ಪೂರ್ವ ವಲಯದ ಜಿಲ್ಲೆಗಳಲ್ಲಿ ಕ್ಯಾಂಟಿನ್
ಕ.ಪ್ರ.ವಾರ್ತೆ ಟಿ ಶಿವಮೊಗ್ಗ ಟಿ ಮೇ 14
ದೇಶದ ರಕ್ಷಣಾ ಸಿಬ್ಬಂದಿಗಾಗಿ ಇರುವ ಕ್ಯಾಂಟಿನ್ ವ್ಯವಸ್ಥೆಯಂತೆ ಪೊಲೀಸ್ ಸಿಬ್ಬಂದಿ, ಅಧಿಕಾರಿಗಳ ಅನುಕೂಲಕ್ಕಾಗಿ ಆರಂಭಿಸಿರುವ ಕ್ಯಾಂಟಿನ್ ವ್ಯವಸ್ಥೆ ಶಿವಮೊಗ್ಗದಲ್ಲೂ ಆರಂಭವಾಗಿದೆ.
ಇಲ್ಲಿನ ಡಿಎಆರ್ ಮೈದಾನದಲ್ಲಿ ಬುಧವಾರ ನೂತನ ಪೊಲೀಸ್ ಕ್ಯಾಂಟೀನ್ ಅನ್ನು ಪೂರ್ವ ವಲಯ ಐಜಿಪಿ ಡಾ. ಎಸ್.ಪರಶಿವಮೂರ್ತಿ ಉದ್ಘಾಟಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು, ಶಿವಮೊಗ್ಗ ನಗರದಲ್ಲಿ ಅನುಷ್ಠಾನಗೊಳಿಸಿದಂತೆ ಪೂರ್ವ ವಲಯ(ಶಿವಮೊಗ್ಗ, ದಾವಣಗೆರೆ, ಚಿತ್ರದುರ್ಗ, ಬಳ್ಳಾರಿ) ವ್ಯಾಪ್ತಿಯ ಇತರೆ ಜಿಲ್ಲಾ ಕೇಂದ್ರಗಳಲ್ಲಿಯೂ ಪೊಲೀಸ್ ಕ್ಯಾಂಟಿನ ಯೋಜನೆ ಅನುಷ್ಠಾನ ಮಾಡಲಾಗುತ್ತದೆ ಎಂದರು.
ಪೊಲೀಸರ ಹಿತರಕ್ಷಣೆಯ ದೃಷ್ಟಿಯಿಂದ ಸರ್ಕಾರವು ಪೊಲೀಸ್ ಕ್ಯಾಂಟಿನ ಯೋಜನೆ ಜಾರಿಗೆ ತಂದಿದೆ. ಅದರಂತೆ ಜಿಲ್ಲಾ ಕೇಂದ್ರಗಳಲ್ಲಿ ಪೊಲೀಸ್ ಕ್ಯಾಂಟಿನ್ ತೆರೆಯಲಾಗುತ್ತಿದೆ. ಈ ಕೇಂದ್ರಗಳಲ್ಲಿ ಎಲ್ಲಾ ಹಂತದ ಪೊಲೀಸರಿಗೆ ರಿಯಾಯಿತಿಯಲ್ಲಿ ಗೃಹೋಪಯೋಗಿ ವಸ್ತುಗಳು ಲಭ್ಯವಾಗಲಿದೆ ಎಂದ ಅವರು, ಯೋಜನೆಯನ್ನು ಪೊಲೀಸರು ಸದ್ಬಳಕೆ ಮಾಡಿಕೊಳ್ಳಬೇಕೆಂದು ಕರೆ ನೀಡಿದರು.
ಪೊಲೀಸ್ ಕ್ಯಾಂಟೀನ್‌ಗಳಲ್ಲಿ ಗೃಹೋಪಯೋಗಿ ವಸ್ತುಗಳ ಖರೀದಿಗೆ ಸಂಬಂಧಿಸಿದಂತೆ ಪ್ರತಿಯೊಬ್ಬ ಪೊಲೀಸರಿಗೂ ಪ್ರತ್ಯೇಕ ಸ್ಮಾರ್ಟ್ ಕಾರ್ಡ್ ನೀಡಲಾಗುತ್ತದೆ. ಈ ಸ್ಮಾರ್ಟ್ ಕಾರ್ಡ್ ಬಳಕೆ ಮಾಡಿ ವಸ್ತುಗಳ ಖರೀದಿ ಮಾಡಬಹುದಾಗಿದೆ. ಪ್ರತಿ ಪೊಲೀಸರು ತಿಂಗಳಿಗೆ ಐದು ಸಾವಿರ ರುಪಾಯಿ ಮೌಲ್ಯದ ವಸ್ತುಗಳನ್ನು ರಿಯಾಯಿತಿ ದರದಲ್ಲಿ ಖರೀದಿಸಲು ಅವಕಾಶ ನೀಡಲಾಗಿದೆ. ಇದಕ್ಕಿಂತ ಹೆಚ್ಚಿನ ವಸ್ತು ಖರೀದಿ ಸಾಧ್ಯವಿಲ್ಲವಾಗಿದೆ ಎಂದು ಸ್ಪಷ್ಟಪಡಿಸಿದರು.
ಅತ್ಯಂತ ಪಾರದರ್ಶಕವಾಗಿ ಯೋಜನೆ ಅನುಷ್ಠಾನಕ್ಕೆ ಕ್ರಮ ಕೈಗೊಳ್ಳಲಾಗಿದೆ. ಯಾವುದೇ ಕಾರಣಕ್ಕೂ ದುರುಪಯೋಗವಾಗಬಾರದು ಎಂದು ಸಲಹೆ ನೀಡಿದರು.
ನಿಯಂತ್ರಣ: ಶಿವಮೊಗ್ಗ ಜಿಲ್ಲೆಯಲ್ಲಿ ನಕ್ಸಲೀಯ ಚಟುವಟಿಕೆ ಸಂಪೂರ್ಣ ನಿಯಂತ್ರಣದಲ್ಲಿದೆ. ನಿರಂತರವಾಗಿ ನಕ್ಸಲೀಯರ ವಿರುದ್ಧ ಕೂಂಬಿಂಗ್ ಕಾರ್ಯಾಚರಣೆ ನಡೆಸಲಾಗುತ್ತಿದೆ ಎಂದು ಹೇಳಿದ ಅವರು, ಪೊಲೀಸರು ತಾವು ಮಾಡುವ ಕರ್ತವ್ಯ ಏನೆಂಬುದನ್ನು ಅರಿತು ಕೆಲಸ ಮಾಡಬೇಕಾಗುತ್ತದೆ. ಮಾಡಬಾರದ ಕೆಲಸಗಳನ್ನು ಮಾಡಲು ಹೋದರೆ ಸಮಸ್ಯೆ ಸೃಷ್ಟಿಯಾಗುತ್ತದೆ ಎಂದು ಪತ್ರಕರ್ತರ ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ಈ ಸಂದರ್ಭ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೌಶಲೇಂದ್ರಕುಮಾರ್ ಸೇರಿದಂತೆ ಹಿರಿಯ ಅಧಿಕಾರಿಗಳು ಹಾಜರಿದ್ದರು.
ಬಿದನೂರು ಪ್ರವಾಸಿ ತಾಣ ವೀಕ್ಷಿಸಿದ ಐಜಿ
ಹೊಸನಗರ: ತಾಲೂಕಿನ ಇತಿಹಾಸ ಪ್ರಸಿದ್ಧ ಬಿದನೂರಿಗೆ ಬುಧವಾರ ಭೇಟಿ ನೀಡಿದ ಪೂರ್ವ ವಲಯ ಐಜಿಪಿ ಪರಶಿವಮೂರ್ತಿ ಇಲ್ಲಿಯ ನಗರ ಕೋಟೆ, ದೇವಗಂಗೆಕೊಳ, ಸಾವೇಹಕ್ಲು ಡ್ಯಾಂ ವಿವಿಧ ಪ್ರವಾಸಿ ತಾಣವನ್ನು ವೀಕ್ಷಿಸಿದರು.
ನಂತರ ವರ್ಷಪೂರ್ತಿ ನೀರು ತುಂಬಿರುವ ದೇವಗಂಗೆ ಕೊಳಕ್ಕೆ ಭೇಟಿ ನೀಡಿ, ಬುದ್ದಿವಂತಿಕೆ ಮತ್ತು ವಿನ್ಯಾಸ ಮಾಡಿದ ಪರಿಗೆ ಬೆಲೆಕಟ್ಟಲು ಸಾಧ್ಯವಿಲ್ಲ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಸ್ವತ ಉತ್ತಮ ಗಾಯಕರು ಆಗಿರುವ ಪರಶಿವಮೂರ್ತಿ. ಮುಂದಿನದಿನದಲ್ಲಿ ದೇವಗಂಗೆಕೊಳದ ಪರಿಸರದ ಪ್ರಶಾಂತತೆ ನಡುವೆ ಬೆಳದಿಂಗಳ ಬೆಳಕಿನಲ್ಲಿ ಸಂಗೀತ ಕಾರ್ಯಕ್ರಮ ನಡೆಸುವ ಬಗ್ಗೆ ಉತ್ಸಾಹ ತೋರಿದರು.
ಅವರೊಂದಿಗೆ ಅಡಿಷನಲ್ ಎಸ್ಪಿ ದಯಾಳು, ಡಿಎಸ್ಪಿ ಚನ್ನಪ್ಪ, ಸಿಪಿಐ ರವಿಕುಮಾರ್, ಪಿಎಸ್‌ಐ ಸತೀಶ್ ಎಚ್.ಎಸ್. ಮತ್ತಿತರರು ಇದ್ದರು.