ಜಿ.ಪಂ. ಸದಸ್ಯ ರತ್ನಾಕರ ರಾಜಿನಾಮೆ ನೀಡುವಂತೆ ಆಗ್ರಹ
ತ್ಯಾಗರ್ತಿ: ಲೋಕಸಭಾ ಚುನಾವಣೆಯಲ್ಲಿ ಆನಂದಪುರಂ ಹೋಬಳಿಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಮಂಜುನಾಥ ಭಂಡಾರಿ ಅವರಿಗೆ ಕಡಿಮೆ ಮತ ಬರಲು ಈ ಕ್ಷೇತ್ರದ ಜಿ.ಪಂ. ಸದಸ್ಯ ಹೊನಗೋಡು ರತ್ನಾಕರ ಅವರ ಕುತಂತ್ರವೇ ಕಾರಣವಾಗಿದ್ದು, ಈ ಹಿನ್ನೆಲೆಯಲ್ಲಿ ಜಿ.ಪಂ. ಸದಸ್ಯ ಸ್ಥಾನಕ್ಕೆ ಅವರು ರಾಜೀನಾಮೆ ನೀಡಬೇಕು ಎಂದು ಆಚಾಪುರ ಗ್ರಾ.ಪಂ. ಮಾಜಿ ಅಧ್ಯಕ್ಷ ಪ್ರಕಾಶ ತಂಗಳವಾಡಿ ಆಗ್ರಹಿಸಿದ್ದಾರೆ. ರತ್ನಾಕರ ಅವರು ಅಭ್ಯರ್ಥಿ ಮಂಜುನಾಥ ಭಂಡಾರಿ ಅವರ ಗೆಲುವಿಗೆ ಶ್ರಮಿಸದೆ ಒಳರಾಜಕೀಯ ನಡೆಸಿ ಜೆಡಿಎಸ್ ಅಭ್ಯರ್ಥಿ ಗೀತಾ ಶಿವರಾಜ್ಕುಮಾರ್ ಪರ ಪ್ರಚಾರ ನಡೆಸಿದ್ದರು ಎಂದು ಆರೋಪಿಸಿದರು. ವಿಧಾನಸಭಾಧ್ಯಕ್ಷ ಕಾಗೋಡು ಅವರ ಜೊತೆ ನಿಕಟ ಸಂಪರ್ಕ ಮತ್ತು ವಿಶ್ವಾಸ ಗಳಿಸಿರುವ ರತ್ನಾಕರ ಅವರು ಈ ಚುನಾವಣೆಯಲ್ಲಿ ಕಾಗೋಡು ಅವರಿಗೆ ಮೋಸ ಮಾಡಿದಂತಾಗಿದೆ. ಜಿ.ಪಂ. ಸದಸ್ಯ ಸ್ಥಾನ ಮತ್ತು ಕಾಂಗ್ರೆಸ್ ಪಕ್ಷಕ್ಕೆ ರಾಜೀನಾಮೆ ನೀಡಬೇಕು ಎಂದು ಒತ್ತಾಯಿಸಿದ್ದಾರೆ.
ಮತದಾರರಿಗೆ ಜಿಲ್ಲಾ ಬಿಜೆಪಿ ಕೃತಜ್ಞತೆ
ಶಿವಮೊಗ್ಗ: 2014ರ ಲೋಕಸಭಾ ಚುನಾವಣೆಯಲ್ಲಿ ಶಿವಮೊಗ್ಗ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಬಿ.ಎಸ್. ಯಡಿಯೂರಪ್ಪ ಅವರ ಅಭೂತಪೂರ್ವ ಗೆಲುವಿಗೆ ಕಾರಣರಾದ ಮತದಾರರಿಗೆ, ಪಕ್ಷದ ಕಾರ್ಯಕರ್ತರಿಗೆ, ಅಭಿಮಾನಿಗಳಿಗೆ ಕೃತಜ್ಞತೆ ಸಲ್ಲಿಸುವುದಾಗಿ ಜಿಲ್ಲಾ ಬಿಜೆಪಿ ಹೇಳಿದೆ. ಚುನಾವಣೆಯನ್ನು ಸುಗಮವಾಗಿ ನಡೆಸಿದ ಜಿಲ್ಲಾಡಳಿತಕ್ಕೆ, ವಿಶೇಷವಾಗಿ ರಕ್ಷಣಾ ಇಲಾಖೆಯ ಅಧಿಕಾರಿಗಳಿಗೆ ಮತ್ತು ಸಿಬ್ಬಂದಿ ವರ್ಗದವರನ್ನು ಅಭಿನಂದಿಸುವುದಾಗಿ ತಿಳಿಸಿರುವ ಬಿಜೆಪಿ, ಪ್ರತ್ಯಕ್ಷವಾಗಿ-ಪರೋಕ್ಷವಾಗಿ ಬಿಜೆಪಿಯ ಗೆಲುವಿಗೆ ಸಹಕರಿಸಿದ ಪ್ರತಿಯೊಬ್ಬ ವ್ಯಕ್ತಿಗೂ ಶಿವಮೊಗ್ಗ ಲೋಕಸಭಾ ಸದಸ್ಯ ಬಿ.ಎಸ್. ಯಡಿಯೂರಪ್ಪ, ಲೋಕಸಭಾ ಕ್ಷೇತ್ರದ ಪ್ರಮುಖರು, ವಿಧಾನಪರಿಷತ್ ಸದಸ್ಯ ಎಂ.ಬಿ.ಭಾನುಪ್ರಕಾಶ್, ಸಹ ಪ್ರಮುಖರಾದ ಆಯನೂರು ಮಂಜುನಾಥ, ಬಿ.ವೈ. ರಾಘವೇಂದ್ರ, ಆರಗ ಜ್ಞಾನೇಂದ್ರ, ವಿಧಾನ ಪರಿಷತ್ ಸದಸ್ಯರು, ಮಾಜಿ ಶಾಸಕರು ಹಾಗೂ ಜಿಲ್ಲಾ ಬಿಜೆಪಿ ಎಲ್ಲಾ ಸ್ತರದ ಪದಾಧಿಕಾರಿಗಳು ಅತ್ಯಂತ ವಿನೀತಭಾವದಿಂದ ಕೃತಜ್ಞತೆಗಳನ್ನು ಸಲ್ಲಿಸಿದ್ದಾರೆ ಬಿಜೆಪಿ ಮಾಧ್ಯಮ ಪ್ರಮುಖ್ ಮಧುಸೂಧನ್ ತಿಳಿಸಿದ್ದಾರೆ.
ಜನಸಂಪರ್ಕ ಸಭೆ
ಶಿವಮೊಗ್ಗ: ಶಿವಮೊಗ್ಗ ತಾಲೂಕು ಹೊಳಲೂರು ಗ್ರಾಮದಲ್ಲಿರುವ ಮಂಗಳೂರು ವಿದ್ಯುತ್ ಸರಬರಾಜು ನಿಯಮಿತ, ಹೊಳಲೂರು ಶಾಖಾ ಕಚೇರಿಯಲ್ಲಿ ಮೇ 22 ರಂದು ಜನಸಂಪರ್ಕ ಸಭೆ ಏರ್ಪಡಿಸಲಾಗಿದೆ. ಈ ಶಾಖಾ ವ್ಯಾಪ್ತಿಯ ಗ್ರಾಹಕರು ತಮ್ಮ ಕುಂದುಕೊರತೆ, ಅಹವಾಲುಗಳನ್ನು ಲಿಖಿತವಾಗಿ ಅಥವಾ ಖುದ್ದಾಗಿ ಸಲ್ಲಿಸಬಹುದಾಗಿದೆ
ಮಲೆನಾಡಿನ ಸಮಸ್ಯೆ ಪರಿಹಾರಕ್ಕೆ ಪ್ರಯತ್ನ: ಶೋಭಾ
ಶೃಂಗೇರಿ: ಜಿಲ್ಲೆಯ ಭಾಗದ ಪ್ರಮುಖ ಸಮಸ್ಯೆಗಳಾದ ಅಡಕೆ, ಅಕ್ರಮ- ಸಕ್ರಮ, ಒತ್ತುವರಿ ಸೇರಿದಂತೆ ಇತರೆ ಸಮಸ್ಯೆಗಳನ್ನು ಬಗೆಹರಿಸಲು ಪ್ರಾಮಾಣಿಕ ಪ್ರಯತ್ನ ಮಾಡುವುದಾಗಿ ಉಡುಪಿ- ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ನೂತನ ಸದಸ್ಯೆ ಶೋಭಾ ಕರಂದ್ಲಾಜೆ ತಿಳಿಸಿದರು.
ಪಟ್ಟಣದಲ್ಲಿ ನಡೆದ ವಿಜಯೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿ, ಜನರು ತಮ್ಮ ಮೇಲೆ ಇಟ್ಟಿರುವ ವಿಶ್ವಾಕ್ಕೆ ತಕ್ಕಂತೆ ಸ್ಪಂದಿಸುತ್ತೇನೆ. ಕ್ಷೇತ್ರದ ಸಮಸ್ಯೆಗಳ ಬಗ್ಗೆ ಸಂಸತ್ತಿನಲ್ಲಿ ಗಮನ ಸೆಳೆಯುತ್ತೇನೆ ಎಂದರು.
ಜನರು ನಿರೀಕ್ಷೆಗೂ ಮೀರಿ ಅಭೂತಪೂರ್ವ ಗೆಲವು ನೀಡಿದ್ದಾರೆ. ಇದು ನರೇಂದ್ರ ಮೋದಿ, ಜನರ, ಪಕ್ಷದ, ಕಾರ್ಯಕರ್ತರ ಗೆಲುವಾಗಿದೆ. ಮೋದಿ ಅವರನ್ನು ಪ್ರಧಾನಿ ಮಾಡಲು ಬಿಜೆಪಿಗೆ ಬೆಂಬಲ ನೀಡಿದ್ದಾರೆ. ಎನ್ಡಿಎಗೆ ಗೆಲವು ನಿರಿಕ್ಷಿಸಲಾಗಿತ್ತು. ಆದರೆ, 35 ವರ್ಷಗಳಲ್ಲಿ ಕಾಂಗ್ರೇಸ್ಸೇತರ ಪಕ್ಷಕ್ಕೆ ಇಷ್ಟೊಂದು ಬಹುಮತ ನೀಡಿರುವುದು ಐತಿಹಾಸಿಕ ದಾಖಲೆಯಾಗಿದೆ ಎಂದರು.
ಶಾಸಕ ಡಿ.ಎನ್. ಜೀವರಾಜ್, ತಾಲೂಕು ಬಿಜೆಪಿ ಘಟಕದ ಅಧ್ಯಕ್ಷ ಎಚ್.ಎಸ್. ನಟೇಶ್, ಮಹಿಳಾ ಮೋರ್ಚಾ ಅಧ್ಯಕ್ಷೆ ಅಮಿತಾ ಸತ್ಯನಾರಾಯಣ್ ಸೇರಿದಂತೆ ಪಕ್ಷದ ಮುಖಂಡರು, ಕಾರ್ಯಕರ್ತರು ಇದ್ದರು.