ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಶಿವಮೊಗ್ಗ

ಕವನ ಹಾಡಾದಾಗ ಹೆಚ್ಚು ಜನರನ್ನು ತಲುಪುತ್ತೆ

Rashmi Kasaragodu
Updated On : 6 May 2014, 11:05 am

ಕ.ಪ್ರ.ವಾರ್ತೆ    ಸಾಗರ    ಮೇ 5
ಕವಿ ಭಾವನೆಯನ್ನು ತುಂಬಿ ರಚಿಸಿರುವ ಕವನಗಳಿಗೆ ರಾಗ ಸಂಯೋಜಿಸಿ ಅದನ್ನು ಕೇಳುಗರ ಮನಕ್ಕೆ ತಲುಪಿಸುವ ಕಾರ್ಯ ಮಾಡಿದಾಗ ಭಾಷೆ ಬೆಳೆಯುವ ಜೊತೆಗೆ ಕವಿಯ ಕವನಗಳು ನಾಡಿನಾದ್ಯಂತ ಜನರಿಗೆ ತಲುಪುತ್ತದೆ ಎಂದು ಸಾಹಿತಿ ಡಾ.ನಾ.ಡಿಸೋಜ ಹೇಳಿದರು.
ಇಲ್ಲಿನ ಭಾವಸಾಗರ ಸಂಸ್ಥೆ ಬೆಂಗಳೂರಿನ ಸೃಜನ ಸಂಗೀತ ಶಾಲೆ ಹಾಗೂ ಬೆಳಗಾವಿಯ ಡಾ.ಬೆಟಗೇರಿ ಕೃಷ್ಣಶರ್ಮ ಸ್ಮಾರಕ ಟ್ರಸ್ಟ್ ಸಹಯೋಗದೊಂದಿಗೆ ಹಮ್ಮಿಕೊಂಡಿದ್ದ ಭಾವಗೀತೆ ತರಬೇತಿ ಶಿಬಿರದ ಸಮಾರೋಪ ಸಮಾರಂಭದಲ್ಲಿ ಶಿಬಿರಾರ್ಥಿಗಳಿಗೆ ಪ್ರಮಾಣ ಪತ್ರ ವಿತರಿಸಿ ಅವರು ಮಾತನಾಡಿದರು.
ಬದಲಾದ ಕಲ್ಪನೆ: ಒಂದು ಕಾಲದಲ್ಲಿ ಕವಿತೆ ಓದಬೇಕು. ಹಾಡಬಾರದು ಎಂಬ ಚರ್ಚೆ ವ್ಯಾಪಕವಾಗಿತ್ತು. ಈಗ ಜನರ ಕಲ್ಪನೆ ಬದಲಾಗಿದೆ. ಕವಿಗಳು ರಚಿಸಿರುವ ಕವನಗಳು ಹಾಡಿನ ಮೂಲಕ ಪ್ರಸಾರಗೊಂಡಾಗ ಹೆಚ್ಚು ಜನರನ್ನು ತಲುಪುತ್ತದೆ. ಬಳಕೆ ಇರುವ ಕವಿಗಳ ಕವನಗಳನ್ನೆ ಮತ್ತೆಮತ್ತೆ ಹಿಂಬಾಲಿಸುವುದರಿಂದ ಹೊಸಬರ ಕವನಗಳು ಪ್ರಚಾರಕ್ಕೆ ಬರುವುದಿಲ್ಲ. ಆದ್ದರಿಂದ ಹೊಸಹೊಸ ಕಾವ್ಯಗಳು ಹಾಡುಗಳಾಗಿ ಹೊರಹೊಮ್ಮಬೇಕು ಎಂದು ಅಭಿಪ್ರಾಯಪಟ್ಟರು.
ಅಧ್ಯಕ್ಷತೆ ವಹಿಸಿದ್ದ ಬೆಳಗಾವಿ ಡಾ.ಬೆಟಗೇರಿ ಕೃಷ್ಣಶರ್ಮ ಸ್ಮಾರಕ ಟ್ರಸ್ಟ್ ಅಧ್ಯಕ್ಷ ಪ್ರೊ.ರಾಘವೇಂದ್ರ ಪಾಟೀಲ್ ಮಾತನಾಡಿ, ಜೀವನ ಹಾಗೂ ಸಾಹಿತ್ಯ ಎರಡೂ ಮಹತ್ವದ್ದಾಗಿದೆ. ಡಾ.ಬೆಟಗೇರಿ ಕೃಷ್ಣಶರ್ಮ ಅವರು ಬದುಕಿಗೆ ಮಾರ್ಗದರ್ಶಕವಾದ ಅನೇಕ ಅಂಶಗಳನ್ನು ತಮ್ಮ ಜೀವನ ಹಾಗೂ ಸಾಹಿತ್ಯದ ಮೂಲಕ ಒದಗಿಸಿದ್ದಾರೆ.
ಆನಂದಕವಿ ಅವರ ಕಾವ್ಯಗಳು ಕೇವಲ ನಾದಕ್ಕೆ ಮಾತ್ರ ಪ್ರಧಾನವಾಗದೆ ಅರ್ಥಗರ್ಭಿತವೂ ಆಗಿದೆ. ನವೋದಯ ಕಾಲದಲ್ಲಿ ಭಾಷೆಯ ಕುರಿತು ಪುನರ್‌ಮನನ ಮಾಡಿಕೊಳ್ಳಲು ಇವರ ಬರಹ ಪೂರಕವಾಗಿದೆ ಎಂದು ಹೇಳಿದರು.
ಬೆಂಗಳೂರಿನ ಸೃಜನ ಸಂಗೀತ ಶಾಲೆಯ ಅಧ್ಯಕ್ಷ ನರಹರಿ ದೀಕ್ಷಿತ್, ಸಂಗೀತ ನಿರ್ದೇಶಕ ಉಪಾಸನಾ ಮೋಹನ್ ಹಾಜರಿದ್ದರು. ರಾಘವೇಂದ್ರ ಬಿಜಾಡಿ ಸ್ವಾಗತಿಸಿದರು. ವರ್ಷಿಣಿ, ಜಯಚಂದ್ರ, ಸುಹಾನ ತಮ್ಮ ಅಭಿಪ್ರಾಯ ಹಂಚಿಕೊಂಡರು. ಅರುಣಘಾಟೆ ವಂದಿಸಿದರು. ಐ.ಡಿ.ಗಣಪತಿ ನಿರೂಪಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement