ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಶಿವಮೊಗ್ಗ

ಸಕ್ರೆಬೈಲಿನಲ್ಲಿ ಹಾಸನ ಪುಂಡಾನೆಗಳಿಗೆ ಪಾಠ

Mainashree
Updated On : 8 May 2014, 10:58 am

ಕ.ಪ್ರ.ವಾರ್ತೆ ್ಣ ಶಿವಮೊಗ್ಗ ್ಣ ಮೇ 7
ಹಾಸನ ಭಾಗದಲ್ಲಿ ಜನರನ್ನು ಇನ್ನಿಲ್ಲದಂತೆ ಗೋಳುಹೊಯ್ದುಕೊಂಡ ನಾಲ್ಕು ಪುಂಡಾನೆಗಳ ಪಳಗಿಸುವ ಕಾರ್ಯ ಶಿವಮೊಗ್ಗ ಸಕ್ರೆಬೈಲು ಆನೆ ಬಿಡಾರದಲ್ಲಿ ಆರಂಭವಾಗಿದೆ.
ಎರಡು ದೊಡ್ಡ ಗಂಡಾನೆ ಮತ್ತು ಎರಡು ಮರಿ ಹೆಣ್ಣನೆಗಳನ್ನು ಬುಧವಾರ ಸಂಜೆ 7 ಗಂಟೆ ಸುಮಾರಿಗೆ ಆನೆ ಬಿಡಾರಕ್ಕೆ ತರಲಾಯಿತು. ಆನೆ ಬಿಡಾರದ ಸಿಬ್ಬಂದಿ ಎರಡು ಆನೆಗಳನ್ನು ಕ್ರಾಲ್‌ನಲ್ಲಿ ಬಂಧಿಸುವಾಗ ಮಧ್ಯರಾತ್ರಿ ದಾಟಿತ್ತು. ಆನೆ ಬಿಡಾರದ ಎಲ್ಲ ಸಿಬ್ಬಂದಿ ಕಾರ್ಯಾಚರಣೆಯಲ್ಲಿ  ಭಾಗವಹಿಸಿದ್ದರು.
ಹಾಸನ ಭಾಗದಲ್ಲಿ ಆನೆ-ಮಾನವ ಸಂಘರ್ಷ ನಿರಂತರವಾಗಿ ನಡೆದ ಪರಿಣಾಮ ಜೀವ ಹಾನಿ ಮತ್ತು ಕೃಷಿ ಹಾನಿ ಸಾಕಷ್ಟಾಗಿತ್ತು. ಆನೆ ಉಪಟಳ ತಡೆಯಲಾರದೇ ಜನರು ಪ್ರತಿಭಟನೆಯನ್ನೂ ನಡೆಸಿದ್ದರು. ಒತ್ತಡಕ್ಕೆ ಬಿದ್ದ ಸರ್ಕಾರ ಹಾನಿ ಮಾಡುತ್ತಿರುವ ಕಾಡಾನೆಗಳನ್ನು ಗುರುತಿಸಿ ಅವುಗಳನ್ನು ಪಳಗಿಸುವ ಕಾರ್ಯಕ್ಕೆ ಮುಂದಾಯಿತು. ವಿಶೇಷ ತಂಡ ರಚನೆ ಮಾಡಿದ ಅರಣ್ಯ ಇಲಾಖೆ ಹಾಸನ ಭಾಗದಲ್ಲಿ ನಾಲ್ಕು ಆನೆಗಳನ್ನು ಹಿಡಿಸುವಲ್ಲಿ ಸಫಲವಾಗಿತ್ತು.
ಎರಡು ಕ್ರಾಲ್‌ಗಳಲ್ಲಿ ಆನೆಗಳನ್ನು ಬಂಧಿಸಲಾಗಿದ್ದು, ಪ್ರತಿ ಕ್ರಾಲ್ ನಲ್ಲಿ ತಾಯಿ-ಮಗುವನ್ನು ಹಿಡಿದಿಡಲಾಗಿತ್ತು. ಡಿಎಫ್‌ಒ ರವಿಕುಮಾರ್ ಸ್ಥಳದಲ್ಲಿದ್ದು ಕಾರ್ಯಾಚರಣೆಯ ಉಸ್ತುವಾರಿ ನಡೆಸಿದರು.ಕಾವಾಡಿ ಟೆಕ್ನಾಲಜಿ: ಆನೆಗಳನ್ನು ಪಳಗಿಸಲು ಸದ್ಯ ಇರುವುದು ಕಾವಾಡಿಗಳದ್ದೇ ಟೆಕ್ನಾಲಜಿ. ಒಂದೇ ಅಳತೆಯ ದೊಡ್ಡ ಗಾತ್ರದ ಮರಗಳಿಂದ ದೊಡ್ಡಿಯನ್ನು ನಿರ್ಮಿಸಿ ಅದರಲ್ಲಿ ಪುಂಡಾನೆಗಳನ್ನು ಕಟ್ಟಿ ಅವುಗಳ ಆಕ್ರೋಶ ತಗ್ಗಿಸಲಾಗುತ್ತದೆ. ಸದ್ಯ ಸಕ್ರೆಬೈಲ್ ನಲ್ಲಿ ಕ್ರಾಲ್‌ಗಳನ್ನು (ಆನೆ ಪಳಗಿಸುವ ದೊಡ್ಡಿ) ನಿರ್ಮಿಸಲಾಗಿದೆ. ಒಟ್ಟಾರೆ ನಾಲ್ಕು ಕ್ರಾಲ್‌ಗಳು ಇಲ್ಲಿವೆ.
ಸುಮಾರು 6ರಿಂದ 8 ಅಡಿ ಆಳದ ಕುಳಿ ತೆಗೆದು ಅದರಲ್ಲಿ ನೀಲಗಿರಿ ಮರದ ದಿಮ್ಮಿಗಳನ್ನು ನಿಲ್ಲಿಸಲಾಗಿದೆ. ಅದರ ಆಧಾರವನ್ನಿಟ್ಟುಕೊಂಡು ಸುತ್ತಲೂ ನೀಲಗಿರಿ ಮರಗಳನ್ನು ನಿಲ್ಲಿಸಲಾಗಿದೆ. ನೆಲಕ್ಕೂ ಸಹ ಮರಗಳನ್ನೇ ಸಾಲಾಗಿ ಜೋಡಿಸಲಾಗಿದೆ.
ಪಳಗಿಸೋ ಕಲೆ: ಲಾರಿಗಳಲ್ಲಿ ಬಂದ ಆನೆಗಳನ್ನು ಬಿಡಾರದ ಎರಡು ಆನೆಗಳ ಸಹಕಾರದಿಂದ ಕ್ರಾಲ್ ಒಳಗೆ ತಳ್ಳಲಾಯಿತು. ಆರಂಭದ ಕೆಲವು ದಿನಗಳಲ್ಲಿ ಆನೆ ಸುಲಭವಾಗಿ ಓಡಾಡದಷ್ಟು ಬಿಗಿಯಾಗಿ ಕೂಡಲಾಗುತ್ತದೆ. ನಂತರ ಬಿಗಿಯನ್ನು ಸಡಿಲಗೊಳಿಸಲಾಗುತ್ತದೆ ಎಂದು ಹಿರಿಯ ಕಾವಡಿ ತಿಳಿಸಿದರು.
ಆರಂಭದಲ್ಲಿ ನಿಧಾನವಾಗಿ ಒಗ್ಗಿಕೊಳ್ಳುವ ಕಾಡಾನೆಗಳು ಮಾವುತರು ತೋರಿಸುವ ಪ್ರೀತಿ ವಿಶ್ವಾಸ, ಆಹಾರ ನೀಡಿಕೆಯಿಂದ ಹತ್ತಿರವಾಗುತ್ತಾರೆ. ಸುಮಾರು 30ರಿಂದ 35 ದಿನಗಳ ತರುವಾಯ ಕಾಡಾನೆಗಳು ಸಾವಧಾನವಾಗುತ್ತಾ ಬರುತ್ತವೆ ಎಂಬುದು ಅರಣ್ಯ ಇಲಾಖೆ ಅಧಿಕಾರಿಗಳ ವಿವರಣೆ.
ಮನವೊಲಿಕೆ: ಒಟ್ಟಾರೆ 60 ದಿನಗಳಲ್ಲಿ ಆನೆಗಳು ಒಂದು ಹಂತಕ್ಕೆ ಬರುತ್ತವೆ. ಅಷ್ಟರಲ್ಲಿ ಪ್ರತಿ ದಿನ ಆನೆಗಳಿಗೆ ಇಷ್ಟವಾಗುವ ಕಬ್ಬು, ಅಕ್ಕಿ, ಬೆಲ್ಲ, ಮತ್ತಿತರ ಪದಾರ್ಥಗಳನ್ನು ನೀಡಿ ಮನವೊಲಿಸಿತ್ತಾರೆ. ಅಂತಿಮವಾಗಿ ಪಳಗಿದ ಆನೆಗಳು ಬಿಡಾರದ ಆನೆಗಳಾಗಿ ಪರಿವರ್ತನೆಯಾಗುತ್ತವೆ ಎಂದು ಹೇಳುತ್ತಾರೆ. ಸಕ್ರೆಬೈಲ್‌ನಲ್ಲಿ ಸಾಕಷ್ಟು ಆನೆ ಪಳಗಿಸಲಾಗಿದೆ. ಶಿವು, ತೀರ್ಥರಾಮ, ಸಾಗರ ಇತ್ತೀಚೆಗೆ ಪಳಗಿದವುಗಳು.
ಕಾಡಾನೆ ಪಳಗಿಸುವ ಕಾರ್ಯಾಚರಣೆ ಉದ್ದೇಶದಿಂದಲೇ ಹೊಸ ಯುವಕರನ್ನು ನೇಮಕ ಮಾಡಿಕೊಳ್ಳಲಾಗಿದೆ. ಹಳೇ ಕಾವಡಿಗಳನ್ನು ಹೊಸ ಆನೆಗಳ ಪಳಗಿಸುವ ಕಾರ್ಯಕ್ಕೆ ಬಳಸಿಕೊಳ್ಳಲಾಗುತ್ತಿದೆ.
ಸಾವಿರ ಲೀಟರ್ ನೀರು: ಪ್ರತಿ ಆನೆಗೆ ದಿನವೊಂದಕ್ಕೆ ಒಂದು ಸಾವಿರ ಲೀಟರ್ ನೀರಿನ ಅಗತ್ಯವಿರುತ್ತದೆ. ಹೀಗಾಗಿ ಪ್ರತ್ಯೇಕ ನೀರಿನ ವ್ಯವಸ್ಥೆ ಮಾಡಿಕೊಳ್ಳಲಾಗಿದೆ. ಸಕ್ರೆಬೈಲು ಅಶ್ವಿನಿ ವನದಿಂದ ಪ್ರತ್ಯೇಕ ನೀರಿನ ಪೈಪ್ ಕ್ರಾಲ್ ಬಳಿಗೆ ತರಲಾಗಿದೆ. ಅದರ ಮೂಲಕ ನಿತ್ಯ ನೀರಿನ ಸಂಗ್ರಹಣೆ ಮಾಡಿಕೊಂಡು ಬಳಸಿಕೊಳ್ಳಲು ಉದ್ದೇಶಿಸಲಾಗಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement