ಬಿಜೆಪಿ ಸರ್ಕಾರದಿಂದ ನೂರಾರು ಕೆರೆ ಅಭಿವೃದ್ಧಿ
ಕ.ಪ್ರ.ವಾರ್ತೆ ಟಿ ಶಿರಾಳಕೊಪ್ಪ ಟಿ ಮೇ 12
ರಾಜ್ಯದಲ್ಲಿ ಬಿಜೆಪಿ ಸರ್ಕಾರದಲ್ಲಿ ಮುಖ್ಯಮಂತ್ರಿ ಆಗಿದ್ದಾಗ ರಾಜ್ಯದ ನೂರಾರು ದೇವಸ್ಥಾನಗಳು ಹಾಗೂ ರಾಜಮಹರಾಜರು ನಿರ್ಮಿಸಿದ್ದ ಕೆರೆ-ಕಟ್ಟೆಗಳ ಅಭಿವೃದ್ಧಿ ಮಾಡಲಾಗಿದೆ ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ತಿಳಿಸಿದರು.
ತಾಲೂಕಿನ ಮಳೂರ ಗ್ರಾಮದಲ್ಲಿ ನೂತನ ಗಣಪತಿ, ವೀರಭದ್ರೇಶ್ವರ ದೇವರ ಮೂರ್ತಿ ಪ್ರತಿಷ್ಠಾಪನೆ ಹಾಗೂ ನೂತನ ದೇವಸ್ಥಾನ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದ ಅವರು, ಗ್ರಾಮಗಳಲ್ಲಿ ನಿತ್ಯಪೂಜೆ ನಡೆಯುವುದರಿಂದ ಜನರಲ್ಲಿ ಧಾರ್ಮಿಕ ಭಾವನೆಗಳು ಜಾಗೃತಗೊಳ್ಳುತ್ತಿವೆ ಎಂದರು.
ತಾಲೂಕಿನ ಐತಿಹಾಸಿಕ ತೊಗರ್ಸಿ, ಶಿವನಪಾದ ಕ್ಷೇತ್ರಗಳನ್ನು ಪುರಾತನ ದೇವಾಲಯಗಳ ತಾಣದಂತೆ ಅಭಿವೃದ್ಧಿಪಡಿಸಲಾಗುತ್ತಿದೆ. ಇಲ್ಲಿಯೂ ಸಹ ಇಡೀ ಗ್ರಾಮ ಒಂದಾದರೆ ಏನಾದರೂ ಸಾಧಿಸಬಹುದು ಎನ್ನುವುದಕ್ಕೆ ಮಳೂರ ದೇವಸ್ಥಾನ ನಿರ್ಮಾಣವೇ ಸಾಕ್ಷಿ ಎಂದರು.
ಮಹಿಳೆಯರು ಜಾಗೃತರಾಗಲಿ: ಸರ್ಕಾರ ಶಿಕ್ಷಣಕ್ಕೆ ಬೇಕಾಗುವ ಎಲ್ಲ ಸವಲತ್ತು ಕೊಡುತ್ತಿರುವಾಗ ನಿಮ್ಮ ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಿಸಿ, ರೈತರ ಮಕ್ಕಳು ಎಂಜನಿಯರ್, ಡಾಕ್ಟರ್ ಆಗಬೇಕು. ನಿಮ್ಮ ಮಕ್ಕಳು ಬುದ್ಧಿವಂತರಿದ್ದು, ಅವರನ್ನು ಶಿಕ್ಷಣದಿಂದ ವಂಚಿತರನ್ನಾಗಿ ಮಾತ್ರ ಮಾಡಬೇಡಿ ಎಂದ ಬಿಎಸ್ವೈ, ಮಹಿಳೆಯರು ಜಾಗೃತರಾದರೆ ಇಡೀ ಕುಟುಂಬ ಹಾಗೂ ನಾಡೇ ಜಾಗೃತವಾದಂತೆ ಎಂದರು.
25 ಸಾವಿರ ಮಕ್ಕಳು: ಶಿಕಾರಿಪುರ ತಾಲೂಕಿನಲ್ಲಿ ಮೊರಾರ್ಜಿ ದೇಸಾಯಿ ವಸತಿ ಶಾಲೆಗಳು, ಕಿತ್ತೂರು ಚೆನ್ನಮ್ಮ ವಸತಿ ಶಾಲೆ ಸೇರಿದಂತೆ ಹಾಸ್ಟೇಲ್ಗಳಲ್ಲಿ ಇಂದು 25 ಸಾವಿರ ಮಕ್ಕಳು ವಿದ್ಯಾಭ್ಯಾಸ ಮಾಡುತ್ತಿದ್ದಾರೆ. ಮಕ್ಕಳು ಚೆನ್ನಾಗಿ ಓದಿ ತಮ್ಮ ಕಾಲ ಮೇಲೆ ತಾವು ನಿಲ್ಲುವಂತೆ ಅವಕಾಶ ಕಲ್ಪಿಸಿ ಎಂದರು.
ಕಾರ್ಯಕ್ರಮದ ಸಾನ್ನಿಧ್ಯ ವಹಿಸಿದ್ದ ರಟ್ಟೀಹಳ್ಳಿ ಕಬ್ಬಿನ ಕಂತಿಮಠದ ಶಿವಲಿಂಗ ಶಿವಾಚಾರ್ಯ ಸ್ವಾಮಿಗಳು ಮಾತನಾಡಿ, ಇದು ಭಾವೈಕ್ಯ ತರುವಂತಹ ಕಾರ್ಯಕ್ರಮ. ಇಂದು ಆಧ್ಯಾತ್ಮಕ ಚಿಂತನೆ ಕಡಿಮೆ ಆಗುತ್ತಿರುವಾಗ ದೇವಾಲಯಗಳು ಅವಶ್ಯ. ಎಲ್ಲಿ ಧರ್ಮವಿರುತ್ತದೆಯೋ ಆ ಗ್ರಾಮ ಉದ್ಧಾರ ಆಗುತ್ತದೆ ಎಂದರು.
ಶಿವಯೋಗಿ ಮಂದಿರದ ರೇವಣಸಿದ್ದ ಮಹಾಸ್ವಾಮಿಗಳು ಆಶೀರ್ವಚನ ನೀಡಿದರು. ಶಿಕಾರಿಪುರದ ಬಸವಾಶ್ರಮದ ಮಾತೆ ಶರಣಾಂಬಿಕೆ, ನಿವೃತ್ತ ಶಿಕ್ಷಕ ರಾಜಶೇಖರ್ ಮಾತನಾಡಿದರು. ದೇವಸ್ಥಾನ ಸಮಿತಿ ಅಧ್ಯಕ್ಷ ಈಶ್ವರಪ್ಪ ಅಧ್ಯಕ್ಷತೆ ವಹಿಸಿದ್ದರು.
ಜಿಪಂ ಸ್ಥಾಯಿ ಸಮಿತಿ ಅಧ್ಯಕ್ಷ ದಾನಿರುದ್ರಪ್ಪ, ತಾಪಂ ಸದಸ್ಯ ಈಶ್ವರಪ್ಪ ಸುರೇಶ್ಗೌಡ್ರು, ಸೊರಬ ಪತ್ರಕರ್ತ ರಾಮಚಂದ್ರ, ನಿವೃತ್ತ ಶಿಕ್ಷಕ ಮಲ್ಲಪ್ಪ, ಗ್ರಾಪಂ ಅಧ್ಯಕ್ಷ ರಾಮಪ್ಪ, ಗ್ರಾಪಂ ಸದಸ್ಯರು ಹಾಜರಿದ್ದರು.