ಆದಿ ಶಂಕರಾಚಾರ್ಯರಿಂದ ಹಿಂದೂ ಧರ್ಮ ಪುನರುಜ್ಜೀವನ
ಹೊಸನಗರ: ಆದಿ ಶಂಕರಾಚಾರ್ಯರು ಸಾಧನೆ ಮಾಡದಿದ್ದರೆ, ಸನಾತನ ಧರ್ಮ ಇಲ್ಲದೆ ನಮ್ಮ ದೇಶ ಜಗತ್ತಿಗೆ ಮಾರ್ಗದರ್ಶನ ಮಾಡುವ ಸ್ಥಿತಿ ಇರುತ್ತಿರಲ್ಲ ಎಂದು ಸಾಗರದ ಪ್ರಗತಿ ವಿದ್ಯಾಲಯದ ಸಂಸ್ಕೃತಿ ಪ್ರಾಧ್ಯಾಪಕ ಗಣಪತಿ ಹೆಗಡೆ ಅಭಿಪ್ರಾಯಪಟ್ಟರು.
ತಾಲೂಕಿನ ಕಾರಣಗಿರಿ ಸಿದ್ದಿವಿನಾಯಕ ದೇವಸ್ಥಾನದ ಸಭಾಂಗಣದಲ್ಲಿ ವಿವಿಧ ಸಂಘಟನೆಗಳ ಆಶ್ರಯದಲ್ಲಿ ನಡೆದ ಶಂಕರ ಜಯಂತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿ, ಶಂಕರಾಚಾರ್ಯರು ಕೇವಲ 32 ವರ್ಷದಲ್ಲಿ ಅದ್ಭುತ ಸಾಧನೆ ಮಾಡಿದರು ಎಂದರು.
ವಿವಿಧತೆಯಲ್ಲಿ ಏಕತೆ: ವಿವಿಧತೆಯಲ್ಲಿ ಏಕತೆ ಸಾರುವ ಭಾರತೀಯ ಚಿಂತನೆಯನ್ನು ಎತ್ತಿಹಿಡಿದ ಅವರು, ದೇಶಾದ್ಯಂತ ಸಂಚರಿಸಿ ನಾಲ್ಕು ಮೂಲೆಗಳಲ್ಲಿ ಮಠ ಸ್ಥಾಪಿಸಿ ದೇಶವನ್ನು ಒಂದು ಮಾಡಿದರು. ಅವನತಿಯ ಅಂಚಿನಲ್ಲಿದ್ದ ಹಿಂದೂ ಧರ್ಮವನ್ನು ಪುನರುಜ್ಜೀವನಗೊಳಿಸಿದರು. ಆರ್ಥಿಕ, ಮತ್ತಿತರ ಕಾರಣಕ್ಕಾಗಿ ನಮ್ಮ ದೇಶವಿಂದು ಎಷ್ಟೇ ಕೆಳಸ್ತರದಲ್ಲಿದ್ದರೂ ಆಧ್ಯಾತ್ಮದ ವಿಚಾರದಲ್ಲಿ ಮೇಲಿದೆ. ಈ ಸ್ಥಿತಿಗೆ ಮೂಲ ಕಾರಣ ಆದಿ ಶಂಕರಾಚಾರ್ಯರು ಎಂದರು. ದೇವಸ್ಥಾನ ಸಮಿತಿ ಹಾಗೂ ರಾಷ್ಟ್ರೋತ್ಥಾನ ಬಳಗದ ಅಧ್ಯಕ್ಷರಾದ ಎನ್.ಡಿ. ನಾಗೇಂದ್ರರಾವ್ ಅಧ್ಯಕ್ಷತೆ ವಹಿಸಿದ್ದರು. ಹನಿಯ ರವಿ ಸ್ವಾಗತಿಸಿದರು. ಹೆದ್ಲಿ ಬಾಲಚಂದ್ರ ವಂದಿಸಿದರು. ಹೊಸನಗರದ ರಾಗ ಲಹರಿ ತಂಡದವರು ಶಂಕರಾಚಾರ್ಯ ವಿರಚಿತ ಭಜಗೋವಿಂದಮ್ ಗೀತಗಾಯನ ನಡೆಸಿಕೊಟ್ಟರು.