ದೇಶದಲ್ಲಿ ಮೋದಿ, ಶಿವಮೊಗ್ಗ ಕ್ಷೇತ್ರದಲ್ಲಿ ಬಿಎಸ್‌ವೈ ಹವಾ
ಹೊಸನಗರ: ದೇಶದಲ್ಲಿ ಬದಲಾವಣೆ ಗಾಳಿ, ಮೋದಿ ಮತ್ತು ಯಡಿಯೂರಪ್ಪ ಅಲೆಯಿಂದಾಗಿ ಶಿವಮೊಗ್ಗ ಲೋಕಸಭಾ ಕ್ಷೇತ್ರವನ್ನು ದಾಖಲೆಯ ಅಂತರದಲ್ಲಿ ಬಿಜೆಪಿ ಪಡೆದುಕೊಂಡಿದೆ ಎಂದು ಮಾಜಿ ಶಾಸಕ ಬೇಳೂರು ಗೋಪಾಲಕೃಷ್ಣ ಹೇಳಿದರು.
ಕಾಂಗ್ರೆಸ್ ದುರಾಡಳಿತದಿಂದಾಗಿ ಬೇಸತ್ತ ಜನ ದೇಶದಲ್ಲಿ ಸಂಚಲನ ಮೂಡಿಸಿದ ಮೋದಿಯನ್ನು ಯಾವುದೇ ಅಳುಕಿಲ್ಲದೆ ಬೆಂಬಲಿಸಿದ್ದು ದೇಶಕ್ಕೆ ಉತ್ತಮ ಆಡಳಿತ ದೊರೆಯಲಿದೆ ಎಂದರು.
ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಅಧಿಕಾರದಲ್ಲಿದ್ದಾಗ ತಂದ ಜನಪರ ಯೋಜನೆಯಿಂದಾಗಿ ಜನ ಆಶೀರ್ವದಿಸಿದ್ದಾರೆ. ಮಾತ್ರವಲ್ಲ ಪಕ್ಷದ ಸಂಘಟನೆ, ಕಾರ್ಯಕರ್ತರ ಸಮೂಹದ ಪ್ರಯತ್ನದ ಫಲ ಅದ್ಭುತವಾಗಿ ದೊರಕಿದೆ ಎಂದು ಹೇಳಿದರು.
ಕಾಗೋಡು ಚಿತಾವಣೆ: ಸ್ಪೀಕರ್ ಕಾಗೋಡು ತಿಮ್ಮಪ್ಪ ಚಿತಾವಣೆಯಿಂದಾಗಿ ಜಿಲ್ಲೆಯಲ್ಲಿ ಕಾಂಗ್ರೆಸ್ ದಯನೀಯ ಸ್ಥಿತಿ ತಲುಪಿದೆ ಎಂದು ಆರೋಪಿಸಿದ ಅವರು, ಚುನಾವಣೆಯಲ್ಲಿ ಪರೋಕ್ಷವಾಗಿ ಜೆಡಿಎಸ್ ಬೆಂಬಲಿಸಿದ ಅವರು ಮಂಜುನಾಥ ಭಂಡಾರಿಗೆ ಟಿಕೆಟ್ ಕೊಡಿಸಿದ್ದರು. ಅಲ್ಲದೆ ಮಂತ್ರಿ ಸ್ಥಾನದ ಮೇಲೆ ಕಣ್ಣಿಟ್ಟಿರುವ ಕಾಗೋಡು ಕಾಂಗ್ರೆಸ್ ನೆಲಕಚ್ಚುವಂತೆ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ.
ಸಾಗರ ಕ್ಷೇತ್ರದಲ್ಲಿ ಬಿಜೆಪಿ ಪರವಾಗಿ ಮತ ಚಲಾಯಿಸಿದ ಪಕ್ಷದ ಕಾರ್ಯಕರ್ತರು, ತಮ್ಮ ಅಭಿಮಾನಿಗಳು ಮತ್ತು ಮತದಾರರಿಗೆ ಬೇಳೂರು ಕೃತಜ್ಞತೆ ಸಲ್ಲಿಸಿದರು.
ಮತದಾರರಿಗೆ ಕೃತಜ್ಞತೆ: ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಯನ್ನು ಬೆಂಬಲಿಸಿದ ಮತದಾರರು, ಪಕ್ಷದ ಕಾರ್ಯಕರ್ತರಿಗೆ ತಾಲೂಕು ಬಿಜೆಪಿ ಅಧ್ಯಕ್ಷ ಕೆ.ವಿ. ಕೃಷ್ಣಮೂರ್ತಿ ಕೃತಜ್ಞತೆ ಸಲ್ಲಿಸಿದ್ದಾರೆ.
ಉತ್ತಮ ಆಡಳಿತದ ನಿರೀಕ್ಷೆಯಿಂದ ಬಿಜೆಪಿಯನ್ನು ಬೆಂಬಲಿಸಿದ್ದು ಅದಕ್ಕೆ ಪೂರಕವಾಗಿ ಪಕ್ಷ ಸ್ಪಂದಿಸಲಿದೆ ಎಂದು ವಿಶ್ವಾಸ ವ್ಯಕ್ತ ಪಡಿಸಿದರು.
ಬಿಜೆಪಿ ಬೈಕ್ ರ್ಯಾಲಿ
ಸೊರಬ: ಶಿವಮೊಗ್ಗ ಲೋಕಸಭಾ ಬಿಜೆಪಿ ಅಭ್ಯರ್ಥಿ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಗೆಲವು ಸಾಧಿಸುತ್ತಿದ್ದಂತೆಯೇ ಪಟ್ಟಣದಲ್ಲಿ ತಾಲೂಕು ಬಿಜೆಪಿ ಕಾರ್ಯಕರ್ತರು ಪಟಾಕಿ ಸಿಡಿಸಿ ಸಂಭ್ರಮಿಸಿದರು. ನಂತರ ಬೈಕ್ ರ್ಯಾಲಿ ನಡೆಸುವ ಮೂಲಕ ವಿಜಯೋತ್ಸವ ಆಚರಿಸಿದರು. ಬಿಜೆಪಿ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ಹಾಗೂ ಬಿ.ಎಸ್. ಯಡಿಯೂರಪ್ಪ ಪರ ಘೋಷಣೆಗಳನ್ನು ಕೂಗಿದರು.
ಯುವ ಮುಖಂಡ ಸಂಜೀವಾಚಾರ್ ಮಾತನಾಡಿ, ಮುಖ್ಯಮಂತ್ರಿಯಾಗಿ ಹಲವಾರು ಜನಪರ ಯೋಜನೆಗಳನ್ನು ರೂಪಿಸಿ, ಎಲ್ಲಾ ವರ್ಗಗಳ ಅಭಿವೃದ್ಧಿಗೆ ನೆರವಾದ ಪರಿಣಾಮ ಹಾಗೂ ನರೇಂದ್ರ ಮೋದಿ ಅವರನ್ನು ಭಾರತದ ಪ್ರಧಾನಿ ಮಾಡಲೇಬೇಕೆಂಬ ಉದ್ದೇಶದಿಂದ ಇಂದು ಯಡಿಯೂರಪ್ಪನವರು 3.45 ಲಕ್ಷಕ್ಕೂ ಅಧಿಕ ಮತಗಳ ಅಂತರದಿಂದ ಗೆಲವು ಸಾಧಿಸಲು ಸಾಧ್ಯವಾಗಿದೆ. ಅಭಿವೃದ್ಧಿ ರಾಜಕಾರಣಕ್ಕೆ ಜಿಲ್ಲೆಯ ಜನತೆ ಮನ್ನಣೆ ನೀಡಿದ್ದಾರೆ ಎಂದ ಅವರು, ಬಿಜೆಪಿ ಘೋಷಿತ ಪ್ರಧಾನಿ ಮೋದಿ ಅವರ ಸಚಿವ ಸಂಪುಟದಲ್ಲಿ ಬಿ.ಎಸ್.ವೈ. ಅವರಿಗೆ ರೈತರಿಗೆ ನೆರವಾಗುವಂತಹ ಖಾತೆಯನ್ನು ನೀಡಬೇಕು ಎಂದು ಒತ್ತಾಯಿಸಿದರು.
ಸಂಭ್ರಮಾಚರಣೆಯಲ್ಲಿ ಪಟ್ಟಣ ಪಂಚಾಯಿತಿ ಸದಸ್ಯ ಮಹೇಶ್ ಗೌಳಿ, ಮುಖಂಡರಾದ ವಿಜಯ ಗೌಳಿ, ಕೆ.ಆರ್. ರೇವಣಕುಮಾರ್, ಶ್ರೀಧರ ಭಂಡಾರಿ, ನೆಮ್ಮದಿ ಸುಬ್ಬು, ಪಾಣಿ ಷಣ್ಮುಖಪ್ಪ, ವಿಎಚ್‌ಪಿ ತಾಲೂಕು ಅಧ್ಯಕ್ಷ ಶಿವಮೂರ್ತಿ ಮುಂತಾದವರು ಇದ್ದರು.