ಆಸ್ತಿ ನೋಂದಣಿ ಆದೇಶ ಮುಂದೂಡಿ
ಕ.ಪ್ರ. ವಾರ್ತೆ ಶಿವಮೊಗ್ಗ ಮೇ 7
ಶಿವಮೊಗ್ಗ ನಗರ ವ್ಯಾಪ್ತಿಗೆ ಸಂಬಂಧಿಸಿದ ಸ್ವತ್ತುಗಳ ನೋಂದಣಿಗೆ ನಗರ ಮಾಪನ ಯೋಜನಾ ಕಚೇರಿಯಿಂದ ನೀಡಲ್ಪಡುವ ಆಸ್ತಿ ಪ್ರಮಾಣ ಪತ್ರವನ್ನು ಹಾಜರುಪಡಿಸುವುದನ್ನು ಕಡ್ಡಾಯಗೊಳಿಸಿರುವ ಆದೇಶ ಮುಂದೂಡುವಂತೆ ನಾಗರಿಕ ಹಿತರಕ್ಷಣಾ ವೇದಿಕೆಗಳ ಒಕ್ಕೂಟ ಬುಧವಾರ ಜಿಲ್ಲಾಧಿಕಾರಿ ಅವರನ್ನು ಒತ್ತಾಯಿಸಿತು.
ಕಂದಾಯ ಇಲಾಖೆಯ ಅಧಿಸೂಚನೆಯಂತೆ ಶಿವಮೊಗ್ಗ ನಗರ ಪ್ರದೇಶದ ಆಸ್ತಿಗಳ ಕ್ರಯ, ಪರಭಾರೆ, ದಾನ ಇತ್ಯಾದಿ ವಹಿವಾಟು ನೋಂದಣಿ ಸಮಯದಲ್ಲಿ ತಯಾರಿಸಲ್ಪಡುವ ದಸ್ತಾವೇಜಿನಲ್ಲಿ ನಗರ ಮಾಪನ ಯೋಜನೆ ಇಲಾಖೆಯಿಂದ ನೀಡಲಾಗುತ್ತಿರುವ ಆಸ್ತಿ ಪ್ರಮಾಣ ಪತ್ರ ಹಾಜರುಪಡಿಸುವುದು ಮತ್ತು ಯುಪಿಒಆರ್ ಸಂಖ್ಯೆ ನಮೂದಿಸುವುದು ಮೇ 1ರಿಂದ ಕಡ್ಡಾಯಗೊಳಿಸಲಾಗಿದೆ.
ಸರ್ಕಾರದ ಆದೇಶವು ಫೆಬ್ರವರಿಯಲ್ಲಿ ಹೊರ ಬಂದಿದ್ದರೂ ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ಈ ಆದೇಶವನ್ನು ಮೇ 1ರಿಂದ ಏಕಾಏಕಿ ಜಾರಿಗೊಳಿಸಲಾಗಿದೆ ಎಂಬುದು ವೇದಿಕೆ ಸದಸ್ಯರ ಆಕ್ಷೇಪ.
ಶಿವಮೊಗ್ಗ ನಗರ ವ್ಯಾಪ್ತಿಯಲ್ಲಿ 85 ಸಾವಿರಕ್ಕೂ ಮಿಗಿಲಾಗಿ ನೋಂದಾಯಿತ ಆಸ್ತಿಗಳಿದ್ದು, ಭೂ ಮಾಪನ ಯೋಜನಾ ಇಲಾಖೆಯು ಕಳೆದ 3-4 ವರ್ಷಗಳಿಂದ ಸರ್ವೆ ಕಾರ್ಯ ಮುಗಿಸಿರುವುದು ಕೇವಲ 50 ಭಾಗದಷ್ಟು ಆಸ್ತಿಗಳನ್ನು ಮಾತ್ರ. ಇನ್ನೂ ಇಷ್ಟೇ ಪ್ರಮಾಣದ ಆಸ್ತಿಯ ಸರ್ವೆ ಕಾರ್ಯ ಬಾಕಿ ಇರುವಾಗ, ಯಾವುದೇ ಮುನ್ಸೂಚನೆಗಳನ್ನು ನೀಡದೇ ಆದೇಶ ಕಾರ್ಯರೂಪಕ್ಕೆ ತಂದಿರುವುದು ಸರಿಯಲ್ಲ ಎಂಬುದು ವೇದಿಕೆ ಪ್ರಮುಖರ ವಿವರಣೆ.
ರಾಜ್ಯದಲ್ಲಿ ಮೈಸೂರು ಮತ್ತು ಶಿವಮೊಗ್ಗ ನಗರಗಳಿಗೆ ಸೀಮಿತವಾಗಿ ಸರ್ಕಾರ ಆದೇಶ ಹೊರಡಿಸಿರುವುದನ್ನು ವೇದಿಕೆ ಖಂಡಿಸುತ್ತದೆ ಎಂದು ಹೇಳಿದ ವಸಂತ ಕುಮಾರ್, ಮೈಸೂರಿನಲ್ಲಿ ಈ ಆದೇಶದ ಅನ್ವಯವನ್ನು ಮುಂದೂಡಲಾಗಿದೆ. ಅದೇ ರೀತಿ ಇಲ್ಲೂ ಸಹ ಆದೇಶ ಜಾರಿ ಮುಂದೂಡಬೇಕೆಂದು ಜಿಲ್ಲಾಡಳಿತವನ್ನು ಒತ್ತಾಯಿಸಿದ್ದಾಗಿ ತಿಳಿಸಿದರು.
ನಮ್ಮ ಬೇಡಿಕೆಗಳನ್ನು ಕೂಡಲೇ ಈಡೇರಿಸದೇ ಹೋದಲ್ಲಿ ಹೋರಾಟ ತೀವ್ರಗೊಳಿಸುವುದಾಗಿ ಜಿಲ್ಲಾಡಳಿತಕ್ಕೆ ತಿಳಿಸಲಾಗಿದೆ ಎಂದು ಹೋರಾಟಗಾರ ಅಶೋಕ್ ಯಾದವ್ ತಿಳಿಸಿದರು.
ಮನವಿ ನೀಡುವ ಸಂದರ್ಭದಲ್ಲಿ ವಿವಿಧ ಸಂಘ ಸಂಸ್ಥೆಗಳು, ನಾಗರಿಕ ಹಿತರಕ್ಷಣಾ ವೇದಿಕೆಗಳ ಸದಸ್ಯರು ಇದ್ದರು.