ಯಡಿಯೂರಪ್ಪ ಮೋಡಿ
ಶಿವಮೊಗ್ಗ: ಇತಿಹಾಸದ ಎರಡು ಚಕ್ರಗಳು ಸುತ್ತುತ್ತಿದ್ದವು. ಶಿವಮೊಗ್ಗ ಲೋಕಸಭಾ ಕ್ಷೇತ್ರದಲ್ಲಿ ಭರ್ಜರಿ ಗೆಲವು ಪಡೆಯುವ ಮೂಲಕ ಯಡಿಯೂರಪ್ಪ ಅವರು ಈಗ ಈ ಎರಡೂ ಚಕ್ರಗಳ ಮೇಲೆ ಕುಳಿತಿದ್ದಾರೆ.
ಮೊದಲ ಚಕ್ರ ಒಂದು ವರ್ಷದ ಹಿಂದೆ ಆರಂಭವಾಗಿತ್ತು. ಅಂದು ನಡೆದಿದ್ದ ವಿಧಾನಸಭೆ ಚುನಾವಣೆ ಸಂದರ್ಭದಲ್ಲಿ ಕೆಜೆಪಿ ಕಟ್ಟಿ ಬಿಜೆಪಿ ಸೋಲಿಗೆ ಕಾರಣರಾಗಿದ್ದ ಯಡಿಯೂರಪ್ಪ ಅವರು ಈಗ ಬಿಜೆಪಿಗೆ ವಾಪಸಾಗಿ ಮತ್ತೆ ಪಕ್ಷವನ್ನು ಗೆಲ್ಲಿಸಿದ್ದಾರೆ. ತಾವೂ ಗೆದ್ದಿದ್ದಾರೆ.
ಇನ್ನೊಂದು ಚಕ್ರ 1991ರಿಂದ ಸುತ್ತುತ್ತಿತ್ತು. ಅಂದೂ ಸಹ ಯಡಿಯೂರಪ್ಪ ಅವರು ಸಂಸತ್ ಚುನಾವಣೆಯಲ್ಲಿ ಅದೃಷ್ಟ ಪರೀಕ್ಷೆ ಮಾಡಿಕೊಂಡಿದ್ದರು. ಆದರೆ ರಾಜೀವ್ ಗಾಂಧಿ ಅವರ ಹತ್ಯೆ ನಂತರ ಎದ್ದ ಅನುಕಂಪದ ಅಲೆಯಲ್ಲಿ ಕೊಚ್ಚಿ ಹೋಗಿದ್ದರು. ಆ ನೆನಪು ಮಾಸುವಂತೆ ಈಗ ಮೋದಿ ಅಲೆ ಮಾತ್ರವಲ್ಲದೇ ವೈಯಕ್ತಿಕ ವರ್ಚಸ್ಸಿನಿಂದಲೂ ಸಹ ಭರ್ಜರಿ ಗೆಲವು ಸಾಧಿಸಿದ್ದಾರೆ.
ಶಿವಮೊಗ್ಗ ಲೋಕಸಭಾ ಕ್ಷೇತ್ರದಲ್ಲಿ ನಾಲ್ವರು ಕಾಂಗ್ರೆಸ್, ಮೂವರು ಜೆಡಿಎಸ್ ಶಾಸಕರಿದ್ದಾರೆ. ಬಿಜೆಪಿ ಲೆಕ್ಕದಲ್ಲಿದ್ದಿದ್ದು ಕೆಜೆಪಿಯಿಂದ ಗೆದ್ದಿದ್ದ ಯಡಿಯೂರಪ್ಪ ಅವರು ಮಾತ್ರ. ಈ ಎಲ್ಲ ಅಡೆತಡೆಗಳ ನಡುವೆಯೂ ಸಹ ಲೋಕಸಭೆ ಚುನಾವಣೆಯಲ್ಲಿ ಜಯದ ನಗೆ ಬೀರಿದ್ದಾರೆ.
ಅಚ್ಚರಿಯ ಅಂತರ: ಯಡಿಯೂರಪ್ಪ ಗೆಲ್ಲುತ್ತಾರೆಂಬ ನಿರೀಕ್ಷೆ ಇದ್ದರೂ ಸಹ 3,62,808 ಮತಗಳ ಅಂತರದಿಂದ ಗೆಲವು ಸಾಧ್ಯವಾಗುತ್ತದೆ ಎಂದು ಬಿಜೆಪಿ ಮುಖಂಡರೇ ನಿರೀಕ್ಷಿಸಿರಲಿಲ್ಲ. ಅವರ ನಿರೀಕ್ಷೆಯ ಗರಿಷ್ಠ ಅಂತರ ಒಂದೂ ಮುಕ್ಕಾಲು ಲಕ್ಷ. ಹಾಗಾಗಿ ಸ್ವತಃ ಪಕ್ಷದ ಮುಖಂಡರೇ ಅಚ್ಚರಿಗೊಳಗಾಗಿದ್ದಾರೆ. ಭದ್ರಾವತಿಯಲ್ಲಿ ಸುಮಾರು 15 ಸಾವಿರ ಲೀಡ್ ಬಿಟ್ಟರೆ ಉಳಿದೆಲ್ಲಾ ಕ್ಷೇತ್ರದಲ್ಲಿ 30 ಸಾವಿರಕ್ಕೂ ಹೆಚ್ಚು ಅಂತರವಿದೆ. ಶಿವಮೊಗ್ಗ ನಗರ, ಶಿಕಾರಿಪುರ ಹಾಗೂ ಬೈಂದೂರು ಕ್ಷೇತ್ರಗಳಲ್ಲಿ ಸರಿಸುಮಾರು 50 ಸಾವಿರ ಲೀಡ್ ಸಿಕ್ಕಿದೆ.
ಜಾತಿ ಮೀರಿದ ಗೆಲವು: ಚುನಾವಣೆಗೆ ಮುಂಚೆ ಎಲ್ಲಾ ರೀತಿಯ ಜಾತಿ ಲೆಕ್ಕಾಚಾರಗಳು ನಡೆದಿದ್ದವು. ಫಲಿತಾಂಶ ಅವೆಲ್ಲವನ್ನೂ ಮೀರಿದೆ. ಜೆಡಿಎಸ್ ಅಭ್ಯರ್ಥಿ ಗೀತಾ ಶಿವರಾಜಕುಮಾರ್ ಅವರಿಗೆ ಈಡಿಗರು, ಕಾಂಗ್ರೆಸ್ ಅಭ್ಯರ್ಥಿಗೆ ಮುಸ್ಲಿಮರು ಬೆಂಬಲಿಸಿದ್ದಾರೆ ಎಂಬ ವಿಶ್ಲೇಷಣೆಯನ್ನೂ ಸಹ ಈಗ ನಂಬುವುದು ಕಷ್ಟವಾಗಿದೆ.
ಕಾಂಗ್ರೆಸ್ಸಿಗೇನೂ ಲಾಭವಿಲ್ಲ: ಇನ್ನೊಂದೆಡೆ ಜೆಡಿಎಸ್ ಅಭ್ಯರ್ಥಿ ಗೀತಾ ಶಿವರಾಜಕುಮಾರ್ ಅವರು ಬಂಗಾರಪ್ಪ ಅವರ ಪುತ್ರಿ, ರಾಜ್‌ಕುಮಾರ್ ಸೊಸೆ ಎಂಬ ಟ್ರಂಪ್ ಕಾರ್ಡ್ ವಿಫಲವಾಗಿದೆ. ರಾಜ್‌ಕುಮಾರ್ ಕುಟುಂಬದ ಯಾರೊಬ್ಬರೂ ಸಹ ತೋರುಗಾಣಿಕೆಗಾದರೂ ಬೆಂಬಲಕ್ಕೆ ಬಾರದಿದ್ದುದು ಮತದಾರರಲ್ಲಿ ಬೇರೊಂದು ಸಂದೇಶವನ್ನೇ ನೀಡಿದೆ.
ಕಾಂಗ್ರೆಸ್‌ನಲ್ಲಿ ಟಿಕೆಟ್ ಸಿಗದೆ ಮುನಿಸಿಕೊಂಡಿದ್ದ ಕುಮಾರ್ ಬಂಗಾರಪ್ಪ, ಜೆಡಿಎಸ್ ಸೋಲಿಸಬೇಕೆಂಬ ಏಕೈಕ ಗುರಿ ಸಾಧಿಸಿಕೊಂಡಿದ್ದಾರೆ. ಇದರಿಂದ ಕಾಂಗ್ರೆಸ್ ಪಕ್ಷಕ್ಕೇನೂ ಉಪಯೋಗವಾಗಲಿಲ್ಲ.
ಸುಳಿಯದ ಗೀತಾ
ಜೆಡಿಎಸ್ ಅಭ್ಯರ್ಥಿ ಗೀತಾ ಶಿವರಾಜಕುಮಾರ್ ಅವರು ಶುಕ್ರವಾರ ನಸುಕಿನಲ್ಲಿಯೇ ಬೆಂಗಳೂರಿನಿಂದ ಹೊರಟು ಶಿವಮೊಗ್ಗಕ್ಕೆ ಸುಮಾರು 8 ಗಂಟೆಗೆ ಬಂದರು. ಆದರೆ ಅವರು ಮತ ಎಣಿಕೆ ಕೇಂದ್ರದತ್ತ ತಲೆ ಹಾಕಲಿಲ್ಲ. ಪಕ್ಷದ ಮುಖಂಡರು, ಏಜೆಂಟರು ಅತ್ತಿತ್ತ ಓಡಾಡುತ್ತಿದ್ದರು. ಕೊನೆಗೆ ಗೊತ್ತಾಗಿದ್ದೇನೆಂದರೆ- ಯಾವಾಗ ಯಡಿಯೂರಪ್ಪ ಭರ್ಜರಿ ಗೆಲವಿನತ್ತ ಸಾಗುತ್ತಿದ್ದಾರೆ ಎಂದು ಗೊತ್ತಾಯಿತೋ 10 ಗಂಟೆ ವೇಳೆಗೆ ಅವರು ಬೆಂಗಳೂರಿನತ್ತ ಪಯಣ ಬೆಳೆಸಿದ್ದರು.
ಇದು ರಾಜ್ಯ ಸರ್ಕಾರದ ವಿರುದ್ಧ ಜನರು ನೀಡಿದ ಫಲಿತಾಂಶ. ಮೋದಿ ಅಲೆ ಇಲ್ಲ ಎಂದು ಹೇಳುತ್ತಿದ್ದವರಿಗೆ ಮತದಾರರು ತಕ್ಕ ಉತ್ತರ ನೀಡಿದ್ದಾರೆ. ಅಲೆ ಇಲ್ಲ ಅಂದವರೀಗ ದೇಶದ ಕ್ಷಮೆ ಕೇಳಬೇಕು. ಸಿದ್ದರಾಮಯ್ಯ ಅವರು ಗೆದ್ದ ಮೇಲೆ ಹೈಕಮಾಂಡ್ ಹೇಳಿದಂತೆ ಕೇಳುತ್ತಾ, ಗುಂಪುಗಾರಿಕೆ ಮಾಡುತ್ತಾ ಅಭಿವೃದ್ಧಿ ಮರೆತರು. ಸಿಎಂ ಆಗುವ ಆಸೆ ಈಡೇರಿಸಿಕೊಂಡ ಸಿದ್ದರಾಮಯ್ಯ ಅವರ ಕಾಲಬುಡದಲ್ಲಿಯೇ ಪ್ರತಾಪ್ ಸಿಂಹ ಗೆದ್ದಿದ್ದಾರೆ. ಇನ್ನಾದರೂ ದುರಹಂಕಾರ ಬಿಡಲಿ.
ಟಿ ಕೆ.ಎಸ್.ಈಶ್ವರಪ್ಪ, ಮಾಜಿ ಡಿಸಿಎಂ
ಸೋಲಿಗೆ ತಲೆಕೆಡಿಸಿಕೊಳ್ಳುವುದಿಲ್ಲ. ಚುನಾವಣೆ ಹಲವು ಮಹತ್ವದ ಪಾಠಕಲಿಸಿದೆ. ಹೊಸ ರೀತಿಯ ಅನುಭವ ನೀಡಿದೆ. ಕಾರ್ಯಕರ್ತರು ನಿರಾಶರಾಗುವ ಅಗತ್ಯವಿಲ್ಲ. ತಪ್ಪುಗಳನ್ನು ತಿದ್ದಿಕೊಂಡು ಮುನ್ನಡೆಯೋಣ.
ಟಿ ಮಂಜುನಾಥ ಭಂಡಾರಿ,
ಪರಾಜಿತ ಕಾಂಗ್ರೆಸ್ ಅಭ್ಯರ್ಥಿ
ಈ ಫಲಿತಾಂಶ ರಾಜ್ಯ ಸರ್ಕಾರದ ಆಡಳಿತಕ್ಕೆ ನೀಡಿದ ಜನಾದೇಶ ಅಲ್ಲ. ಲೋಕಸಭೆ ಚುನಾವಣೆಯ ವಿಷಯಗಳೇ ಬೇರೆ. ಆದರೆ ಈ ಮಟ್ಟದ ಫಲಿತಾಂಶ ನಿರೀಕ್ಷಿಸಿರಲಿಲ್ಲ. ಈ ಫಲಿತಾಂಶ ರಾಜ್ಯ ಸರ್ಕಾರದ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ.
ಟಿ ಕಿಮ್ಮನೆ ರತ್ನಾಕರ್, ಶಿಕ್ಷಣ ಸಚಿವ
ಹೊನ್ನಾಳಿ ಚಂದ್ರಶೇಖರ್