ಸಂಚಾರ ಸಮಸ್ಯೆ; ಸೂಚನಾ ಫಲಕ ಅಳವಡಿಕೆಗೆ ನಿರ್ಧಾರ
ಕ.ಪ್ರ.ವಾರ್ತೆ ಟಿ ಶಿರಾಳಕೊಪ್ಪ ಟಿ ಮೇ 14
ಇಲ್ಲಿನ ಪಟ್ಟಣ ಪಂಚಾಯಿತಿ ಸಭಾಂಗಣದಲ್ಲಿ ಮೇ 14ರಂದು ನೂತನ ಸದಸ್ಯರ ಪ್ರಥಮ ಸಾಮಾನ್ಯ ಸಭೆ ನಡೆಯಿತು. ಅಧ್ಯಕ್ಷೆ ಜಮೀಲಾ ಖಾತೂನ್ ಅಧ್ಯಕ್ಷತೆಯ ಸಭೆಯಲ್ಲಿ ಎಲ್ಲ ಸದಸ್ಯರು ಭಾಗವಹಿಸಿ ತಮ್ಮ ಸಲಹೆ ಸಹಕಾರ ನೀಡಿದರು.
ಪಟ್ಟಣದ ಹೊಂಡದ ಆಂಜನೇಯಸ್ವಾಮಿ ದೇವಸ್ಥಾನದ ಸುತ್ತಲು ಸಂಪೂರ್ಣ ಬೇಲಿ ನಿರ್ಮಿಸಿ ವಾಯು ವಿಹಾರಕ್ಕೆ ಪೂರಕವಾಗಿ ಅಭಿವೃದ್ಧಿಪಡಿಸಲಾಗಿದೆ. ಆ ಭಾಗದ ಜನರು ಓಡಾಡಲು ನೆರವಾಗುವಂತೆ ಗೇಟ್ ಅಳವಡಿಸುವ ಬಗ್ಗೆ ಪ್ರಸ್ತಾಪಿಸಲಾಯಿತು. ಆಗ ಪಪಂ ಅದನ್ನು ಮೊದಲು ತಮ್ಮ ಸುಪರ್ದಿಗೆ ಪಡೆದು ನಂತರ ಈ ಬಗ್ಗೆ ತೀರ್ಮಾನ ಕೈಗೊಳ್ಳಬೇಕು ಎಂದು ತೀರ್ಮಾನಿಸಲಾಯಿತು.
ಪಟ್ಟಣದಲ್ಲಿ ವಾಹನ ಸಂಚಾರ ಮಿತಿಮೀರಿದೆ. ಚಾಲಕರು ತಮ್ಮ ವಾಹನಗಳನ್ನು ಪಟ್ಟಣದ ರಸ್ತೆಗಳಲ್ಲಿ ಎಲ್ಲೆಂದರಲ್ಲಿ ನಿಲ್ಲಿಸುತ್ತಿರುವುದರಿಂದ ನಾಗರೀಕರ ಸಂಚಾರಕ್ಕೆ ಸಮಸ್ಯೆಯಾಗಿ ಪರಿಣಿಸಿದೆ. ಈ ಹಿನ್ನೆಲೆಯಲ್ಲಿ ವಾಹನಗಳನ್ನು ನಿರ್ದಿಷ್ಟ ಸ್ಥಳದಲ್ಲಿ ನಿಲ್ಲಿಸುವ ಕುರಿತು ನಾಮಫಲಕಗಳನ್ನು ಅಳವಡಿಸಬೇಕು ಎಂದು ಸಭೆಯಲ್ಲಿ ಆಗ್ರಹಿಸಲಾಯಿತು. ಆರ್‌ಟಿಓ ಮತ್ತು ಪೊಲೀಸರಿಂದ ಈ ಬಗ್ಗೆ ಸೂಕ್ತ ಮಾಹಿತಿ ಪಡೆದು ನಂತರ ತೀರ್ಮಾನ ಕೈಗೊಳ್ಳಲು ನಿರ್ಧರಿಸಲಾಯಿತು.
2013- 14ನೇ ಸಾಲಿನ 13ನೇ ಸಾಲಿನ ಘನತ್ಯಾಜ್ಯ ವಸ್ತು ನಿರ್ವಹಣೆಗಾಗಿ ಬಿಡುಗಡೆ ಆಗಿರುವ ಅನುದಾನ ಹಾಗೆಯೇ 2012-2013ನೇ ಸಾಲಿನ 13ನೇ ಹಣಕಾಸು ಯೋಜನೆಯಡಿ ಬಿಡುಗಡೆಯಾದ 60 ಲಕ್ಷ ಕ್ರಿಯಾ ಯೋಜನೆ ಅನುಮೋದಿಸುವ ಬಗ್ಗೆ ಸಭೆ ಸರ್ವಾನುಮತದ ನಿರ್ಣಯ ಕೈಗೊಳ್ಳಲಾಯಿತು.
ಪಪಂ ಮುಖ್ಯಾಧಿಕಾರಿ ಇದ್ದರು. ರೋಜ್ಗಾರ್ ಯೋಜನಾಧಿಕಾರಿ ಬಾಲಾಜಿರಾವ್ ಸ್ವಾಗತಿಸಿದರು.
ಸ್ಥಾಯಿ ಸಮಿತಿ ಅಧ್ಯಕ್ಷರ ಆಯ್ಕೆ: ಪಪಂ 1ನೇ ವಾರ್ಡ್ ಸದಸ್ಯ ಮಂಜುನಾಯ್ಕ ಅವರನ್ನು ಸಭೆಯಲ್ಲಿ ಸರ್ವಾನುಮತದಿಂದ ನೂತನ ಸ್ಥಾಯಿ ಸಮಿತಿ ಅಧ್ಯಕ್ಷರನ್ನಾಗಿ ನೇಮಕ ಮಾಡಲಾಯಿತು.
ಮಂಜುನಾಯ್ಕ್ ಅವರನ್ನು ಪಪಂ ಅಧ್ಯಕ್ಷೆ ಜಮೀಲಾ ಖಾತೂನ್, ಉಪಾಧ್ಯಕ್ಷೆ ನೂರ್ ಜಹಾನ್ ಹಾಗೂ ಸದಸ್ಯ ರು ಅಭಿನಂದಿಸಿ, ಅಭಿವೃದ್ಧಿಗೆ ಸಹಕರಿಸುವ ಭರವಸೆ ನೀಡಿದರು.