ಜನರಿಗೆ ತಪ್ಪದ ಬಿಡಾಡಿ ದನಗಳ ಕಿರಿಕಿರಿ
ಕ.ಪ್ರ.ವಾರ್ತೆ ಸೊರಬ ಮೇ 4
ಪಟ್ಟಣದಲ್ಲಿ ಬಿಡಾಡಿ ದನಗಳ ಹಾವಳಿ ಮತ್ತೆ ಹೆಚ್ಚಾಗಿದ್ದರಿಂದ ಸಾರ್ವಜನಿಕರು ಕಿರಿಕಿರಿ ಅನುಭವಿಸುವಂತಾಗಿದೆ.
ಮೊದಲೆಲ್ಲ ಜಾನುವಾರುಗಳಿಗಾಗಿ ಗೋಮಾಳವಿತ್ತು, ಕಾಯಲು ಕಾವಲುಗಾರರೂ ಇದ್ದರು. ಆಗ ಬಿಡಾಡಿ ಜಾನುವಾರುಗಳನ್ನು ಹಿಡಿದು ಹಾಕಲು ದೊಡ್ಡಿ ಮನೆಯ ನಿರ್ಮಾಣವೂ ಇರುತ್ತಿತ್ತು. ಆದರೆ, ಗೋಮಾಳ ಕಬಳಿಕೆ ಆದ ಬಳಿಕ ದೊಡ್ಡಿಯೂ ಇಲ್ಲ, ಕಾವಲುಗಾರರೂ ಮೇಯಿಸಲು ಹುಲ್ಲುಗಾವಲು ಇಲ್ಲದಿರುವುದರಿಂದ ಕಾಯಲು ಹಿಂಜರಿಕೆ ಮಾಡಿದರು. ಇಂತಹ ಅನಿವಾರ್ಯ ಪರಿಸ್ಥಿತಿಯಲ್ಲಿ ಅವುಗಳನ್ನು ಬೀದಿಗೆ ಬಿಡಬೇಕಾಯಿತು. ಅದರಲ್ಲೂ ದೇಸೀಯ ಮಲೆನಾಡು ಗಿಡ್ಡ ತಳಿಗಳು ಓಡಾಡಿ ಮೇಯಲು ಇಚ್ಚಿಸುತ್ತಿವೆಯೇ ಹೊರತು ಹಾಕಿದ ಹುಲ್ಲು ತಿಂದಿರಲು ಒಪ್ಪವು. ಹೀಗಿದ್ದಾಗ ಅವುಗಳನ್ನು ಕಟ್ಟಿ ಹಾಕಿ ಸಾಯಿಸುವ ಇಚ್ಛೆ ನಮಗಿಲ್ಲ ಎಂದು ದನಗಳ ಮಾಲೀಕರು ಹೇಳುತ್ತಾರೆ.
ಗೋ ಸಂರಕ್ಷಣಾ ಸಮಿತಿ ಅಧ್ಯಕ್ಷ ಜೆ.ಎಸ್. ಚಿದಾನಂದಗೌಡ ಮಾತನಾಡಿ, ಸರ್ಕಾರವು ಜಾನುವಾರುಗಳಿಗೆ ಮೀಸಲಾಗಿದ್ದ ಗೋಮಾಳ ಅತಿಕ್ರಮಣದ ಕುರಿತು ಚಿಂತಿಸಲಿ. ತಾಲೂಕಿಗೊಂದೊಂದು ಗೋಶಾಲೆ ನಿರ್ಮಿಸಲಿ. ಮೊದಲು ಗೋ ಸಂರಕ್ಷಣೆಗೆ ಆದ್ಯತೆ ನೀಡಿ ನಂತರ ಸಾವಯವ ಕೃಷಿ ಇತ್ಯಾದಿ ಪರಿಕಲ್ಪನೆಗೆ ಒತ್ತು ನೀಡಲಿ ಎಂದು ಆಗ್ರಹಿಸಿದ್ದಾರೆ.
ಶಂಕರಾಚಾರ್ಯರ ಜಯಂತಿ
ತ್ಯಾಗರ್ತಿ: ಸಾಗರ ತಾಲೂಕಿನ ತ್ಯಾಗರ್ತಿ ಗ್ರಾಮದ ಶ್ರೀ ರಾಮ ಮಂದಿರದಲ್ಲಿ ಶಂಕರಾಚಾರ್ಯರ ಜಯಂತಿಯನ್ನು ಭಾನುವಾರ ಅದ್ದೂರಿಯಾಗಿ ಆಚರಿಸಲಾಯಿತು. ಪ್ರಸಾದ ವಿನಿಯೋಗ ನಡೆಸಲಾಯಿತು. ಗುರುಗಳಾದ ಶ್ರೀ ಶ್ರೀಧರ ದೀಕ್ಷಿತ್ ಅವರು ಬೋಧಿಸಿದ ಶ್ರೀ ಶಂಕರಾಚಾರ್ಯ ವಿರಚಿತ ಭಜ ಗೋವಿಂದಂ ಸ್ತೋತ್ರವನ್ನು ಜಿ.ಎಸ್. ಆದಿತ್ಯ ಭಾರದ್ವಜ್ ಮತ್ತು ಚನ್ನ ಮಲ್ಲೇಶ ಸಂಗಡಿಗರು ಸುಶ್ರಾವ್ಯವಾಗಿ ಹಾಡಿದರು.