ಸಂತೆಯಲ್ಲಿ ತರಕಾರಿ ಕೊಳ್ಳೋರೇ ಇಲ್ಲ!
ಶಿರಾಳಕೊಪ್ಪ: ಭಾನುವಾರ ಸಂತೆ ದಿನವಾದ ಶಿರಾಳಕೊಪ್ಪ ಪಟ್ಟಣದ ಸಂತೆಯಲ್ಲಿ ತರಕಾರಿ ಕೇಳುವವರಿಲ್ಲದೇ ಕೊನೆಗೆ ಸಂತೆಯಲ್ಲಿ ಹಾಗೆಯೇ ಚೆಲ್ಲಿ ಹೋಗಲಾಗಿರುವ ಘಟನೆ ನಡೆದಿದೆ.
ಶಿರಾಳಕೊಪ್ಪ ಸಂತೆ ಅತಿದೊಡ್ಡ ತರಕಾರಿ ಸಂತೆ ಆಗಿದ್ದು, ದಕ್ಷಿಣ ಕನ್ನಡ ಉತ್ತರ ಕನ್ನಡ, ಹಾಗೂ ಹಲವಾರು ಭಾಗಗಳಿಗೆ ವ್ಯಾಪಾರಿಗಳು ತರಕಾರಿಯನ್ನು ಖರೀದಿಸುವ ಸಂತೆ ಇದಾಗಿದ್ದು, ಈ ಸಂತೆಗೆ ಸುತ್ತಮುತ್ತಲ ನೂರಾರು ಗ್ರಾಮಸ್ಥರು ಹಲವಾರು ಪಟ್ಟಣಗಳಿಂದ ಆಗಮಿಸುತ್ತಾರೆ.
ದರ ಕುಸಿತ: ಸಂತೆ ಬಂದಿತೆಂದರೆ ಸುತ್ತಮುತ್ತಲ ಗ್ರಾಮಸ್ಥರು ಹಿಂದಿನ ದಿನವೇ ತರಕಾರಿ ಕೊಯಿದು ಬೆಳಗಿನಜಾವ ರೈತರು ಸಂತೆಗೆ ತರಕಾರಿಗಳನ್ನು ಮಾರುಕಟ್ಟೆಗೆ ತರುತ್ತಾರೆ. ಸಂತೆಯಲ್ಲಿ ಮೂಟೆಲೆಕ್ಕದಲ್ಲಿ ತರಕಾರಿಗಳನ್ನು ಮಾರಲಾಗುತ್ತದೆ. ಆದರೆ ಇತ್ತೀಚಿನ ದಿನಗಳಲ್ಲಿ ತರಕಾರಿ ದರ ಕುಸಿದು ರೈತರಿಗೆ ಖರ್ಚ್ಚು ಮಾಡಿದ ಹಣ ಬಾರದೇ ಇಂದು ಸಂಪೂರ್ಣ ನಷ್ಟದಲ್ಲಿ ಮಾರುವಂತಾಗಿದೆ.
70ಕೆಜಿ ಕೋಸು ನೂರು ರು.ಗೆ ಮಾರಾಟವಾಗುತ್ತಿದೆ. ಟೊಮೆಟೋ ಹಣ್ಣು 30ಕೆಜಿ ಬಾಕ್ಸ್ 50 ರು, ಹಸಿಮೆಣಸು 5ರಿಂದ7ರೂ ಮಾರಾಟ ವಾಗುತ್ತದೆ. ಬದನೆಕಾಯಿ ಬೀಟರೂಟ್ ಅತ್ಯಂತ ಕಡಿಮೆ ಬೆಲೆಗೆ ಮಾರಾಟವಾಗುತ್ತಿದ್ದು, ನಂತರ ಖರೀದಿಸಿದ ವ್ಯಾಪಾರಿಗಳು ದಿನಪೂರ್ತಿ ಬಿಸಿಲಲ್ಲಿ ಕುಳಿತು ಖರ್ಚಾದರೆ ಸರಿ ಇಲ್ಲವಾದರೆ ಎಲ್ಲ ಖರ್ಚು ಮೈಮೇಲೆ ಎಂದು ಶಿಕಾರಿಪುರದ ವ್ಯಾಪಾರಿ ಒಬ್ಬರು ತಿಳಿಸಿದರು.
ವ್ಯಾಪಾರಿಗಳು ದಿನಪೂರ್ತಿ ವ್ಯಾಪಾರ ಮಾಡಿ ಕೊನೆಯಲ್ಲಿ ಖರ್ಚಾಗದೇ ಉಳಿದ ತರಕಾರಿಯನ್ನು ಇಷ್ಟ ಬಂದ ಬೆಲೆಗೆ ಮಾರಾಟ ಮಾಡಿದ್ದಾರೆ. ಉಳಿದ ತರಕಾರಿಯನ್ನು ರಸ್ತೆಬದಿಯಲ್ಲಿ ಚೆಲ್ಲಿ ಹೋಗಿದ್ದಾರೆ.