ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಶಿವಮೊಗ್ಗ

ಕುದುರೆಮುಖ ಕೇಂದ್ರೀಯ ವಿದ್ಯಾಲಯ ಕೆವಿಎಸ್‌ಗೆ ವಹಿಸಲು ಚಿಂತನೆ

Rashmi Kasaragodu
Updated On : 5 May 2014, 11:47 am

ಚಿಕ್ಕಮಗಳೂರು: ಕೆವಿಎಸ್(ಕೇಂದ್ರೀಯ ವಿದ್ಯಾಲಯ ಸಂಘಟನ್) ಸಂಸ್ಥೆಯಿಂದ ಜಿಲ್ಲಾಡಳಿತ ತನ್ನ ವಶಕ್ಕೆ ತೆಗೆದುಕೊಂಡಿರುವ ಕುದುರೆಮುಖದ ಕೇಂದ್ರೀಯ ವಿದ್ಯಾಲಯವನ್ನು ಮುಂದಿನ ದಿನಗಳಲ್ಲಿ ಮತ್ತೆ ಕೆವಿಎಸ್ ಸಂಸ್ಥೆಗೆ ವಹಿಸಲು ಸರ್ಕಾರದ ಮಟ್ಟದಲ್ಲಿ ಚಿಂತನೆ ನಡೆಯುತ್ತಿದೆ.
ಈ ಶಾಲೆಯಲ್ಲಿ ಓದುತ್ತಿರುವ ವಿದ್ಯಾರ್ಥಿಗಳ ಮುಂದಿನ ವಿದ್ಯಾಭ್ಯಾಸ ಹಾಗೂ ಈ ಶಾಲೆಯನ್ನು ಇಲ್ಲಿಯೇ ಉಳಿಸಿಕೊಳ್ಳುವ ಬಗ್ಗೆ ಹಿರಿಯ ಅಧಿಕಾರಿಗಳ ಮಟ್ಟದಲ್ಲಿ ಚರ್ಚೆ ನಡೆಯುತ್ತಿದೆ.
ತಮಗೆ ನಡೆಸಲು ಸಾಧ್ಯವಿಲ್ಲ ಎಂದು ಹೇಳುವ ಮೂಲಕ ಕುದುರೆಮುಖ ಅದಿರು ಕಂಪನಿ ಕೇಂದ್ರೀಯ ವಿದ್ಯಾಲಯದ 3 ದಶಕದ ಸಂಬಂಧ ಕಳೆದುಕೊಂಡಿದೆ.
ಈ ಶಾಲೆಯನ್ನು ತನ್ನ ಸ್ವಂತ ಶಕ್ತಿಯ ಮೇಲೆ ನಡೆಸಲು ಕೇಂದ್ರೀಯ ವಿದ್ಯಾಲಯ ಸಂಘಟನ್‌ನಲ್ಲಿ ಯಾವುದೇ ಸಂಪನ್ಮೂಲ ಇಲ್ಲ. ಆದ್ದರಿಂದ ಈ ಶಾಲೆ ಮುಚ್ಚಲಾಗಿತ್ತು. ಹೈಕೋರ್ಟ್ ಸೂಕ್ತ ಸಮಯದಲ್ಲಿ ನೀಡಿದ ಆದೇಶದಿಂದಾಗಿ ಶಾಲೆ ಪುನಾರಂಭಗೊಂಡಿದೆ. ಆದರೆ, ಮುಂದೇನು ಎಂಬ ಪ್ರಶ್ನೆಗೆ ಒಂದೇ ಸಾಲಿನಲ್ಲಿ ಉತ್ತರ ಕಂಡುಕೊಳ್ಳುವ ಮಟ್ಟದಲ್ಲಿ ರಾಜ್ಯ ಸರ್ಕಾರ ಇಲ್ಲ. ಇದಕ್ಕೆ ಒಂದಲ್ಲ ಹಲವು ಕಾರಣಗಳಿವೆ.
ಕಾರಣ: 1- ಇದು, ಕೇಂದ್ರೀಯ ವಿದ್ಯಾಲಯ. ಇಲ್ಲಿ ಸಿಬಿಎಸ್‌ಇ ಪಠ್ಯ ಕ್ರಮದಡಿಯಲ್ಲಿ ವಿದ್ಯಾರ್ಥಿಗಳಿಗೆ ಶಿಕ್ಷಣ ನೀಡಲಾಗುತ್ತಿದೆ. ಜಿಲ್ಲಾಡಳಿತ ಶಾಲೆಯನ್ನು ತಾತ್ಕಾಲಿಕವಾಗಿ ಪುನಾರಂಭಿಸಿದೆ. ಆದರೆ, ಕರ್ನಾಟಕ ಶಿಕ್ಷಣ ಕಾಯ್ದೆಯ ಪ್ರಕಾರ ಸಿಬಿಎಸ್‌ಇ ಶಾಲೆಯನ್ನು ನಡೆಸಲು ರಾಜ್ಯ ಸರ್ಕಾರಕ್ಕೆ ಅವಕಾಶ ಇಲ್ಲ.
2- ಈ ಶಾಲೆಯನ್ನು ಜಿಲ್ಲಾಡಳಿತ ವಹಿಸಿಕೊಂಡ ನಂತರ ಇಲ್ಲಿನ ಶಿಕ್ಷಕರಿಗೆ ರಾಜ್ಯ ಸರ್ಕಾರ ವೇತನ ನೀಡಬೇಕು. ಇದಕ್ಕೆ ರಾಜ್ಯ ಹಣಕಾಸು ಇಲಾಖೆಯ ಒಪ್ಪಿಗೆ ಪಡೆಯಬೇಕು. ಇದು, ತಕ್ಷಣಕ್ಕೆ ಆಗುವ ಕೆಲಸವಲ್ಲ. ಇದಕ್ಕಾಗಿ ಪತ್ರ ವ್ಯವಹಾರ ನಡೆಸಬೇಕು. ಅದಕ್ಕೆ ಬಹಳಷ್ಟು ಸಮಯ ಬೇಕಾಗಬಹುದು. ವೇತನ ಅವಲಂಬಿತ ಇಲ್ಲಿನ ಶಿಕ್ಷಕರು ತುಂಬಾ ಸಮಯ ಕಾಯಲು ಸಾಧ್ಯವಿಲ್ಲ.
3- ಶಾಲೆಯನ್ನು ವಹಿಸಿಕೊಂಡಿರುವ ಜಿಲ್ಲಾಡಳಿತ ಗುತ್ತಿಗೆ ಆಧಾರದ ಮೇಲೆ ಶಿಕ್ಷಕರನ್ನು ನೇಮಕ ಮಾಡಬೇಕು. ಆದರೆ, ಇದು, ಸಿಬಿಎಸ್‌ಸಿ ಪಠ್ಯ ಕ್ರಮದ ಶಾಲೆಯಾಗಿರುವುದರಿಂದ ರಾಜ್ಯ ಶಿಕ್ಷಣ ಕಾಯ್ದೆಯ ಪ್ರಕಾರ ನೇಮಕಾತಿಗೆ ಅವಕಾಶ ಇಲ್ಲ.
ಪರ್ಯಾಯ: ಇಷ್ಟೆಲ್ಲಾ ಸಮಸ್ಯೆಗಳು ಸರ್ಕಾರದ ಮುಂದಿವೆ. ಆದರೂ ಈ ಶಾಲೆಯನ್ನು ವಹಿಸಿಕೊಂಡಿರುವ ಜಿಲ್ಲಾಡಳಿತ ಶಾಲೆಯ  ಪುನಾರಂಭಕ್ಕೆ ತೆಗೆದುಕೊಂಡಿರುವ ಕ್ರಮಗಳ ಬಗ್ಗೆ ಹೈಕೋರ್ಟ್‌ಗೆ ಇನ್ನೆರಡು ದಿನಗಳೊಳಗೆ ವರದಿ ಸಲ್ಲಿಸಲು ಉದ್ದೇಶಿಸಿದೆ ಎಂದು ಅಧಿಕೃತ ಮೂಲಗಳು ತಿಳಿಸಿವೆ. ಇದರ ಜತೆಗೆ ಈ ಸಮಸ್ಯೆಯ ಪರಿಹಾರಕ್ಕಾಗಿ ಕೆಲವು ದಾರಿ ಕಂಡುಕೊಂಡಿದೆ.
1- ಈ ಶಾಲೆಯ ಕಟ್ಟಡ ಮತ್ತು ಶಾಲಾವರಣದಲ್ಲಿರುವ ಎರಡು ಎಕರೆ ಭೂಮಿಯನ್ನು ತಮಗೆ ಕೊಟ್ಟರೆ ಶಾಲೆಯನ್ನು ತಮ್ಮ ಸಂಸ್ಥೆಯಿಂದ ಮುಂದುವರಿಸಿಕೊಂಡು ಹೋಗುವುದಾಗಿ ಕೆವಿಎಸ್ 14-9-2013 ರಂದು ಕುದುರೆಮುಖ ಅದಿರು ಕಂಪನಿಗೆ ಬರೆದ ಪತ್ರದಲ್ಲಿ ತಿಳಿಸಿತ್ತು.
ಈ ವಿಷಯ ಜಿಲ್ಲಾಡಳಿತಕ್ಕೆ ಗಮನಕ್ಕೆ ಬಂದಿದ್ದು, ಇಲ್ಲಿನ ಶಾಲಾ ಕಟ್ಟಡ, ಮೈದಾನದ ಜತೆಗೆ ಶಾಲಾ ಸುತ್ತಲಿರುವ 11 ಎಕರೆ ಕಂದಾಯ ಭೂಮಿಯನ್ನು ಕೆವಿಎಸ್‌ಗೆ ವಹಿಸಲು ಚಿಂತನೆ ನಡೆದಿದೆ.
2- ಶಾಲೆಯ ಶಿಕ್ಷಕರ ವೇತನಕ್ಕೆ ಬೇಕಾದ ಹಣವನ್ನು ಕೆವಿಎಸ್‌ಗೆ ಕೊಟ್ಟು, ಅಲ್ಲಿಂದ ಶಿಕ್ಷಕರಿಗೆ ವೇತನ ಪಾವತಿಯಾಗುವಂತೆ ನೋಡಿಕೊಳ್ಳಬೇಕು.
3- ಈ ಶಾಲೆಗೆ ಸದ್ಯ ರಜೆ ಇದ್ದು, ಇಲ್ಲಿ ಹೊರಗುತ್ತಿಗೆ ಆಧಾರದಲ್ಲಿರುವ ಮೂರು ಮಂದಿ ಶಿಕ್ಷಕರು ಹಾಗೂ ಇಲ್ಲಿನ ಪ್ರಾಂಶುಪಾಲರು ತರಗತಿ ನಡೆಸುತ್ತಿದ್ದಾರೆ. ಈ ಹಿಂದೆ ಇಲ್ಲಿದ್ದ ಶಿಕ್ಷಕರನ್ನು ಪುನಃ ಇದೇ ಶಾಲೆಗೆ ಕರೆಸಿ ತರಗತಿ ನಡೆಸಲು ಕೆವಿಎಸ್‌ಗೆ ಪತ್ರ ಬರೆಯಲು ಜಿಲ್ಲಾಡಳಿತ ಉದ್ದೇಶಿಸಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement