ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಶಿವಮೊಗ್ಗ

ಮಾಹಿತಿ ತಂತ್ರಜ್ಞಾನಕ್ಕೆ ಹೆಚ್ಚಿದ ನಿರೀಕ್ಷೆ

Rashmi Kasaragodu
Updated On : 6 May 2014, 11:06 am

ಕ.ಪ್ರ.ವಾರ್ತೆ    ಶಿವಮೊಗ್ಗ    ಮೇ 5
ಮಾಹಿತಿ ತಂತ್ರಜ್ಞಾನ ಕ್ಷೇತ್ರದಲ್ಲಾಗುತ್ತಿರುವ ಆವಿಷ್ಕಾರದ ಮೇಲೆ ಇಡೀ ವಿಶ್ವವೇ ಹೆಚ್ಚೆಚ್ಚು ನಿರೀಕ್ಷೆ ಇಟ್ಟುಕೊಂಡಿದೆ. ಭವಿಷ್ಯದಲ್ಲಿ ಎದುರಾಗುವ ಬಹುತೇಕ ಸಮಸ್ಯೆ ಸವಾಲುಗಳಿಗೇ ಈ ಕ್ಷೇತ್ರದಲ್ಲಾಗುವ ಆವಿಷ್ಕಾರಗಳೇ ಉತ್ತರ ಕೊಡಲಿವೆ ಎಂದು ಅಮೆರಿಕದ ಮಾಹಿತಿ ಮಿಡಿಯಾ ಸರ್ವಿಸಸ್‌ನ ಸಹ ಸಂಸ್ಥಾಪಕ ಗ್ರೆಗೋರಿ ಸ್ಮೈಲಿ ಹೇಳಿದ್ದಾರೆ.
ಇಲ್ಲಿನ ಪಿಇಎಸ್ ಕಾಲೇಜಿನಲ್ಲಿ ನಡೆದ ಐಸಿಐಸಿಟಿ -2014 ಮಾಹಿತಿ ಮತ್ತು ಸಂವಹನ ತಂತ್ರಜ್ಞಾನ ಕುರಿತ ಎರಡು ದಿನಗಳ ಅಂತಾರಾಷ್ಟ್ರೀಯ ಸಮ್ಮೇಳನದ ಉದ್ಘಾಟನಾ ಕಾರ್ಯಕ್ರಮದಲ್ಲಿ ಮಾತನಾಡಿದರು.
ಸಾಮಾಜಿಕ ತಾಣಗಳ ಬಳಕೆ ದಿನದಿನಕ್ಕೂ ಹೆಚ್ಚಾಗುತ್ತಿದೆ. ಪ್ರತಿ ವಿಷಯಗಳೂ ಸಾಮಾಜಿಕ ತಾಣಗಳ ಮೂಲಕ ಜನರನ್ನು ತಲುಪುತ್ತಿವೆ. ಇಲ್ಲಿ ಸಿಗುವ ಅಂಕಿ- ಅಂಶ, ದಾಖಲೆಗಳನ್ನು ಮಾಹಿತಿಯಾಗಿ ಪರಿವರ್ತಿಸುವುದು ಅತ್ಯಂತ ಮುಖ್ಯ ವಿಷಯ ಎಂದು ಪ್ರತಿಪಾದಿಸಿದರು.
ಮುಖ್ಯವಾಗಿ ಆರ್ಥಿಕ ಮಾಹಿತಿಗಳು, ಜಾಗತಿಕ ವಿದ್ಯಮಾನಗಳು, ಸರ್ಕಾರಕ್ಕೆ ಸಂಬಂಧಪಟ್ಟ ಮಾಹಿತಿಗಳು, ಜನಗಣತಿ, ವಿಜ್ಞಾನ ಮತ್ತು ತಂತ್ರಜ್ಞಾನ, ಅಂತರಿಕ್ಷ ತಂತ್ರಜ್ಞಾನ, ಮನರಂಜನೆ ಮುಂತಾದ ವಿಷಯಗಳನ್ನು ಪರಿಣಾಮಕಾರಿಯಾಗಿ ಬಳಸಿಕೊಳ್ಳಲು ಮಾಹಿತಿ ಮತ್ತು ತಂತ್ರಜ್ಞಾನ ಕ್ಷೇತ್ರಗಳಲ್ಲಿ ಆಗುತ್ತಿರುವ ಆವಿಷ್ಕಾರಗಳು ಪ್ರಯೋಜನಕಾರಿಯಾಗಬೇಕು ಎಂದು ಇದೇ ಸಂದರ್ಭದಲ್ಲಿ ಕರೆ ನೀಡಿದರು.
ನಾವು ಯಾವ ಮಾಹಿತಿಯನ್ನು ಜಾಗತಿಕವಾಗಿ ಸಂವಹನ ಮಾಡುತ್ತಿದ್ದೇವೆ ಎಂಬ ಅಂಶವು ಮುಖ್ಯ ಎಂದು ಹೇಳಿದ ಅವರು, ಸಂಹವನ ಮಾಡುವ ವಿಚಾರದಲ್ಲಿ ನಮ್ಮದೂ ಹೊಣೆಗಾರಿಕೆ ಇರುತ್ತದೆಂಬುದನ್ನು ಅರಿಯುವ ಅಗತ್ಯವಿದೆ ಎಂದು ತಿಳಿಸಿದರು.
ಪಿಇಎಸ್ ಸಂಸ್ಥೆಯ ಸದಸ್ಯರಾದ ಎಸ್.ವೈ. ಉಮಾದೇವಿ ಮಾತನಾಡಿ, ಇಂದು ಮಾಹಿತಿ ಹಾಗೂ ಸಂವಹನ ತಂತ್ರಜ್ಞಾನವು ಅತ್ಯಂತ ಶೀಘ್ರಗತಿಯಲ್ಲಿ ಬದಲಾಗುತ್ತಿದೆ. ಐಸಿಟಿ ಕುರಿತಂತೆ ವ್ಯಾಖ್ಯಾನ ನೀಡಲು ವಿದ್ವಾಂಸರು ಕಷ್ಟಪಡುತ್ತಿದ್ದಾರೆ. ಹೊಸ ಸಂಶೋಧನೆಗಳು ಅತ್ಯಂತ ಹೆಚ್ಚಿನ ಪ್ರಮಾಣದಲ್ಲಿ ನಡೆಯುತ್ತಿದ್ದು, ಅವುಗಳನ್ನು ಗಮನಿಸುವುದರ ಜತೆಗೆ ನಮ್ಮ ಜ್ಞಾನದ ವಲಯ ವಿಸ್ತರಿಸಿಕೊಳ್ಳುವ ಅಗತ್ಯವಿದೆ ಎಂದು ವಿದ್ಯಾರ್ಥಿಗಳಿಗೆ ಕರೆ ನೀಡಿದರು.
ಅವಿಭಾಜ್ಯ ಅಂಗ: ತಂತ್ರಜ್ಞಾನಕ್ಕೆ ಅನುಗುಣವಾಗಿ ಎ ಫಾರ್ ಆಪಲ್, ಬಿ ಫಾರ್ ಬಾಲ್ ಎಂಬ ಇಂಗ್ಲಿಷ್ ವರ್ಣಮಾಲೆ ವಿಶ್ಲೇಷಣೆ ಬದಲಾಗಿದ್ದು, ಎ ಫಾರ್ ಆಪಲ್(ಕಂಪನಿ), ಬಿ ಫಾರ್ ಬ್ಲಾಗ್, ಸಿ ಫಾರ್ ಕಂಪ್ಯೂಟರ್, ಡಿ ಫಾರ್ ಡೇಟಾ ಎಂಬಂತೆ ಬದಲಾಗುತ್ತಿದೆ ಎಂದು ಹೇಳಿದ ಅವರು, ಇಂದಿನ ಮಕ್ಕಳನ್ನು ಆಧುನಿಕ ಶಿಕ್ಷಣದ ಮೂಲಕ ಸಜ್ಜುಗೊಳಿಸುವ ಅಗತ್ಯತೆ ಇದೆ. ಸರ್ಕಾರದಲ್ಲಿಯೂ ತಂತ್ರಜ್ಞಾನಕ್ಕೆ ಸಂಬಂಧಿಸಿದಂತೆ ಪ್ರತ್ಯೇಕ ಇಲಾಖೆ ಕಾರ್ಯ ನಿರ್ವಹಿಸುತ್ತಿದ್ದು, ಮಾಹಿತಿ ತಂತ್ರಜ್ಞಾನವು ನಮ್ಮ ಜೀವನದ ಅವಿಭಾಜ್ಯ ಅಂಗವೆನಿಸಿದೆ ಎಂದರು.
ಗಮನ ಹರಿಸಿ: ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಪಿಇಎಸ್‌ಐಟಿಎಂನ ಸಹ ಖಜಾಂಚಿ ಬಿ.ವೈ. ವಿಜಯೇಂದ್ರ ಮಾತನಾಡಿ, ಪಿಇಎಸ್ ಸಂಸ್ಥೆಯು 2006ರಲ್ಲಿ ಪಾರಂಭವಾಗಿ ಶೈಕ್ಷಣಿಕ ಗುಣಮಟ್ಟ ಕಾಪಾಡಿಕೊಳ್ಳುವುದರ ಜತೆಗೆ ಅನೇಕ ಸಮ್ಮೇಳನ ಹಾಗೂ ಕಾರ್ಯಾಗಾರ ಆಯೋಜಿಸುತ್ತಾ ಬಂದಿದೆ. ಇಂದಿನ ಹೊಸ ಅವಿಷ್ಕಾರಗಳ ಮೂಲಕ ಆಗುತ್ತಿರುವ ಬದಲಾವಣೆ ಗಮನಿಸಿ ವಿದ್ಯಾರ್ಥಿಗಳು ಹಾಗೂ ಅಧ್ಯಾಪಕರು ತಮ್ಮ ಜ್ಞಾನ ವೃದ್ಧಿಸಿಕೊಳ್ಳಬೇಕು. ಹಾಗೆಯೇ ಹೊಸ ಹೊಸ ಅವಕಾಶ ಸೃಷ್ಟಿಸಿಕೊಳ್ಳುವುದರ ಕಡೆಗೆ ಗಮನಹರಿಸಬೇಕು ಎಂದರು.
ಸಮಾರಂಭದಲ್ಲಿ ಸಮ್ಮೇಳನದ ನಡಾವಳಿಗಳನ್ನು ಎಸ್.ವೈ. ಉಮಾದೇವಿ ಹಾಗೂ ಡಾ. ದಯಾಸಾಗರ್ ಬಿಡುಗಡೆಗೊಳಿಸಿದರು. ಸಿಎಸ್‌ಇ ವಿಭಾಗದ ಮುಖ್ಯಸ್ಥರು ಹಾಗೂ ಐಸಿಐಸಿಟಿ- 2014 ಸಂಚಾಲಕರಾದ ಪ್ರೊ. ವಿನಯ್. ಎಸ್. ಅವರು ಸಮ್ಮೇಳನದ ಕುರಿತು ಪ್ರಾಸ್ತಾವಿಕ ನುಡಿಗಳ ಜತೆಗೆ ಮುಖ್ಯ ಅತಿಥಿಗಳನ್ನು ಪರಿಚಯಿಸಿದರು.
ಪಿಇಎಸ್‌ಐಟಿಎಂನ ಪ್ರಾಂಶುಪಾಲ ಡಾ. ಸುರೇಶ್‌ಚಂದ್ರ ಮೋಹನ್ ಸ್ವಾಗತಿಸಿ, ಎಂಬಿಎ ವಿಭಾಗದ ಮುಖ್ಯಸ್ಥರಾದ ಡಾ. ಆರ್. ನಾಗರಾಜ ವಂದಿಸಿದರು. ಸ್ವಾತಿ ಪ್ರಾರ್ಥಿಸಿ, ಸಿಎಸ್‌ಇ ವಿಭಾಗದ ಮುಖ್ಯಸ್ಥೆ ಎಸ್. ಪ್ರತಿಭಾ ನಿರೂಪಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement