ವಿದೇಶ ಪ್ರವಾಸಕ್ಕೆ ಅಗತ್ಯ ನೀತಿ: ಕಾಗೋಡು
ಕ.ಪ್ರ.ವಾರ್ತೆ, ಸಾಗರ, ಮೇ 5 ಶಾಸಕರು ವಿದೇಶ ಪ್ರವಾಸಕ್ಕೆ ಹೋಗುವುದನ್ನು ಸದ್ಯಕ್ಕೆ ತಡೆ ಹಿಡಿಯಲಾಗಿದ್ದು, ಇದಕ್ಕೆ ಅಗತ್ಯವಾದ ನೀತಿ ರೂಪಿಸಲು ತೀರ್ಮಾನಿಸಲಾಗಿದೆ ಎಂದು ವಿಧಾನಸಭಾಧ್ಯಕ್ಷ ಕಾಗೋಡು ತಿಮ್ಮಪ್ಪ ತಿಳಿಸಿದರು.
ತಾಲೂಕಿನ ಹೆಗ್ಗೋಡು ಗ್ರಾಪಂ ವ್ಯಾಪ್ತಿಯ ಅಮಟೆಕೊಪ್ಪ- ಕೇಡಲಸರದಲ್ಲಿ ಶನಿವಾರ ಸಿಡಿಲು ಬಡಿದು ಮೃತಪಟ್ಟ ಶಾರದಾ ಕುಟುಂಬಕ್ಕೆ ಸೋಮವಾರ ರು. 1.50 ಲಕ್ಷ ಪರಿಹಾರ ನಿಧಿ ಚೆಕ್ ವಿತರಿಸಿ ಅವರು ಪತ್ರಕರ್ತರೊಂದಿಗೆ ಮಾತನಾಡಿದರು.
ಮಾರ್ಗದರ್ಶಿ ಸೂತ್ರ: ಶಾಸಕರು ವಿದೇಶ ಪ್ರವಾಸಕ್ಕೆ ಹೋಗುವ ಉದ್ದೇಶವೇನು, ಅವರು ಹೋಗುವ ಸ್ಥಳಗಳಲ್ಲಿ ಭೇಟಿ ಮಾಡುವ ತಾಣಗಳಿಂದ ರಾಜ್ಯಕ್ಕೆ ಯಾವ ರೀತಿ ಉಪಯೋಗವಾಗುತ್ತದೆ ಹಾಗೂ ಯಾವ ದೇಶಕ್ಕೆ ಶಾಸಕರು ಭೇಟಿ ನೀಡಬೇಕು ಎನ್ನುವ ಕುರಿತು ಮಾರ್ಗದರ್ಶಿ ಸೂತ್ರವೊಂದನ್ನು ಸಿದ್ಧಪಡಿಸಲು ಚಿಂತನೆ ನಡೆಸಲಾಗಿದೆ ಎಂದು ತಿಳಿಸಿದರು.
ಇದಕ್ಕಾಗಿ ಸಮಿತಿಯೊಂದನ್ನು ರಚಿಸಲಾಗಿದೆ. ಈ ಸಮಿತಿಯಲ್ಲಿ 10 ಜನ ವಿಧಾನಸಭೆ ಹಾಗೂ ವಿಧಾನ ಪರಿಷತ್ತು ಸದಸ್ಯರು ಹಾಗೂ 5 ಜನ ಅಧಿಕಾರಿಗಳು ಇರುತ್ತಾರೆ. ಒಟ್ಟಾರೆ ಶಾಸಕರು ಕೈಗೊಳ್ಳುವ ವಿದೇಶ ಪ್ರವಾಸದಿಂದ ರಾಜ್ಯಕ್ಕೆ ಏನಾದರೂ ಉಪಯೋಗವಾಗಬೇಕು. ಸದ್ಯದಲ್ಲಿಯೇ ಸಮಿತಿ ನೀಡುವ ವರದಿಯನ್ನಾಧರಿಸಿ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.
ಅಕಾರಿಗಳ ಚರ್ಚೆ: ಅಕಾಲಿಕ ಗಾಳಿಮಳೆ, ಬಿರುಗಾಳಿ-ಸಿಡಿಲಿನಿಂದ ಸಂಭವಿಸಬಹುದಾದ ಅಪಾಯ ತಡೆಗಟ್ಟುವ ನಿಟ್ಟಿನಲ್ಲಿ ಅಧಿಕಾರಿಗಳ ಸಭೆ ಕರೆದು ಚರ್ಚೆ ನಡೆಸಲಾಗಿದೆ.
ಅನಾಹುತ ಸಂಭವಿಸಿದ ತಕ್ಷಣ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಶೀಘ್ರ ಪರಿಹಾರ ಕಲ್ಪಿಸುವುದು, ಪರ್ಯಾಯ ವ್ಯವಸ್ಥೆಗೆ ಕ್ರಮ ಕೈಗೊಳ್ಳುವ ಕುರಿತು ಸೂಚನೆ ನೀಡಲಾಗಿದೆ ಎಂದು ತಿಳಿಸಿದರು.
ಇದೇ ಸಂದರ್ಭದಲ್ಲಿ ಇತ್ತೀಚೆಗೆ ಸುರಿದ ಮಳೆಗಾಳಿಯಿಂದ ಮನೆಯ ಮೇಲೆ ಮರಬಿದ್ದು ಹಾನಿಗೊಳಗಾದ ವಿಠಲ ಶೆಟ್ಟಿ ಕುಟುಂಬಕ್ಕೂ ಕಂದಾಯ ಇಲಾಖೆ ವತಿಯಿಂದ ಪರಿಹಾರಧನದ ಚೆಕ್ ವಿತರಿಸಿದರು.
ತಾಪಂ ಮಾಜಿ ಅಧ್ಯಕ್ಷ ಮಲ್ಲಿಕಾರ್ಜುನ ಹಕ್ರೆ, ಪ್ರಮುಖರಾದ ಗಣಪತಿ ಹೆನಗೆರೆ, ಸ್ವಾಮಿ ಗೌಡ, ನಾರಾಯಣ, ತಹಸೀಲ್ದಾರ್ ಜಿ.ಎಸ್. ಬೋರ್ಕಲ್, ಪಟ್ಟರಾಜ ಗೌಡ ಇದ್ದರು.