ಜಿಲ್ಲಾ ಸಾಹಿತ್ಯ ಸಮ್ಮೇಳನ ಸಿದ್ಧತೆ: ಕಾರ್ಯಕಾರಿ ಸಮಿತಿ ಸಭೆ ಚರ್ಚೆ
ಶಿವಮೊಗ್ಗ: ನಾಡಿನ ಹಿರಿಯ ಕವಿ ಡಾ.ಎನ್.ಎಸ್. ಲಕ್ಷ್ಮೀನಾರಾಯಣ ಭಟ್ಟರ ಸರ್ವಾಧ್ಯಕ್ಷತೆಯಲ್ಲಿ ಜಿಲ್ಲಾ ಸಾಹಿತ್ಯ ಸಮ್ಮೇಳನವು ಜೂನ್ 1 ಹಾಗೂ 2ರಂದು ನಗರದ ಕುವೆಂಪು ರಂಗಮಂದಿರದಲ್ಲಿ ನಡೆಯಲಿದ್ದು, ಸಿದ್ಧತೆಯ ಬಗ್ಗೆ ಕನ್ನಡ ಸಾಹಿತ್ಯ ಪರಿಷತ್ತು ಜಿಲ್ಲಾ ಕಾರ್ಯಕಾರಿ ಸಮಿತಿ ಸಭೆಯಲ್ಲಿ ಚರ್ಚಿಸಲಾಯಿತು.
ಈ ಹಿಂದೆ ಮಾರ್ಚಿಯಲ್ಲಿ ನಡೆಸಲು ಉದ್ದೇಶಿಸಿದ್ದ ಸಮ್ಮೇಳನ ಚುನಾವಣೆಯ ಕಾರಣ ಮುಂದೂಡಲಾಗಿತ್ತು. ಈ ಹಿಂದೆ ನಿಗಧಿ ಪಡಿಸಿದ್ದ ಗೋಷ್ಠಿಗಳು ಅತಿಥಿಗಳು, ಆಮಂತ್ರಣ ಯಾವುದೇ ಬದಲಾವಣೆಗಳಿಲ್ಲವೆಂದು ಕಸಾಪ ಜಿಲ್ಲಾ ಅಧ್ಯಕ್ಷರಾದ ಡಿ. ಮಂಜುನಾಥ ತಿಳಿಸಿದ್ದಾರೆ.
ತಾಲೂಕು ಸಮ್ಮೇಳನ: ಎಲ್ಲಾ ತಾಲೂಕುಗಳಲ್ಲೂ ತಾಲೂಕು ಸಾಹಿತ್ಯ ಸಮ್ಮೇಳನ ನಡೆಸುವ ಬಗ್ಗೆ ಚಿಂತಿಸಲಾಯಿತು. ಮೂರು ತಾಲ್ಲೂಕು ಸಮ್ಮೇಳನ ನಿಗಧಿಯಾಗಿದ್ದು, ಎರಡು ಮುಕ್ತಾಯವಾಗಿದೆ. ಹೊಸನಗರ ತಾಲೂಕು ಸಮ್ಮೇಳನವು ಜೂನ್ 15ರಂದು ನಡೆಯಲಿದೆ ಎಂದು ಸಭೆಗೆ ಮಾಹಿತಿ ನೀಡಲಾಯಿತು.
ಕಳೆದ ಆರ್ಥಿಕ ವರ್ಷದ ಕಾರ್ಯಕ್ರಮಗಳ ಪ್ರಗತಿ, ವರದಿ ಮತ್ತು ಆಡಿಟ್ ಆದ ಲೆಕ್ಕಪತ್ರಗಳನ್ನು ಒದಗಿಸುವ ಬಗ್ಗೆ ಮಾಹಿತಿ ನೀಡಲಾಯಿತು. ಸಮ್ಮೇಳನದಲ್ಲಿ ಅನುಸರಿಸಬೇಕಾದ ನೀತಿ, ನಿಯಮಗಳನ್ನು ತಿಳಿಸಲಾಯಿತು. ಪ್ರತಿ ತಾಲೂಕಿನ ನಿವೇಶನ ಪಡೆಯುವ ಪ್ರಯತ್ನ, ಕಟ್ಟಡ ನಿರ್ಮಾಣದ ಪ್ರಗತಿ ಕುರಿತು ಚರ್ಚಿಸಲಾಯಿತು.
ಜಿಲ್ಲಾ ಕಾರ್ಯದರ್ಶಿ ಎಂ. ನವೀನ್ ಕುಮಾರ್ ಸ್ವಾಗತಿಸಿದರು, ಕೋಶಾಧ್ಯಕ್ಷರಾದ ಮಧೂಸೂದನ ಐತಾಳ್ ಸುತ್ತೋಲೆ ಓದಿ ದರು. ತಾಲೂಕು ಅಧ್ಯಕ್ಷೆ ಶೀಲಾ ಸುರೇಶ್ ವಂದಿಸಿದರು. ಸಾಗರದ ವಿ.ಟಿ. ಸ್ವಾಮಿ, ಹೊಸನಗರದ ಕೆಸಿನಮನೆ ನಾ. ರತ್ನಾಕರ್, ತೀರ್ಥಹಳ್ಳಿಯ ನೆಂಪೆ ದೇವರಾಜ್, ಭದ್ರಾವತಿಯ ಕೋಗಲೂರು ತಿಪ್ಪೇಸ್ವಾಮಿ, ಸೊರಬದ ಶಿವಾನಂದ ಪಾಣಿ ಇದ್ದರು.