ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಶಿವಮೊಗ್ಗ

'ಲೋಕ'ಮತ ಬಹಿರಂಗ ನಾಳೆ

Mainashree
Updated On : 15 May 2014, 10:23 am

ಕ.ಪ್ರ.ವಾರ್ತೆ ್ಣ ಶಿವಮೊಗ್ಗ ್ಣ ಮೇ 14
ಮೇ 16ರಂದು ನಡೆಯಲಿರುವ ಲೋಕಸಭೆ ಚುನಾವಣೆ ಮತ ಎಣಿಕೆ ಪ್ರಕ್ರಿಯೆಗೆ ಸಕಲ ಸಿದ್ಧತೆ ನಡೆದಿದ್ದು, ಅಂದು ಮಧ್ಯಾಹ್ನ 3ರ ಹೊತ್ತಿಗೆ ಫಲಿತಾಂಶ ಪ್ರಕಟಿಸಲು ಎಲ್ಲಾ ತಯಾರಿ ನಡೆದಿದೆ ಎಂದು ಜಿಲ್ಲಾಧಿಕಾರಿ ವಿಪುಲ್ ಬನ್ಸಲ್ ತಿಳಿಸಿದ್ದಾರೆ.
ಮತ ಎಣಿಕೆ ನಡೆಯುವ ಎನ್‌ಇಎಸ್‌ನ ಎಸ್.ಆರ್. ನಾಗಪ್ಪ ಶ್ರೇಷ್ಠಿ ಮೆಮೋರಿಯಲ್ ಕಾಲೇಜಿಗೆ ಬುಧವಾರ ಭೇಟಿ ನೀಡಿ ಮತ ಎಣಿಕೆ ಪ್ರಕ್ರಿಯೆಯ ಪೂರ್ವಸಿದ್ಧತೆ ವೀಕ್ಷಿಸಿದ ನಂತರ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು.
ವಿಧಾನಸಭೆ ಕ್ಷೇತ್ರವಾರು ಪ್ರತಿ ಕ್ಷೇತ್ರಕ್ಕೆ 2 ಕೊಠಡಿಯಲ್ಲಿ ಶಿವಮೊಗ್ಗ ಗ್ರಾಮಾಂತರ ಹಾಗೂ ಬೈಂದೂರು ಕ್ಷೇತ್ರದ ತಲಾ ಒಂದು ಕೊಠಡಿಯಂತೆ 8 ಕ್ಷೇತ್ರಗಳ ಮತ ಎಣಿಕೆ ಹಾಗೂ ಒಂದು ಕೊಠಡಿಯಲ್ಲಿ ಪೋಸ್ಟಲ್ ಬ್ಯಾಲೆಟ್ ಸೇರಿ ಒಟ್ಟು 15 ಕೊಠಡಿಗಳಲ್ಲಿ ಮತ ಎಣಿಕೆ ಮೇ 16ರಂದು ಬೆಳಗ್ಗೆ 8 ಗಂಟೆಯಿಂದ ಆರಂಭವಾಗಲಿದೆ.
ಎಣಿಕೆ ಅಧಿಕಾರಿ: ಮತ ಎಣಿಕೆಗೆ ಅನುಕೂಲವಾಗಲು ಪ್ರತಿ ಕೊಠಡಿಗೆ 7 ಟೇಬಲ್‌ಗಳಲ್ಲಿ ಪ್ರತಿ ಟೇಬಲ್‌ಗೆ ಮೂವರು ಎಣಿಕೆ ಅಧಿಕಾರಿಗಳನ್ನು ನೇಮಿಸಲಾಗುವುದು. ಇದರಲ್ಲಿ ಪ್ರತಿ ಟೇಬಲ್ಲಿಗೂ ಒಬ್ಬ ಮೈಕ್ರೋ ಅಬ್ಸರ್‌ವರ್ ಇರಲಿದ್ದಾರೆ.
ಮತ ಎಣಿಕೆ ಪ್ರಕ್ರಿಯೆಯಲ್ಲಿ ತೊಡಗುವ ಅಧಿಕಾರಿ, ಸಿಬ್ಬಂದಿಗೆ ಬುಧವಾರ ತರಬೇತಿ ನೀಡಲಾಗಿದೆ. ರಾಜಕೀಯ ಪಕ್ಷಗಳ ಪ್ರತಿನಿಧಿಗಳಿಗೆ ಮಂಗಳವಾರ ಸಭೆ ನಡೆಸಲಾಗಿದೆ. ಹಾಗೂ ಮೈಕ್ರೋ ಅಬ್ಸರ್‌ವರ್‌ಗಳಿಗೆ ಗುರುವಾರ ತರಬೇತಿ ನೀಡಲಾಗುತ್ತಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದರು.
ಮತ ಎಣಿಕೆ ಪ್ರಕ್ರಿಯೆ ಯಾವುದೇ ಗೊಂದಲ ಇಲ್ಲದೆ ನಡೆಯುವ ಸಲುವಾಗಿ ಪ್ರತ್ಯೇಕ ಪಾಸ್‌ಗಳನ್ನು ವಿತರಿಸಲಾಗಿದ್ದು, ಮಾಧ್ಯಮ ಪ್ರತಿನಿಧಿಗಳು ಸೇರಿದಂತೆ ಪಾಸ್ ಇದ್ದವರಿಗೆ ಮಾತ್ರ ಮತ ಎಣಿಕೆ ಪ್ರದೇಶಕ್ಕೆ ಪ್ರವೇಶ ಕಲ್ಪಿಸಲಾಗುವುದು. ಉಳಿದಂತೆ ಮಹಾವೀರ ವೃತ್ತ ಹಾಗೂ ಡಿವಿಎಸ್ ವೃತ್ತದಲ್ಲಿ ಎಲ್ಲಾ ವಾಹನಗಳು ಹಾಗೂ ಸಾರ್ವಜನಿಕರಿಗೆ ಪ್ರವೇಶ ನಿರ್ಬಂಧಿಸಲಾಗಿದೆ.
ಅತ್ಯಾಧುನಿಕ ಸೌಲಭ್ಯ: ಮಾಧ್ಯಮದವರ ಅನುಕೂಲಕ್ಕಾಗಿ ಹಾಗೂ ಪ್ರತಿಕ್ಷಣದ ಸುದ್ದಿ ಭಿತ್ತರಿಸಲು ಅನುಕೂಲವಾಗುವಂತೆ ಸುಸಜ್ಜಿತ ಮಾಧ್ಯಮ ಕೇಂದ್ರ ನಿರ್ಮಿಸಲಾಗಿದೆ. ಇಲ್ಲಿ ಮಾಧ್ಯಮದವರ ಅನುಕೂಲಕ್ಕಾಗಿ ಇಂಟರ್‌ನೆಟ್, ದೂರವಾಣಿ, ಟಿವಿ ಸೇರಿದಂತೆ ಇನ್ನಿತರ ಅತ್ಯಾಧುನಿಕ ಸೌಲಭ್ಯ ಅಳವಡಿಸಲಾಗಿದೆ. ಮಾಧ್ಯಮ ಪ್ರತಿನಿಧಿಗಳ ಪ್ರವೇಶಕ್ಕೆ ಈಗಾಗಲೇ ಭಾರತ ಚುನಾವಣಾ ಆಯೋಗದಿಂದ ಪಾಸ್ ವಿತರಿಸಲಾಗಿದೆ ಎಂದರು.
ಒಟ್ಟಾರೆ ಮತ ಎಣಿಕೆಗೆ ಯಾವುದೇ ಗೊಂದಲ ಇಲ್ಲದಂತೆ ನಡೆಸಲು ಸಕಲ ಸಿದ್ಧತೆ ನಡೆಸಲಾಗಿದ್ದು, ಮೇ 16ರಂದು ಮಧ್ಯಾಹ್ನ 3ಗಂಟೆಗೆ ಚುನಾವಣಾ ಫಲಿತಾಂಶ ನೀಡಲು ತಯಾರಿ ನಡೆಸಲಾಗಿದೆ ಎಂದರು.
ಜಿಲ್ಲಾ ಪೊಲೀಸ್ ಅಧೀಕ್ಷಕ ಕೌಶಲೇಂದ್ರ ಕುಮಾರ್ ಮಾತನಾಡಿ, ಮತ ಎಣಿಕೆ ಪ್ರಕ್ರಿಯೆ ಶಾಂತಿಯುತವಾಗಿ ನಡೆಯಲು ವ್ಯಾಪಕ ಬಂದೋಬಸ್ತ್ ಮಾಡಲಾಗಿದೆ. ಮತದಾನದ ದಿನದಿಂದ ಮತ ಎಣಿಕೆ ದಿನದವರೆಗೆ ಸ್ಟ್ರಾಂಗ್‌ರೂಂ ಬಂದೋಬಸ್ತ್ ಮಾಡಲಾಗಿದೆ ಎಂದರು.
ಮೇ 16ರಂದು ಬೆಳಗ್ಗೆ 8 ಗಂಟೆಯಿಂದ ಮತ ಎಣಿಕೆ ಪ್ರಾರಂಭವಾಗುವುದರಿಂದ ಅಂದು ಮುಂಜಾನೆಯಿಂದಲೇ ಎನ್‌ಇಎಸ್ ಕಾಲೇಜು ಮುಂಭಾಗದ ಮಹಾವೀರ ವೃತ್ತ ಹಾಗೂ ಡಿವಿಎಸ್ ವೃತ್ತದವರೆಗೆ ವಾಹನ ಸಂಚಾರ ನಿಷೇಧಿಸಲಾಗಿದೆ ಹಾಗೂ ಮತ ಎಣಿಕೆ ನಡೆಯುವ 200 ಮೀ. ಪ್ರದೇಶದಲ್ಲಿ 144ರ ಅನ್ವಯ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ ಎಂದರು.
ಮುಂಜಾಗ್ರತಾ ಕ್ರಮವಾಗಿ ಮೇ 15ರಂದು ರಾತ್ರಿ 12 ಗಂಟೆಯಿಂದ ಮೇ 16ರ ರಾತ್ರಿ 12ರ ವರೆಗೆ ಮದ್ಯ ಮಾರಾಟ ನಿಷೇಧಿಸಲಾಗಿದೆ. ಉಳಿದಂತೆ 500ಕ್ಕೂ ಹೆಚ್ಚು ಪೊಲೀಸ್ ಸಿಬ್ಬಂದಿ ಹಾಗೂ ಪೊಲೀಸ್ ಅಧಿಕಾರಿಗಳೊಂದಿಗೆ ವ್ಯಾಪಕ ಬಂದೋಬಸ್ತ್ ಮಾಡಲಾಗಿದೆ ಎಂದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement