ಡೊನೇಶನ್: ಕ್ರಮಕ್ಕೆ ಸೂಚನೆ
ಕ.ಪ್ರ.ವಾರ್ತೆ , ಸಾಗರ , ಮೇ 9
ಕೆಲವು ಖಾಸಗಿ ಶಾಲೆಗಳಲ್ಲಿ ಹೆಚ್ಚುವರಿ ಡೊನೇಶನ್ ಪಡೆದು ಶೋಷಿಸುತ್ತಿರುವ ಬಗ್ಗೆ ಸಾಕಷ್ಟು ದೂರುಗಳಿದ್ದು, ಈ ಬಗ್ಗೆ ಕ್ಷೇತ್ರ ಶಿಕ್ಷಣಾಧಿಕಾರಿಗಳು ಜಾಗೃತಿ ವಹಿಸಬೇಕು. ದೂರು ಇರುವ ಶಾಲೆಗಳಿಗೆ ದಿಢೀರ್ ಭೇಟಿ ನೀಡಿ ತಪ್ಪಿತಸ್ಥ ಶಿಕ್ಷಣ ಸಂಸ್ಥೆಗಳ ವಿರುದ್ಧ ಕ್ರಮ ಜರುಗಿಸುವಂತೆ ವಿಧಾನಸಭಾಧ್ಯಕ್ಷ ಕಾಗೋಡು ತಿಮ್ಮಪ್ಪ ಆದೇಶಿಸಿದರು.
ಇಲ್ಲಿನ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಶುಕ್ರವಾರ ಸರ್ವಶಿಕ್ಷಣ ಅಭಿಯಾನ ಹಾಗೂ ಮಾಧ್ಯಮ ಶಿಕ್ಷಣ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ, ಸರ್ಕಾರಿ ನಿಯಮ ಪಾಲಿಸದೆ ಇರುವ ಶಿಕ್ಷಣ ಸಂಸ್ಥೆಗಳ ಬಗ್ಗೆ ಶಿಕ್ಷಣ ಇಲಾಖೆ ಕಣ್ಗಾವಲು ಹಾಕಬೇಕು. ಜತೆಗೆ ನಿಯಮಾವಳಿ ಪ್ರಕಾರ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಅಲ್ಪಸಂಖ್ಯಾತ ವರ್ಗದವರಿಗೆ ಮೀಸಲಿರಿಸಿದ ಸ್ಥಾನ ನೀಡಲಾಗುತ್ತಿದೆಯೆ ಎನ್ನುವ ಕುರಿತು ಸಹ ಪರಿಶೀಲನೆ ನಡೆಸಬೇಕು ಎಂದು ಸೂಚನೆ ನೀಡಿದರು.
ಈ ಸಾಲಿನಲ್ಲಿ ಮೇ 30ರಿಂದ ಶೈಕ್ಷಣಿಕ ವರ್ಷ ಆರಂಭವಾಗಲಿದ್ದು, ಈಗಾಗಲೆ ಶೇ. 85ಕ್ಕೂ ಹೆಚ್ಚಿನ ಪಠ್ಯಪುಸ್ತಕ ಸರಬರಾಜಾಗಿದ್ದು, ಉಳಿದ ಪುಸ್ತಕ ತರಿಸಿಕೊಳ್ಳುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ ಅವರು, ಶಾಲೆಗಳಲ್ಲಿ ಕೊರತೆ ಇರುವ ಮೂಲ ಸೌಲಭ್ಯ ಪೂರೈಸುವ ನಿಟ್ಟಿನಲ್ಲಿ ತಕ್ಷಣ ಪಟ್ಟಿ ತಯಾರಿಸುವಂತೆ ಸೂಚನೆ ನೀಡಿದರು.
2014- 15ನೇ ಸಾಲಿನಲ್ಲಿ ಸರ್ವ ಶಿಕ್ಷಣ ಅಭಿಯಾನ ಯೋಜನೆಯಡಿ ಶಾಲೆ ದುರಸ್ತಿ, ಶೌಚಾಲಯ ನಿರ್ಮಾಣ, ಕಾಂಪೌಂಡ್, ಹೊಸ ಶಾಲೆ, ಕೊಠಡಿ ನಿರ್ಮಾಣ ಕುರಿತು ಅಂದಾಜು ಪಟ್ಟಿ ತಯಾರಿಸಿ ಅನುಮೋದನೆಗೆ ಕಳಿಸಲಾಗಿದೆ. ಕ್ಷೇತ್ರ ಶಿಕ್ಷಣಾಧಿಕಾರಿ ಸೇರಿದಂತೆ ಇತರೆ ಅಧಿಕಾರಿಗಳು ಶಾಲಾ ಆರಂಭಕ್ಕೆ ಪೂರ್ವಭಾವಿಯಾಗಿ ಸಭೆ ನಡೆಸುವಂತೆ ಸೂಚನೆ ನೀಡಿದರು.
ತಾಲೂಕು ಪಂಚಾಯಿತಿ ಅಧ್ಯಕ್ಷ ಹರೀಶ್ ಗಂಟೆ, ಪ್ರಭಾರ ಕಾರ್ಯನಿರ್ವಹಣಾಧಿಕಾರಿ ಡಾ. ಕಲ್ಲಪ್ಪ, ಕ್ಷೇತ್ರ ಶಿಕ್ಷಣಾಧಿಕಾರಿ ಪಿ. ಲಿಂಗಪ್ಪ, ಸಮನ್ವಯಾಧಿಕಾರಿ ಗಣೇಶ್ ವೈ., ಸಮಿತಿ ಸದಸ್ಯರಾದ ಶರಾವತಿ ಸಿ. ರಾವ್, ಮಲ್ಲಿಕಾರ್ಜುನ ಹಕ್ರೆ, ಕೃಷ್ಣಪ್ಪ ಸಿ., ಸೀತಾರಾಮ ಕುರುವರಿ ಹಾಜರಿದ್ದರು.