ಫಲಿತಾಂಶ 27ನೇ ಸ್ಥಾನಕ್ಕೇರಿದ್ದೇ ಗ್ರೇಟ್
ಕ.ಪ್ರ.ವಾರ್ತೆ ಟಿ ಶಿವಮೊಗ್ಗ ಟಿ ಮೇ 12
ಕಳೆದ ಮಾರ್ಚ್- ಏಪ್ರಿಲ್ನಲ್ಲಿ ಕರ್ನಾಟಕ ಪ್ರೌಢಶಿಕ್ಷಣ ಪರೀಕ್ಷಾ ಮಂಡಳಿ ನಡೆಸಿದ್ದ 10ನೇ ತರಗತಿ ಸಾರ್ವತ್ರಿಕ ಪರೀಕ್ಷೆಯಲ್ಲಿ ಶಿವಮೊಗ್ಗ ಜಿಲ್ಲೆಯಿಂದ ಪರೀಕ್ಷೆ ಬರೆದವರ ಪೈಕಿ ಶೇ. 80.5ರಷ್ಟು ಉತ್ತೀರ್ಣರಾಗಿದ್ದಾರೆ. ಕಳೆದ ಬಾರಿಗೆ ಹೋಲಿಸಿದರೆ ಎರಡು ಸ್ಥಾನ ಹೆಚ್ಚಾಗಿದ್ದೇ ಸಾಧನೆ.
ಇನ್ನು ಈ ಬಾರಿ ಗುಣಮಟ್ಟಕ್ಕಾಗಿ ವಿವಿಧ ಜಿಲ್ಲೆಗಳಿಗೆ ರ್ಯಾಂಕ್ ನೀಡಲಾಗಿದ್ದು, ಶಿವಮೊಗ್ಗ ಜಿಲ್ಲೆಗೆ 8ನೇ ಸ್ಥಾನ ಲಭ್ಯವಾಗಿದೆ.
ಜಿಲ್ಲೆಯ ಫಲಿತಾಶ ಹೆಚ್ಚಿಸುವ ಉದ್ದೇಶದಿಂದ ಸಾಕಷ್ಟು ಕಾರ್ಯತಂತ್ರ ರೂಪಿಸಲಾಗಿತ್ತು. ಖುದ್ದು ಶಿಕ್ಷಣ ಸಚಿವರೇ ಆಸಕ್ತಿ ತೋರಿಸಿದ್ದರು. ವಿಶೇಷ ಕಾರ್ಯಾಗಾರ ನಡೆಸಲಾಗಿತ್ತು, ವಿಶೇಷ ತರಗತಿಗಳು, ಸರಣಿ ಪರೀಕ್ಷೆ ನಡೆಸಲಾಗಿತ್ತಾದರೂ ನಿರೀಕ್ಷಿತ ಯಶಸ್ಸು ಸಿಕ್ಕಿಲ್ಲ.
ಆದರೆ, ಯಶಸ್ಸು ಸಿಕ್ಕಿಲ್ಲ ಎಂಬ ವಾದ ಒಪ್ಪಲು ಜಿಲ್ಲೆಯ ಶಿಕ್ಷಣ ಇಲಾಖೆ ಅಧಿಕಾರಿಗಳು ತಯಾರಿಲ್ಲ. ಕಳೆದ ಬಾರಿ 29 ಸ್ಥಾನ ಪಡೆದುಕೊಂಡಿತ್ತು. ಪ್ರಸ್ತುತ ವರ್ಷ ಎರಡು ಸ್ಥಾನದಲ್ಲಿ ಏರಿಕೆ ಕಂಡಿದೆ, ಇದು ಸಾಧನೆಯೇ ಸರಿ. ಶೇಕಡವಾರು ಫಲಿತಾಂಶ ಕೂಡ ಹೆಚ್ಚಾಗಿದೆ. ಜತೆಗೆ ಗುಣಮಟ್ಟದಲ್ಲೂ ಏರಿಕೆಯಾಗಿದೆ ಎಂದು ಹೇಳುತ್ತಾರೆ.
ಶೇ.100 ಫಲಿತಾಂಶ: ನಗರದ ರಾಮಕೃಷ್ಣ ವಿದ್ಯಾನಿಕೇತನ ವಸತಿ ಪ್ರೌಢಶಾಲೆಗೆ ಎಸ್ಸೆಸ್ಸೆಲ್ಸಿ, ಪರೀಕ್ಷೆಯಲ್ಲಿ ಸತತವಾಗಿ 8ನೇ ಬಾರಿಗೆ 100ರಷ್ಟು ಫಲಿತಾಂಶ ಬಂದಿದೆ. ಪರೀಕ್ಷೆಗೆ ಹಾಜರಾದ 181 ವಿದ್ಯಾರ್ಥಿಗಳ ಪೈಕಿ 43 ಮಂದಿ ಅತ್ಯುತ್ತಮ ಶ್ರೇಣಿ, 115 ಪ್ರಥಮ ಶ್ರೇಣಿ, 15 ದ್ವಿತೀಯ ಶ್ರೇಣಿ, ಎಂಟು ಮಂದಿ ತೃತೀಯ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ.
ಶಾಲೆಯ ಪ್ರಣವ(612), ಸಂಯುಕ್ತ ಪೈ.ಎಂ (602), ದರ್ಶನ್ಕುಮಾರ್ ಹೆಗಡೆ (601), ಪ್ರಜ್ವಲ್ ಆರ್. ಶೆಟ್ಟಿ (601). ಉತ್ತಮ ಸಾಧನೆ ಮಾಡಿದ ವಿದ್ಯಾರ್ಥಿಗಳನ್ನು ಅಭಿನಂದಿಸುವುದಾಗಿ ಶಾಲೆಯ ಕಾರ್ಯದರ್ಶಿ ವೆಂಕಟರಮಣ ತಿಳಿಸಿದ್ದಾರೆ.
ಪ್ರಿಯದರ್ಶಿನಿ ಇಂಗ್ಲಿಷ್ ಪ್ರೌಢಶಾಲೆಯು ಸತತ ಮೂರನೇ ಬಾರಿಗೆ ಶೇ. 100 ಫಲಿತಾಂಶ ಪಡೆದಿದ್ದು, ಶಾಲೆಯ ಕಿರಣ್ (95.84), ಜ್ಯೋತಿ ತ್ಯಾಗರಾಜ್ (ಶೇ. 95.68), ಸುಚೇತನ್ (93.36), ಮಂಜುನಾಥ್ (91.88).
ಹೆಚ್ಚು ಅಂಕ ಪಡೆದವರು: ಚೇತನ್- 614, ಆದಿಚುಂಚನಗಿರಿ ವಿದ್ಯಾವರ್ಧಕ ಶಾಲೆ, ಭದ್ರಾವತಿ, ಹರ್ಷಿತಾ ಆರ್.- 613, ಧೀರಜ್ ಶೆಟ್ಟಿ- 613, ಆದಿಚುಂಚನಗಿರಿ ಪ್ರೌಢಶಾಲೆ, ಶಿವಮೊಗ್ಗ, ಪ್ರಣವ ವೈ.ಎನ್.- 612, ರಾಮಕೃಷ್ಣ ಶಾಲೆ, ಶಿವಮೊಗ್ಗ, ಎಚ್.ಆರ್.ವರ್ಚಸ್- 612, ಗೌರಿ- 611, ಹರ್ಷ ಎಂ-611, ಸಾಂದೀಪನಿ ಪ್ರೌಢಶಾಲೆ, ಶಿವಮೊಗ್ಗ.
ಸೊರಬ: ಸೂರಜ್ಗೆ ಶೇ.96
ಸೊರಬ: ತಾಲೂಕು ಹರೀಶಿ ಸರ್ಕಾರಿ ಪ್ರೌಢಶಾಲೆ ವಿದ್ಯಾರ್ಥಿ ಸೂರಜ್ ಈ ಸಾಲಿನ ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ ಶೇ.96.3 ರಷ್ಟು ಸಾಧನೆ ತೋರಿ, ತಾಲೂಕಿಗೆ ಕೀರ್ತಿ ತಂದಿದ್ದಾನೆ. ಉಮಾ, ಶ್ರೀಪಾದ ಹೆಗಡೆ ದಂಪತಿ ಪುತ್ರನಾದ ಸೂರಜ್ ಸಾಧನೆಗೆ ಶಾಲಾ ಬೋಧಕವರ್ಗ, ಆಡಳಿತ ವರ್ಗ ಅಭಿನಂದಿಸಿದೆ.
ಸಾಗರ: ಇಕ್ಕೇರಿ ಶಾಲೆಗೆ ಶೇ.100
ಸಾಗರ: ಸಾಗರ ತಾಲೂಕಿನ ಗ್ರಾಮಾಂತರ ಪ್ರದೇಶದ ಕನ್ನಡ ಮಾಧ್ಯಮದ ಇಕ್ಕೇರಿ ಪ್ರೌಢಶಾಲೆ 2013- 14ನೇ ಸಾಲಿನ ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ ಶೇ.100ರ ಫಲಿತಾಂಶ ಪಡೆದಿದೆ.
ಪರೀಕ್ಷೆ ಬರೆದಿದ್ದ 39 ವಿದ್ಯಾರ್ಥಿಗಳಲ್ಲಿ 6 ವಿದ್ಯಾರ್ಥಿಗಳು ಅತ್ಯುನ್ನತ ದರ್ಜೆಯಲ್ಲಿ ಹಾಗೂ 20 ವಿದ್ಯಾರ್ಥಿಗಳು ಪ್ರಥಮ ದರ್ಜೆಯಲ್ಲಿ ಉತ್ತೀರ್ಣರಾಗಿದ್ದಾರೆ. ಶೇ.91.04 ಅಂಕಗಳೊಂದಿಗೆ ಎಚ್.ಆರ್. ಸಮರ್ಥ ಶಾಲೆಗೆ ಪ್ರಥಮ ಸ್ಥಾನ ಪಡೆದಿದ್ದರೆ, ಶೇ.90.24 ಅಂಕಗಳೊಂದಿಗೆ ಆದರ್ಶ ಹೆಗಡೆ, ಶೇ.87.04 ಫಲಿತಾಂಶದೊಂದಿಗೆ ವಿ.ಎಂ. ಸುನೀತಾ ಹಾಗೂ ಅಶ್ವತ್ಥ್, ಎಂ.ಆರ್. ರಮ್ಯಾ, ಅಖಿಲಾ ಜನ್ನೆ ಅತ್ಯುತ್ತಮ ದರ್ಜೆಯಲ್ಲಿ ಉತ್ತೀರ್ಣರಾಗಿದ್ದಾರೆ.
ಸದರಿ ಶಾಲೆ 2011- 12ರಲ್ಲಿಯೂ ಶೇ.100ರ ಸಾಧನೆ ಮಾಡಿದ ತಾಲೂಕಿನ ಏಕೈಕ ಗ್ರಾಮಾಂತರ ಕನ್ನಡ ಖಾಸಗಿ ಶಾಲೆಯಾಗಿತ್ತು. ಸಾಧನೆ ಮಾಡಿದ ವಿದ್ಯಾರ್ಥಿಗಳು ಹಾಗೂ ಈ ಫಲಿತಾಂಶ ಬರಲು ಕಾರಣರಾದ ಶಿಕ್ಷಕ ವರ್ಗಕ್ಕೆ ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಜಿ.ವಿ.ಅನಂತ, ಕಾರ್ಯದರ್ಶಿ ಎಸ್.ಟಿ. ರತ್ನಾಕರ್ ಹಾಗೂ ಮುಖ್ಯ ಶಿಕ್ಷಕರಾದ ಸಿ.ರಜನೀಶ್ ಅಭಿನಂದಿಸಿದ್ದಾರೆ.
ಕುಮದ್ವತಿ ಶಾಲೆಗೆ ಶೇ.100
ಶಿಕಾರಿಪುರ: ಕುಮದ್ವತಿ ಶಿಕ್ಷಣ ಮಹಾವಿದ್ಯಾಲಯ ಈ ಬಾರಿಯ ಎಸ್ಸೆಸೆಲ್ಸಿ ಪರೀಕ್ಷೆಯಲ್ಲಿ ಶೇ.100 ಫಲಿತಾಂಶದ ಮೂಲಕ ಉತ್ತಮ ಸಾಧನೆ ಮೆರೆದಿದ್ದು ಆನಂದ್ 589 ಅಂಕಗಳಿಸಿ ಪ್ರಥಮ ಸ್ಥಾನದಲ್ಲಿದ್ದಾನೆ.
ಪರೀಕ್ಷೆಗೆ ಹಾಜರಾದ 42 ವಿದ್ಯಾರ್ಥಿಗಳಲ್ಲಿ 8 ವಿದ್ಯಾರ್ಥಿಗಳು ಅತ್ಯುನ್ನತ ಶ್ರೇಣಿಯಲ್ಲಿ, 25 ಪ್ರಥಮ ದರ್ಜೆ,6 ದ್ವಿತೀಯ ಹಾಗೂ 3 ತೃತೀಯ ದರ್ಜೆಯಲ್ಲಿ ಉತ್ತೀರ್ಣರಾಗಿದ್ದಾರೆ. ಅಕ್ಷತಾ ಕಾರಂತ್ ದ್ವಿತೀಯ ಸ್ಥಾನ ಪಡೆದಿದ್ದಾಳೆ.
ಬನಸಿರಿ ಲಯನ್ಸ್ಗೆ ಶೇ.100
ಶಿಕಾರಿಪುರ: ಎಸ್ಸೆಸೆಲ್ಸಿ ಪರೀಕ್ಷೆಯಲ್ಲಿ ಪಟ್ಟಣದ ಪ್ರತಿಷ್ಠಿತ ಬನಸಿರಿ ಲಯನ್ಸ್ ವಿದ್ಯಾ ಸಂಸ್ಥೆಗೆ ಸತತ 6 ನೇ ಬಾರಿಗೆ ಶೇ.100 ಫಲಿತಾಂಶ ಲಭ್ಯವಾಗಿದ್ದು ಅಮಾನಿ ಜಿ.ಶೇ. 96.64 ಅಂಕಗಳಿಸಿ ಪ್ರಥಮ ಸ್ಥಾನ ಪಡೆದಿದ್ದಾಳೆ.
ಪರೀಕ್ಷೆಗೆ ಹಾಜರಾದ ಸಂಸ್ಥೆಯ 82 ವಿದ್ಯಾರ್ಥಿಗಳಲ್ಲಿ 41 ಅತ್ಯುನ್ನತ ಶ್ರೇಣಿಯಲ್ಲಿ, 36 ಪ್ರಥಮ, 4 ದ್ವಿತೀಯ ಹಾಗೂ ಒಬ್ಬ ವಿದ್ಯಾರ್ಥಿ ತೃತೀಯ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾನೆ.