ರೋಗ ನಿರೋಧಕ ಹೆಚ್ಚಲು ಬೀಜೋಪಚಾರ ಅಗತ್ಯ
ಧರ್ಮಪುರ: ಶೇಂಗಾ ಬಿತ್ತನೆ ಮಾಡುವ ರೈತರು ಸೂಕ್ತ ಸಮಯದಲ್ಲಿ ಬೀಜೋಪಚಾರ ಮಾಡಿ ಜೊತೆಗೆ ಸೂಪರ್ ಫಾಸ್ಪೇಟ್, ಪೊಟಾಶ್ ಗೊಬ್ಬರ ಹಾಕುವುದರಿಂದ ರೋಗ ನಿರೋಧಕ ಶಕ್ತಿ ಹೆಚ್ಚುವುದಲ್ಲದೆ ಅಧಿಕ ಇಳುವರಿ ಪಡೆಯಬಹುದು ಎಂದು ಬಬ್ಬೂರು ಫಾರಂ ಕೃಷಿ ವಿಜ್ಞಾನ ಕೇಂದ್ರದ ಮಣ್ಣು ಮತ್ತು ನೀರು ಸಂರಕ್ಷಣಾ ತಜ್ಞ ಡಾ.ಎಸ್.ಬಿ. ಸಾಲಿಮಠ ತಿಳಿಸಿದರು.
ಬಬ್ಬೂರು ಕೃಷಿ ವಿಜ್ಞಾನ ಕೇಂದ್ರ ತಾಲೂಕಿನ ಹರಿಯಬ್ಬೆಯಲ್ಲಿ ಹಮ್ಮಿಕೊಂಡಿದ್ದ ಶೇಂಗಾ ಬೆಳೆಯ ಸುಧಾರಿತ ಬೇಸಾಯ ಪದ್ಧತಿ ಕುರಿತ ಹೊರಾಂಗಣ ತರಬೇತಿ ಶಿಬಿರದಲ್ಲಿ ಮಾತನಾಡಿದರು.
ಕಾಳು ಕಟ್ಟುವಿಕೆ ಅಧಿಕ: ಖುಷ್ಕಿ ಜಮೀನಿನಲ್ಲಿ ಶೇಂಗಾ ಬಿತ್ತನೆ ಮಾಡುವಾಗ ಎಕರೆಗೆ 200 ಕೆಜಿ ಜಿಪ್ಸಂ ಬಳಸಿದರೆ ಎಣ್ಣೆ ಅಂಶ ಮತ್ತು ಕಾಳು ಕಟ್ಟುವಿಕೆ ಅಧಿಕಗೊಳ್ಳುವುದು. ಶೇಂಗಾದಲ್ಲಿ ಟಿಎಂವಿ - 2, ಕೆಸಿಜಿ - 2, ಕೆಸಿಜಿ - 6 ಮತ್ತು ಐಸಿಜಿವಿ - 91114 ತಳಿಗಳು ಉತ್ಕೃಷ್ಟ ತಳಿಗಳಾಗಿವೆ. ಆ ಪೈಕಿ ಕೆಸಿಜಿ - 6 ಅಧಿಕ ಇಳುವರಿ ನೀಡುವ ತಳಿಯಾಗಿದೆ ಎಂದು ತಿಳಿಸಿದರು.
ಈರುಳ್ಳಿ ಈರುಳ್ಳಿ ಬಿತ್ತನೆ ಮಾಡುವ ರೈತರು ಕೊಟ್ಟಿಗೆ ಗೊಬ್ಬರದ ಜತೆಗೆ ಪೋಷಕಾಂಶಗಳಾದ ಸತು, ಬೋರಾನ್ ಹಾಗೂ ಸೂಕ್ಷ್ಮ ಜೀವಾಣುಗಳಾದ ಟ್ರೈಕೋಡರ್ಮಾ, ರಂಜಕ ಕರಗಿಸುವ ಜೈವಿಕ ಪಿಎಸ್ಬಿಯನ್ನು ಬಿತ್ತನೆ ವೇಳೆ ಹಾಕಬೇಕು.
ಒಂದು ಕ್ವಿಂಟಲ್ ಕೊಟ್ಟಿಗೆ ಗೊಬ್ಬರದ ಜತೆಗೆ ಒಂದು ಕೆಜಿ ಜೈವಿಕ ಗೊಬ್ಬರ ಮಿಶ್ರಣ ಮಾಡಿ ಹಾಕುವುದರಿಂದ ಗೆಡ್ಡೆ ಕೊಳೆ ರೋಗ, ಸಸಿ ಕೊಳೆ ರೋಗ ಹತೋಟಿ ಸಾಧ್ಯವಿದೆ. ಭಾರತೀಯ ತೋಟಗಾರಿಕಾ ಸಂಶೋಧನಾ ಸಂಸ್ಥೆ, ಹೆಸರುಘಟ್ಟ, ಬೆಂಗಳೂರು ಇವರು ಸಿದ್ಧಪಡಿಸಿರುವ ಅರ್ಕ ಕಲ್ಯಾಣ ಉತ್ತಮ ತಳಿಯಾಗಿದ್ದು, ಬೀಜೋತ್ಪಾದನೆ ಮಾಡಿ ಸಂಗ್ರಹಿಸಬಹುದಾಗಿದೆ ಎಂದು ತಿಳಿಸಿದರು.