v
ಶಿವಮೊಗ್ಗ: ನಗರದ ನಂಜಪ್ಪ ಆಸ್ಪತ್ರೆಯಲ್ಲಿ ಕಾರ್ಮಿಕರಿಗೆ ಕಿರುಕುಳ ನೀಡಲಾಗುತ್ತಿದೆ ಎಂದು ಆರೋಪಿಸಿ ನವಕರ್ನಾಟಕ ನಿರ್ಮಾಣ ವೇದಿಕೆ ಕಾರ್ಯಕರ್ತರು ಸೋಮವಾರ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು.
ಆಸ್ಪತ್ರೆಯಲ್ಲಿ ಬಯೋವುಟ್ರಿಕ್ ಹಾಜರಾತಿ ವ್ಯವಸ್ಥೆ ಇದ್ದು, 5 ನಿಮಿಷ ತಡವಾಗಿ ಬಂದರೂ ಆ ದಿನದ ವೇತನ ಕಡಿತಗೊಳಿಸಲಾಗುತ್ತಿದೆ. ಆದರೆ ರಾತ್ರಿ ವಾಪಸಾಗುವಾಗ 8 ಗಂಟೆ ನಂತರವೂ ಸಹ ಹೆಚ್ಚುವರಿ ಕೆಲಸ ಮಾಡಿಸಿಕೊಳ್ಳಲಾಗುತ್ತದೆ. ಓ.ಟಿ. ಭತ್ಯೆ ನೀಡುವುದಿಲ್ಲ. ಕಾರ್ಮಿಕ ಕಾಯ್ದೆ ಪ್ರಕಾರ ಸಿಗಬೇಕಾದ ವರ್ಷದ ರಜೆಗಳನ್ನು ನೀಡುವುದಿಲ್ಲ ಎಂದು ಆರೋಪಿಸಿದರು.
ಸಮವಸ್ತ್ರ ಹೊರೆ: ಇಲ್ಲಿನ ನೌಕರರು ಕೆಲಸ ಬಿಟ್ಟು ಬೇರೆ ಕಡೆ ಕೆಲಸಕ್ಕೆ ಹೋದರೆ ಅವರಿಂದ ದಂಡ ವಸೂಲಿ ಮಾಡುತ್ತಾರೆ. ಕಾರ್ಮಿಕರಿಗೆ ವೇತನ ಚೀಟಿ ನೀಡುವುದಿಲ್ಲ. ಇಎಸ್‌ಐ ಹಾಗೂ ಪಿಎಫ್ ಕಡಿತಗೊಳಿಸುತ್ತಾರಾದರೂ ಹಣ ಜಮಾ ಮಾಡಿದ ಬಗ್ಗೆ ಯಾವುದೇ ದಾಖಲೆಗಳನ್ನು ನೌಕರರಿಗೆ ನೀಡುವುದಿಲ್ಲ. ಪದೇ ಪದೆ ಸಮವಸ್ತ್ರ ಬದಲಿಸುತ್ತಿದ್ದು, ಅವರ ವೆಚ್ಚವನ್ನು ಸಿಬ್ಬಂದಿ ಮೇಲೆಯೇ ಹೊರಿಸಲಾಗುತ್ತಿದೆ ಎಂದಿದ್ದಾರೆ.
ಈ ಬಗ್ಗೆ ಕಾರ್ಮಿಕ ಇಲಾಖೆಗೆ ದೂರು ನೀಡಿದ್ದರೂ ಪ್ರಯೋಜನವಾಗಿಲ್ಲ. ಆದ್ದರಿಂದ ಜಿಲ್ಲಾಧಿಕಾರಿಗಳೇ ಕಾರ್ಮಿಕರ ಸಂಕಷ್ಟ ವಿಚಾರಿಸಿ ಅವರಿಗೆ ಸವಲತ್ತು ಸಿಗುವಂತೆ ಮಾಡಬೇಕೆಂದು ಆಗ್ರಹಿಸಿದ್ದಾರೆ.
ಪ್ರತಿಭಟನೆಯಲ್ಲಿ ವೇದಿಕೆ ರಾಜ್ಯಾಧ್ಯಕ್ಷ ಗೋ. ರಮೇಶ್ ಗೌಡ, ಪ್ರಮುಖರಾದ ಮಂಜುನಾಥ, ನಾಗೇಶ್, ಸುನೀಲ್, ಗುರುಪ್ರಸಾದ್, ಮಧು, ರಘು, ರವಿ, ಓಂಕಾರ್ ನಿಖಿಲ್, ಮಂಜಣ್ಣ ರೀಟಮ್ಮ, ಜಯಲಕ್ಷ್ಮಿ ಸೇರಿದಂತೆ ಹಲವರು ಇದ್ದರು.
ಬೇಸಿಗೆ ಶಿಬಿರ
ಶಿವಮೊಗ್ಗ: ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯು ಹೊಸನಗರದ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳ ಕಚೇರಿಯಲ್ಲಿ ಮೇ 8 ರಿಂದ 12ರ ವರೆಗೆ 5 ರಿಂದ 14 ವರ್ಷದೊಳಗಿನ ಮಕ್ಕಳಿಗಾಗಿ ಬೇಸಿಗೆ ಶಿಬಿರವನ್ನು ಏರ್ಪಡಿಸಿದೆ. ಈ ಬೇಸಿಗೆ ಶಿಬಿರದಲ್ಲಿ ಯೋಗ, ಧ್ಯಾನ, ಸಮೂಹ ಗೀತೆ, ಚಿತ್ರಕಲೆ, ಕರಕುಶಲಕಲೆ, ಸಮೂಹ ನೃತ್ಯ ಇತ್ಯಾದಿ ವಿಷಯಗಳ ಕುರಿತು ತರಬೇತಿ ನೀಡಲಾಗುವುದು. ವಿವರಗಳಿಗಾಗಿ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳು, ಹೊಸನಗರ, ದೂ.221485 ಸಂಪರ್ಕಿಸಬಹುದಾಗಿದೆ.
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.