ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಶಿವಮೊಗ್ಗ

ಹಾವು ಶಿವನ ಕೊರಳಲಿದ್ದರೇ ಚೆನ್ನ

Mainashree
Updated On : 11 May 2014, 11:09 am

ಶಿವಮೊಗ್ಗ: ನಾಗರಹಾವು ಶಿವನಕೊರಳಲ್ಲಿ ಇದ್ದರೆ ಮಾತ್ರ ಭಕ್ತರಿಂದ ಪೂಜೆ ಸ್ವೀಕರಿಸುತ್ತದೆ. ರಸ್ತೆಗೆ ಬಂದರೆ ಜನರು ಕಲ್ಲಿನಲ್ಲಿ ಹೊಡೆಯುತ್ತಾರೆ ಎಂಬುದನ್ನು ಅರ್ಥಮಾಡಿಕೊಳ್ಳಬೇಕು ಎಂದು ಶಿವಮೊಗ್ಗ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಮಂಜುನಾಥ್ ಭಂಡಾರಿ ಅವರು ಪರೋಕ್ಷವಾಗಿ ಮಾಜಿ ಸಚಿವ ಕುಮಾರ್ ಬಂಗಾರಪ್ಪ ವಿರುದ್ಧ ಹರಿಹಾಯ್ದಿದ್ದಾರೆ.
ಲಗಾನ್ ಕಲ್ಯಾಣ ಮಂದಿರದಲ್ಲಿ ಶನಿವಾರ ಏರ್ಪಡಿಸಿದ್ದ ಜಿಲ್ಲಾ ಕಾಂಗ್ರೆಸ್ ಕಾರ್ಯಕರ್ತರಿಗೆ ಕೃತಜ್ಞತಾ ಸಭೆಯಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ಕಾಮಧೇನು ಇದ್ದಂತೆ. ಕೆಲವರು ಪಕ್ಷದ ಮೂಲಕ ಎಲ್ಲಾ ಅಧಿಕಾರ ಅನುಭವಿಸಿದ್ದಾರೆ. ಆದರೆ ಪಕ್ಷಕ್ಕೆ ಇವರ ಕೂಡುಗೆ ಏನು ಎಂದು ಪ್ರಶ್ನಿಸಿದರು.
ನಾನು ಅಧಿಕಾರಕ್ಕಾಗಿ ಕಾಂಗ್ರೆಸ್ ಸೇರಿಲ್ಲ. ಕಳೆದ 36 ವರ್ಷಗಳಿಂದ ಪಕ್ಷಕ್ಕಾಗಿ ದುಡಿದಿದ್ದೇನೆ. ಕೆಲವರು ಟಿಕೆಟ್ ಮತ್ತು ಅಧಿಕಾರ ನೀಡಿದರೆ ಮಾತ್ರ ಪಕ್ಷದ ಪರ ಕೆಲಸ ಮಾಡುವ ಮನೋಭಾವ ಬೆಳೆಸಿಕೊಂಡಿರುವುದು ಸರಿಯಲ್ಲ ಎಂದರು.
ಮುಂದೆ ಮರುಕಳಿಸದಿರಲಿ: ಕೆಲವರು ತಮ್ಮ ಪಕ್ಷದ ಅಭ್ಯರ್ಥಿಯನ್ನೇ ಟೀಕಿಸುವ ಮೂಲಕ ಸಂಘಟನೆಯನ್ನು ದುರ್ಬಲಗೊಳಿಸುವ ಪ್ರಯತ್ನ ನಡೆಸಿದ್ದಾರೆ ಎಂದ ಅವರು, ಮುಂದಾದರೂ ತಮ್ಮ ನಡೆ, ನುಡಿ ತಿದ್ದಿಕೊಳ್ಳಬೇಕು, ತಪ್ಪುಗಳು ಮುಂದಿನ ಚುನಾವಣೆಗಳಲ್ಲಿ ಮರುಕಳಿಸಬಾರದು. ಪಕ್ಷದ ಬಗ್ಗೆ ಬದ್ಧತೆ ಇರುವ ಅಭ್ಯರ್ಥಿಗೆ ಮಾತ್ರ ಅಧಿಕಾರ ಮತ್ತು ಟಿಕೆಟ್ ಸಿಗುವಂತಾಗಬೇಕು ಎಂದು ಹೇಳಿದರು.
ಚುನಾವಣೆ ನಡೆಸಿದ ರೀತಿ ಬಗ್ಗೆ ಆತ್ಮತೃಪ್ತಿಯಿದೆ. ನನಗೆ ಯಾರ ಬಗ್ಗೆಯೂ ದ್ವೇಷವಿಲ್ಲ. ಚುನಾವಣೆಯಲ್ಲಿ ಗೆಲವು ಸಾಧಿಸಿದರೆ ಕಾರ್ಯಕರ್ತರಿಗೆ ಸಲ್ಲಿಸುವೆ. ವ್ಯತಿರಿಕ್ತ ಫಲಿತಾಂಶ ಬಂದರೆ ಅದರ ಸಂಪೂರ್ಣ ಹೊಣೆ ಹೊರುವೆ ಎಂದರು.
ಶಿಕ್ಷಣ ಸಚಿವ ಕಿಮ್ಮನೆ ರತ್ನಾಕರ್ ಮಾತನಾಡಿ, ಟಿಕೆಟ್ ನೀಡುವ ವಿಚಾರದಲ್ಲಾದ ಗೊಂದಲ ದೊಡ್ಡ ಸಮಸ್ಯೆ ಅಲ್ಲ. ಕಾಂಗ್ರೆಸ್ ವ್ಯಕ್ತಿಗಿಂತ ತತ್ವ ಸಿದ್ಧಾಂತದ ತಳಹದಿಯಲ್ಲಿ ನಡೆದು ಬಂದಿದೆ ಎಂದರು.
ಮಾಧ್ಯಮದೆದುರು ಚರ್ಚೆ ಸಲ್ಲ: ನಾನು ಹಲವು ಚುನಾವಣೆಗಳಲ್ಲಿ ಅತೀ ಕಡಿಮೆ ಅಂತರದಲ್ಲಿ ಸೋಲು ಕಂಡಿದ್ದೇನೆ. ಯಾರ ಬಗ್ಗೆಯೂ ದ್ವೇಷ ಸಾಧಿಸಿಲ್ಲ. ಆಂತರಿಕ ವಿಷಯಗಳನ್ನು ಪಕ್ಷದೊಳಗೆ ಬಗೆಹರಿಸಿಕೊಳ್ಳಬೇಕು. ಮಾಧ್ಯಮದವರ ಎದುರು ಚರ್ಚೆ ಮಾಡುವುದು ಸರಿಯಲ್ಲ ಎಂದು ಕಾರ್ಯಕರ್ತರಿಗೆ ಕಿಮ್ಮನೆ ಕರೆ ನೀಡಿದರು.
ಕಾಂಗ್ರೆಸ್ ಮುಖಂಡ ಕೆ. ದಿವಾಕರ್, ಜಿಲ್ಲಾಧ್ಯಕ್ಷ ಆರ್. ಪ್ರಸನ್ನಕುಮಾರ್, ಶಾಸಕ ಕೆ.ಬಿ. ಪ್ರಸನ್ನಕುಮಾರ್, ಜಿಪಂ ಸದಸ್ಯ ಕಲಗೋಡು ರತ್ನಾಕರ್, ಪ್ರಮುಖರಾದ ಎನ್. ರಮೇಶ್, ವಿಶ್ವನಾಥ್ ಕಾಶಿ, ಬಲ್ಕಿಷ್ ಬಾನು ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement