ಶಿಕ್ಷಕರ ಸ್ಥಳಾಂತರ ಕೌನ್ಸೆಲಿಂಗ್
ಚಿಕ್ಕಮಗಳೂರು: ಪ್ರಾಥಮಿಕ ಮತ್ತು ಪ್ರೌಢ ಶಾಲೆಗಳ ಹೆಚ್ಚುವರಿ ಶಿಕ್ಷಕರ ಹುದ್ದೆಗಳನ್ನು ಸ್ಥಳಾಂತರಗೊಳಿಸಲು ಇಲಾಖೆಯ ಆಯುಕ್ತರು ಆದೇಶಿಸಿದ್ದು, ಅದರಂತೆ ಆಯಾ ತಾಲೂಕು ಕೇಂದ್ರಗಳಲ್ಲಿ ಸ್ಥಳಾಂತರ ಕೌನ್ಸೆಲಿಂಗ್ ಮಾಡಲಾಗುವುದು ಎಂದು ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪ ನಿರ್ದೇಶಕರಾದ ರಾಜಪ್ಪ ತಿಳಿಸಿದ್ದಾರೆ. ಹೆಚ್ಚುವರಿ ಖಾಲಿ ಹುದ್ದೆ ಮತ್ತು ಶಿಕ್ಷಕರ ಹುದ್ದೆಗಳ ಪಟ್ಟಿಯನ್ನು ಶನಿವಾರದಂದು ಆಯಾಯ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿಯಲ್ಲಿ ಪ್ರಕಟಿಸಲಾಗಿದೆ. ಆಕ್ಷೇಪಣೆ ಸಲ್ಲಿಸಲು ಮೇ 8 ಕೊನೆಯ ದಿನ. ಮೇ 9ರಂದು ಅಂತಿಮ ಪಟ್ಟಿಯನ್ನು ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿಯಲ್ಲಿ ಪ್ರಕಟಿಸಲಾಗುವುದು. ಮೇ 13ರಂದು ತಾಲೂಕಿನ ಒಳಗೆ ಪ್ರಾಥಮಿಕ ಶಾಲಾ ಶಿಕ್ಷಕರ ಕೌನ್ಸೆಲಿಂಗ್ ನಡೆಯಲಿದೆ. ಜಿಲ್ಲಾ ಪ್ರೌಢಶಾಲಾ ಶಿಕ್ಷಕರ ಕೌನ್ಸೆಲಿಂಗ್ ಮೇ 14 ರಂದು, ಜಿಲ್ಲಾ ಹಂತದ ಪ್ರಾಥಮಿಕ ಶಾಲಾ ಶಿಕ್ಷಕರ ಕೌನ್ಸೆಲಿಂಗ್ ಮೇ 15 ರಂದು ಉಪ ನಿರ್ದೇಶಕರ ಕಚೇರಿಯಲ್ಲಿ ನಡೆಯಲಿದೆ ಎಂದು ತಿಳಿಸಿದ್ದಾರೆ.
ಮಹಾತ್ಮರ ತತ್ವ ಪಾಲನೆ ಅಗತ್ಯ
ಚಿಕ್ಕಮಗಳೂರು: ಬಸವಣ್ಣ, ಅಂಬೇಡ್ಕರ್, ಬುದ್ಧ ಅವರ ತತ್ತ್ವ ಸಿದ್ಧಾಂತಗಳನ್ನು ಪ್ರತಿಯೊಬ್ಬರೂ ಮೈಗೂಡಿಸಿಕೊಂಡು ಸಮಾಜಕ್ಕೆ ಮಾದರಿ ಆಗಬೇಕೆಂದು ಬಿಎಸ್ಪಿ ಮುಖಂಡರಾದ ಕೆ.ಟಿ.ರಾಧಾಕೃಷ್ಣ ಹೇಳಿದ್ದಾರೆ. ನಗರದ ಬಿಎಸ್ಪಿ ಕಚೇರಿಯಲ್ಲಿ ಶುಕ್ರವಾರ ನಡೆದ ಬಸವ ಜಯಂತಿ ಕಾರ್ಯಕ್ರಮದಲ್ಲಿ ಬಸವಣ್ಣ ಅವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಮಾತನಾಡಿದ ಅವರು, ರಾಜಕೀಯ ಪಕ್ಷಗಳು ಜಾತಿವಾರು ಮತಗಳನ್ನು ಪಡೆಯಲು ಜಯಂತಿ ಕಾರ್ಯಕ್ರಮಗಳನ್ನು ಆಚರಿಸುತ್ತಿದ್ದಾರೆ. ಅವರ ತತ್ವಗಳನ್ನು ಯಾರೊಬ್ಬರೂ ಪಾಲಿಸುತ್ತಿಲ್ಲ ಎಂದರು. ಬಸವಣ್ಣ ಎಲ್ಲಾ ವರ್ಗದ ಸಮಾನತೆಗೆ 12ನೇ ಶತಮಾನದಲ್ಲೇ ಶ್ರಮಿಸಿದರು. ಅನುಭವ ಮಂಟಪದಲ್ಲಿ ವಿಶೇಷ ಕಾರ್ಯಕ್ರಮ ಹಾಕಿಕೊಂಡು ಜಾಗೃತಿ ಮೂಡಿಸಿದ್ದರು ಎಂದು ಹೇಳಿದರು. ಜಿ.ಕೆ.ಬಸವರಾಜ್ ಮಾತನಾಡಿ, ಸರ್ಕಾರಗಳು ಜಯಂತಿ ಆಚರಣೆಗಳನ್ನು ನಾಮ್ಕೇವಾಸ್ತೆ ಎಂಬಂತೆ ಮಾಡದೆ ಅರ್ಥಪೂರ್ಣವಾಗಿ ಆಚರಿಸಬೇಕು. ಪ್ರತಿಯೊಬ್ಬರಿಗೂ ಅವರ ವ್ಯಕ್ತಿತ್ವವನ್ನು ತಿಳಿಸಿ ದೇಶಕ್ಕಾಗಿ ಹೋರಾಡಿದಂತಹ ಮಹಾನ್ ವ್ಯಕ್ತಿಗಳ ಬಗ್ಗೆ ವಿಶೇಷ ಮಾರ್ಗದರ್ಶನ ನೀಡಬೇಕು ಎಂದು ತಿಳಿಸಿದರು. ಬಹುಜನ ಪಕ್ಷದ ಮುಖಂಡರಾದ ಪಿ.ವೇಲಾಯುಧನ್, ಹರೀಶ್, ಮಂಜುನಾಥ್, ಕುಮಾರ್, ಚಂದ್ರು, ಶಿವಣ್ಣ ಉಪಸ್ಥಿತರಿದ್ದರು.