ಸ್ವಾಗತಿಸಿದರು. ಶಾಂತಾ ಆನಂದ್ ನಿರೂಪಿಸಿದರು. ಕಾರ್ಯಕ್ರಮಕ್ಕೆ ಮುನ್ನ ನಗರದ ಪ್ರಮುಖ ಬೀದಿಗಳಲ್ಲಿ ಬಸವೇಶ್ವರರ ಮೆರವಣಿಗೆ ನಡೆಯಿತು.
ಅತಿಥಿಗಳು ಬರಲೇ ಇಲ್ಲ...
ಕಾರ್ಯಕ್ರಮದ ಆಹ್ವಾನ ಪತ್ರಿಕೆಯಲ್ಲಿ ಒಟ್ಟು 34 ಹೆಸರುಗಳಿದ್ದವು. ಆದರೆ ಜನಪ್ರತಿನಿಧಿಗಳು, ಅಧಿಕಾರಿಗಳು ಸೇರಿ ಪಾಲ್ಗೊಂಡಿದ್ದು 6 ಗಣ್ಯರು ಮಾತ್ರ. ಜಿಲ್ಲಾಧಿಕಾರಿಯಾದಿಯಾಗಿ ಹಲವು ಅಧಿಕಾರಿಗಳು ಕಾಣಿಸಿಕೊಳ್ಳಲಿಲ್ಲ.
ಅಲ್ಲದೇ, ವೀರಶೈವ ಸಮಾಜದವರಿಗೆ ಮಾತ್ರ ಕಾರ್ಯಕ್ರಮ ಆಯೋಜನೆ ಮಾಡಿದಂತಿತ್ತು. ಬೇರೆ ಸಮುದಾಯದವರು ಕಾಣಿಸಿಕೊಳ್ಳಲಿಲ್ಲ. ಆಯನೂರು ಮಂಜುನಾಥ್ ಅವರು ತಮ್ಮ ಭಾಷಣದಲ್ಲಿ ಸೂಚ್ಯವಾಗಿ ಇದನ್ನು ಹೇಳಿದರು. ಒಟ್ಟಿನಲ್ಲಿ ಯಾರಿಗೂ ಆಸಕ್ತಿ ಇಲ್ಲವೇನೋ ಎಂಬಂತೆ ಕಾರ್ಯಕ್ರಮ ನಡೆಯಿತು. ಆದರೆ ನಿರೀಕ್ಷೆಯಂತೆ ಪ್ರಸಾದ (ಭೋಜನ) ಸಂದರ್ಭದಲ್ಲಿ ಜನರು ಕಿಕ್ಕಿರಿದಿದ್ದರು.