ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಶಿವಮೊಗ್ಗ

ಶ್ರಮಜೀವಿ ವಿದ್ಯಾರ್ಥಿಗೆ ಉತ್ತಮ ಅಂಕ

Vishwanath S
Updated On : 10 May 2014, 11:52 am

ಕ.ಪ್ರ.ವಾರ್ತೆ , ಶಿವಮೊಗ್ಗ , ಮೇ 9
ಆತ ಪಿಯುಸಿ ಓದುತ್ತಿದ್ದರೂ ಜೀವನ ನಿರ್ವಹಣೆಗೆ ಮಾಡುತ್ತಿದ್ದುದು ಅಡುಗೆ ಬಡಿಸುವ ಕೆಲಸ. ತಾಯಿ ಮಾಡುವುದು ಕೂಲಿ ಕೆಲಸ. ಪರಿಸ್ಥಿತಿ ಹೀಗಿದ್ದರೂ ಪರಿಶ್ರಮದಿಂದ ದ್ವಿತೀಯ ಪಿಯುಸಿಯಲ್ಲಿ ಉತ್ತಮ ಅಂಕ ಗಳಿಸಿರುವ ವಿದ್ಯಾರ್ಥಿಯ ಕಥೆಯಿದು.
ಹೆಸರು ಸಿ.ಎಚ್. ಶರತ್‌ಕುಮಾರ್, ಊರು ಆನವಟ್ಟಿ ಬಳಿಯ ಚಿಕ್ಕ ಇಡಗೋಡು ಗ್ರಾಮ. ಆನವಟ್ಟಿ ಸರ್ಕಾರಿ ಪಿಯು ಕಾಲೇಜಿನಲ್ಲಿ ಓದಿದ ಈತ ಈ ಬಾರಿಯ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಶೇ. 88 ಅಂಕ ಗಳಿಸಿ ಸಾಧನೆ ಮೆರೆದಿದ್ದಾನೆ.
ಮನೆಯ ಜವಾಬ್ದಾರಿ ಹೊತ್ತವರು ಈತನ ತಾಯಿ ನಾಗರತ್ನ. ವಿಧವಾ ವೇತನದೊಂದಿಗೆ ಕೂಲಿ ಮೂಲಕ ಈಕೆ ಇಬ್ಬರು ಹೆಣ್ಣು ಮಕ್ಕಳು ಮತ್ತು ಶರತ್‌ರನ್ನು ಸಾಕಿ ಸಲಹಿದ್ದಾರೆ. ತಾಯಿಯ ಜತೆಗೆ ಅಕ್ಕನೂ ಖಾಸಗಿ ಸಂಸ್ಥೆಯಲ್ಲಿ ದುಡಿಮೆಯಲ್ಲಿ ತೊಡಗಿದ್ದು, ಇವರೆಲ್ಲರ ಜತೆಗೆ ತಾನೂ ಕುಟುಂಬಕ್ಕೆ ಹೆಗಲು ಕೊಡಲು ಶರತ್ ಆಯ್ದುಕೊಂಡಿದ್ದು ಓದಿನ ಜತೆಗೆ ಅಡುಗೆ ಬಡಿಸುವ ಕಾಯಕಕ್ಕೆ. ಒಟ್ಟಿಗೆ ರಜೆ ಬಂದ ಸಂದರ್ಭದಲ್ಲಿ ಆನವಟ್ಟಿಯಿಂದ ಶಿವಮೊಗ್ಗಕ್ಕೆ ಬರುವ ಶರತ್ ಇಲ್ಲಿನ ಮದುವೆ ಮನೆ, ಶುಭ ಸಮಾರಂಭದಲ್ಲಿ ಅಡುಗೆ ಬಡಿಸುವ ಕಾರ್ಯದಲ್ಲಿ ತೊಡಗುತ್ತಿದ್ದನಂತೆ.
ಇದೀಗ ದ್ವಿತೀಯ ಪಿಯುಸಿಯಲ್ಲಿ ಉತ್ತಮ ಅಂಕ ಬಂದಿರುವುದಕ್ಕೆ ಹರ್ಷ ವ್ಯಕ್ತಪಡಿಸಿರುವ ಆತ, ಮುಂದೆ ವೆಟರ್ನರಿ ಸೈನ್ಸ್ ಅಥವಾ ಬಿಎಸ್ಸಿ ಅಗ್ರಿ ಓದುವ ಹಂಬಲ ಇಟ್ಟುಕೊಂಡಿದ್ದಾನೆ.
ನಾನೇನು ಬಹು ಅಂಕ ಪಡೆಯಬೇಕೆಂದು ಪ್ರತಿ ದಿನ 8- 9 ಗಂಟೆ ಓದಿದ್ದಿಲ್ಲ. ಸರಿಸುಮಾರು ನಾಲ್ಕು ತಾಸು ಓದುತ್ತಿದ್ದೆ. ಕಾಲೇಜಿನಲ್ಲಿ ಪ್ರಾಂಶುಪಾಲರು ಮತ್ತು ಬೋಧಕ ವರ್ಗದವರು ತೋರಿಸುತ್ತಿದ್ದ ಕಾಳಜಿಗೆ ನಾನು ಋಣಿ ಎಂದು ಹೇಳಿಕೊಂಡ ಶರತ್, ಮಾರ್ಗದರ್ಶನ ಮಾಡಿದ ಎಲ್ಲರನ್ನೂ ಸ್ಮರಿಸುತ್ತೇನೆಂದರು.
ಈತನಿಗೆ ಕನ್ನಡ- 95, ಇಂಗ್ಲಿಷ್- 81, ಭೌತಶಾಸ್ತ್ರ- 85, ರಸಾಯನ ಶಾಸ್ತ್ರ- 91, ಗಣಿತ- 83, ಜೀವಶಾಸ್ತ್ರ- 95 ಅಂಕ ಬಂದಿದೆ.
ಕಷ್ಟಕರ ಜೀವನದೊಂದಿಗೆ ಶ್ರಮವಹಿಸಿ ಉತ್ತಮ ಅಂಕ ಪಡೆದ ಈತನ ಮುಂದಿನ ಓದಿಗೆ ಸಹಕರಿಸಲು ಇಚ್ಛಿಸುವವರು, ಶುಭ ಹಾರೈಸುವ ಅಪೇಕ್ಷೆ ಇದ್ದವರು ಮೊ. 9611685381ಗೆ ಕರೆ ಮಾಡಬಹುದು.
ಶೇ. 97 ಫಲಿತಾಂಶ
ಸಾಗರ: ಹೆಗ್ಗೋಡಿನ ಕೇಡಲಸರದ ಎಸ್. ರೂಪಶ್ರೀ ಕಾಲೇಜು ದ್ವಿತೀಯ ಪಿಯುಸಿಯಲ್ಲಿ ಶೇ. 97.50 ಫಲಿತಾಂಶ ಪಡೆದಿದೆ. ಪರೀಕ್ಷೆಗೆ ಕುಳಿತ 80 ವಿದ್ಯಾರ್ಥಿಗಳಲ್ಲಿ 78 ಜನರು ತೇರ್ಗಡೆಯಾಗಿದ್ದಾರೆ.  ಇವರಲ್ಲಿ 4 ಅತ್ಯುನ್ನತ, 53 ಪ್ರಥಮ, 17 ದ್ವಿತೀಯ ಹಾಗೂ 4 ತೃತೀಯ ಶ್ರೇಣಿ ಬಂದಿರುತ್ತದೆ. ವಾಣಿಜ್ಯ ವಿಭಾಗದಲ್ಲಿ ಗಣೇಶ್ ಶೇ. 90 (536) ಹಾಗೂ ಕಲಾ ವಿಭಾಗದಲ್ಲಿ ಕಾವ್ಯ ಎಸ್. ಶೇ. 85.50 (512) ಫಲಿತಾಂಶ ದಾಖಲಿಸಿದ್ದಾರೆ. ಉತ್ತಮ ಫಲಿತಾಂಶ ಪಡೆದ ವಿದ್ಯಾರ್ಥಿಗಳಿಗೆ ಪ್ರಾಚಾರ್ಯರಿಗೆ, ಉಪನ್ಯಾಸಕ ವರ್ಗಕ್ಕೆ ಆಡಳಿತ ಮಂಡಳಿ ಅಭಿನಂದನೆ ಸಲ್ಲಿಸಿದೆ.ಶೇ. 72.41 ಫಲಿತಾಂಶ: ಸಾಗರದ ಸರ್ಕಾರಿ ಸ್ವತಂತ್ರ ಪದವಿಪೂರ್ವ ಮಹಿಳಾ ಕಾಲೇಜು ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಶೇ. 72.41 ಫಲಿತಾಂಶ ದಾಖಲಿಸಿದೆ. 232 ವಿದ್ಯಾರ್ಥಿಗಳು ಪರೀಕ್ಷೆಗೆ ಕುಳಿತಿದ್ದು, 06 ಅತ್ಯುನ್ನತ, 80 ಪ್ರಥಮ, 42 ದ್ವಿತೀಯ, 40 ತೃತೀಯ ಸ್ಥಾನ ಪಡೆದಿದ್ದಾರೆ. ವಿಜ್ಞಾನ ವಿಭಾಗದಲ್ಲಿ ಟಿ.ಜಿ. ಸೃಷ್ಟಿ ಶೇ. 90.50(543) ಫಲಿತಾಂಶ ಪಡೆದಿದ್ದು, ಗಣಿತದಲ್ಲಿ 100ಕ್ಕೆ 100 ಅಂಕ ಗಳಿಸಿದ್ದಾರೆ. ಸ್ಪೂರ್ತಿ ಎಸ್.ವಿ. ಶೇ. 85(510) ಅಂಕ ಗಳಿಸಿದ್ದಾರೆ. ವಾಣಿಜ್ಯ ವಿಭಾಗದಲ್ಲಿ ಸಮ್ರೀನ್ ಸುಲ್ತಾನ ಶೇ. 86.50 (520) ಅಂಕ ಗಳಿಸಿದ್ದಾರೆ. ಕಲಾ ವಿಭಾಗದಲ್ಲಿ ವಾಸವಿ ಬಿ.ಎನ್. ಶೇ. 81 (486) ಅಂಕ ಗಳಿಸಿ, ಕಾಲೇಜಿಗೆ ಮೊದಲ ಸ್ಥಾನ ಪಡೆದಿದ್ದಾರೆ. ಉತ್ತಮ ಸಾಧನೆ ಮಾಡಿದ ವಿದ್ಯಾರ್ಥಿನಿಯರನ್ನು ಪ್ರಾಚಾರ್ಯ ಟಿ. ಗಂಗಾಧರಪ್ಪ, ಉಪನ್ಯಾಸಕ ವರ್ಗ ಹಾಗೂ ಕಾಲೇಜು ಅಭಿವೃದ್ಧಿ ಸಮಿತಿ ಅಭಿನಂದಿಸಿದೆ.
ಪಿಯುಸಿಯಲ್ಲಿ ಸಾಧನೆ
ಶಿರಾಳಕೊಪ್ಪ: ಇಲ್ಲಿನ ಸಪಪೂ ಕಾಲೇಜಿನಲ್ಲಿ ಪಿಯುಸಿ ಪರೀಕ್ಷೆಯಲ್ಲಿ ಶೇ. 69.54 ಫಲಿತಾಂಶ ಬಂದಿದೆ. ಪ್ರಾಂಶುಪಾಲ ಚಂದ್ರಪ್ಪ ಮಾತನಾಡಿ, ಕಲಾ, ವಿಜ್ಞಾನ ಮತ್ತು ವಾಣಿಜ್ಯ ವಿಭಾಗಗಳ ಒಟ್ಟು ಫಲಿತಾಂಶ ಇದಾಗಿದೆ ಎಂದು ತಿಳಿಸಿದ್ದಾರೆ. ಒಟ್ಟು 76 ವಿದ್ಯಾರ್ಥಿಗಳು ಪ್ರಥಮ ಶ್ರೇಣಿ, 53 ವಿದ್ಯಾರ್ಥಿಗಳು ದ್ವಿತೀಯ ಹಾಗೂ 63 ತೃತೀಯ ದರ್ಜೆಯಲ್ಲಿ ಪಾಸಾಗಿರುವುದಾಗಿ ತಿಳಿಸಿದ್ದಾರೆ. ಪಟ್ಟಣದ ಸರ್ಕಾರಿ ಪದವಿಪೂರ್ವ ಬಾಲಕಿಯರ ಕಾಲೇಜಿನ ಕಲಾ ವಿಭಾಗ ಶೇ.70, ವಿಜ್ಞಾನ ಶಏ. 40ರಷ್ಟು ಫಲಿತಾಂಶ ಬಂದಿದೆ.
ಹೊಸನಗರ
ಹೊಸನಗರ:  ಈ ಬಾರಿಯ ಪಿಯುಸಿ ಫಲಿತಾಂಶದಲ್ಲಿ ತಾಲೂಕಿನ ಬಹುತೇಕ ಕಾಲೇಜುಗಳು ಉತ್ತಮ ಸಾಧನೆ ಮಾಡಿದ್ದು ಕಳೆದ ಬಾರಿಗಿಂತ ಉತ್ತಮ ಫಲಿತಾಂಶ ಪಡೆದಿವೆ. ನಿಟ್ಟೂರು ಪದವಿ ಪೂರ್ವ ಕಾಲೇಜು ಶೇ.92ರಷ್ಟು ಫಲಿತಾಂಶ ಪಡೆದಿದ್ದರೇ ಹೊಸನಗರ ಪಟ್ಟಣದ ಪಿ.ಯು ಕಾಲೇಜು ಶೇ.79ರಷ್ಟು ಫಲಿತಾಂಶ ಪಡೆದಿದೆ. ಹೋಲಿ ರಿಡೀಮರ್ ಶೇ.82.8, ನಗರ ಪದವಿ ಪೂರ್ವ ಕಾಲೇಜು ಶೇ.81ರಷ್ಟು ಫಲಿತಾಂಶ ಪಡೆದುಕೊಂಡಿದೆ. ನಿಟ್ಟೂರು ಸರ್ಕಾರಿ ಪದವಿ ಪೂರ್ವ ಕಾಲೇಜಿಗೆ ಶೇ.92ರಷ್ಟು ಫಲಿತಾಂಶ ಲಭ್ಯವಾಗಿದೆ. ಇದರಲ್ಲಿ 8 ವಿದ್ಯಾರ್ಥಿಗಳು ಡಿಸ್ಟಿಂಕ್ಷನ್, 33 ಪ್ರಥಮ, 11 ದ್ವಿತಿಯ, ನಾಲ್ವರು ವಿದ್ಯಾರ್ಥಿಗಳು ತೃತೀಯ ದರ್ಜೆಯಲ್ಲಿ ಉತ್ತೀರ್ಣರಾಗಿದ್ದಾರೆ. ಪಟ್ಟಣದ ಹೋಲಿ ರಿಡಿಮರ್ ಕಾಲೇಜಿನಲ್ಲಿ ಪರೀಕ್ಷೆಗೆ ಕುಳಿತ 35 ವಿದ್ಯಾರ್ಥಿಗಳಲ್ಲಿ 29 ವಿದ್ಯಾರ್ಥಿಗಳು ಪಾಸಾಗಿ ಶೇ 82.8 ರಷ್ಟು ಫಲಿತಾಂಶ ದಾಖಲಿಸಿದ್ದಾರೆ. ಕಲಾ ವಿಭಾಗದ ವಿದ್ಯಾರ್ಥಿಗಳು ನೂರಕ್ಕೆ ನೂರು ಫಲಿತಾಂಶ ಪಡೆದು ಗಮನ ಸೆಳೆದಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement