ಗಾಳಿ ಮಳೆಯಿಂದಾಗಿ ವ್ಯಾಪಕ ಹಾನಿ
ಕ.ಪ್ರ.ವಾರ್ತೆ ್ಣ ಹೊಸನಗರ ್ಣ ಮೇ 7
ಪಟ್ಟಣದ ಸುತ್ತಮುತ್ತ ವಾರದಿಂದ ಆಗಾಗ್ಗೆ ಬಂದು ಹೋಗುತ್ತಿರುವ ಸಿಡಿಲು ಸಹಿತ ಗಾಳಿ, ಮಳೆ ಆರ್ಭಟಕ್ಕೆ ಹಲವು ಮನೆಗಳು ಜಖಂಗೊಂಡು ಸಾಕಷ್ಟು ಹಾನಿ ಸಂಭವಿಸಿದೆ.
ಗಾಳಿಗೆ ಅನೇಕ ಮರಗಳು ಉರುಳಿ ಗ್ರಾಮೀಣ ಸಂಚಾರ ಅಸ್ತವ್ಯಸ್ತಗೊಂಡಿದೆ. ವಿದ್ಯುತ್ ಕಂಬಗಳು ಮುರಿದು ತಾಲೂಕಿನ ಅನೇಕ ಭಾಗಗಳಲ್ಲಿ ವಿದ್ಯುತ್ ವ್ಯತ್ಯಯ ಉಂಟಾಗಿದೆ. ಪ್ರತಿ ದಿನವೂ ಸಂಭವಿಸುತ್ತಿರುವ ಅನಾಹುತದಿಂದ ವಿದ್ಯುತ್ ಸಂಪರ್ಕ ಸರಿಪಡಿಸಲು ಮೆಸ್ಕಾಂ ಸಿಬ್ಬಂದಿ ಹರಸಾಹಸಪಡುತ್ತಿದ್ದಾರೆ.
ಪಟ್ಟಣದ ರಾಘು ಎಂಬುವವರ ಮನೆಯ ಮೇಲೆ ತೆಂಗಿನ ಮರ ಬಿದ್ದು ಮನೆ ಸಂಪೂರ್ಣ ಜಖಂಗೊಂಡಿದೆ. ತಾಲೂಕಿನ ಜೇನಿ ಗ್ರಾಪಂ ವ್ಯಾಪ್ತಿಯ ಹೊಳೆಗೋಡಿನಲ್ಲಿ ಕೃಷ್ಣಮೂರ್ತಿ ಎಂಬುವವರ ಮನೆ ಮೇಲೆ ರಾತ್ರಿ ಮರ ಬಿದ್ದು ಇತ್ತೀಚೆಗಷ್ಟೇ ನಿರ್ಮಿಸಲಾಗಿದ್ದ ಮನೆ ಸಂಪೂರ್ಣ ಜಖಂಗೊಂಡಿದೆ. ಹೊಸಮನೆ ಜಯದೇವಪ್ಪ ಎಂಬುವವರಿಗಗೆ ಸೇರಿದ ಅಡಕೆ ತೋಟದ ಮೇಲೆ ಮಾವಿನ ಮರಮೊಂದು ಮುರಿದುಬಿದ್ದು ನೂರಾರು ಅಡಕೆ ಮರಗಳು ನಾಶವಾಗಿವೆ.
ತಾಲೂಕಿನ ಹೊಳೆಗೋಡಿನಲ್ಲಿ ಮರಬಿದ್ದು ಜಖಂಗೊಂಡಿರುವ ಕೃಷ್ಣಮೂರ್ತಿಯವರ ಮನೆಗೆ ಪ್ರಮುಖರಾದ ಬಿ.ಜಿ. ಚಂದ್ರಮೌಳಿ, ಹಾಲಗ್ಪದ್ದೆ ಉಮೇಶ್, ಕಾಡವಳ್ಳಿ ಪ್ರದೀಪ್ ಭೇಟಿ ನೀಡಿ ಸಾಂತ್ವನ ಹೇಳಿದರು.
ವಿದ್ಯುತ್ ವ್ಯತ್ಯಯ: ವಾರದಿಂದ ಆಗಾಗ್ಗೆ ಬಂದು ಹೋಗುತ್ತಿರುವ ಗಾಳಿ-ಮಳೆಗೆ ವಿದ್ಯುತ್ ತಂತಿಗಳ ಮೇಲೆ ಮರಗಳು ಬಿದ್ದು ತಾಲೂಕಿನಾದ್ಯಂತ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯ ಕಾಣಿಸಿಕೊಂಡಿದೆ. ಪಟ್ಟಣದಲ್ಲಿಯೇ 2 ದಿನ ವಿದ್ಯುತ್ ಇಲ್ಲದೆ ಜನ ಪರದಾಡುವಂತಾಗಿತ್ತು.