ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಶಿವಮೊಗ್ಗ

ಬಹುಸಂಸ್ಕೃತಿ ನಾಶವಾಗುವ ಆತಂಕ

Lingaraj Badiger
Updated On : 19 May 2014, 10:36 am

ಕ.ಪ್ರ.ವಾರ್ತೆ  ಶಿವಮೊಗ್ಗ  ಮೇ 18
ಇಂದು ಸ್ಥಾಪಿತ ಹಿತಾಸಕ್ತಿಗಳು ಆರ್ಥಿಕ, ಸಾಮಾಜಿಕವಾಗಿ ಬಲಿಷ್ಠಗೊಂಡು ಏಕಮುಖ ಸಂಸ್ಕೃತಿಯನ್ನು ಬಿತ್ತಲು ಯತ್ನ ನಡೆಸುತ್ತಿವೆ. ನಮ್ಮಲ್ಲಿನ ಬಹುಸಂಸ್ಕೃತಿ ನಾಶವಾಗುವ ಆತಂಕ ಎದುರಾಗುತ್ತಿದೆ. ದಲಿತರನ್ನು ತುಳಿತಕ್ಕೊಳಪಡಿಸಿದ ಧರ್ಮವನ್ನೇ ನಾವಿಂದು ಹೆಗಲ ಮೇಲೆ ಹೊತ್ತು ಮೆರೆಸುವಂಥ ಸ್ಥಿತಿ ಬಂದಿದೆ ಎಂದು ಕುವೆಂಪು ವಿಶ್ವವಿದ್ಯಾಲಯದ ಕುಲಸಚಿವೆ ಮಲ್ಲಿಕಾ ಎಸ್.ಘಂಟಿ ಹೇಳಿದರು.
ಕುವೆಂಪು ವಿಶ್ವವಿದ್ಯಾಲಯದ ಅಂಬೇಡ್ಕರ್ ಹಾಗೂ ಬೌದ್ಧ ಅಧ್ಯಯನ ಕೇಂದ್ರದ ವಿಸ್ತರಣಾ ಕಾರ್ಯಕ್ರಮದಡಿ ಬುದ್ಧ ಪೂರ್ಣಿಮೆ ಅಂಗವಾಗಿ ಬುದ್ದ ಧಮ್ಮಾಂಕುರ ಟ್ರಸ್ಟ್, ಜಿಲ್ಲಾ ಬೌದ್ಧ ಮಹಾಸಭಾ ಆಶ್ರಯದಲ್ಲಿ ಭಾನುವಾರ ಏರ್ಪಡಿಸಿದ್ದ ವಿಚಾರ ಸಂಕಿರಣ ಉದ್ಘಾಟಿಸಿ ಮಾತನಾಡಿದರು.
ಇನ್ನಷ್ಟು ಬಲಿಷ್ಠ:  ಹಿಂದೂ ಧರ್ಮಕ್ಕೆ ಇಸ್ಲಾಂ ಹಾಗೂ ಕ್ರೈಸ್ತ ಧರ್ಮಗಳು ಕಾಡುತ್ತಿವೆ. ಆದರೆ ಬೌದ್ಧ, ಜೈನ ಹಾಗೂ ಇತರೆ ಧರ್ಮಗಳು ಹಿಂದೂ ಧರ್ಮವನ್ನು ಕಾಡುತ್ತಿಲ್ಲ. ಇವು ಜನರ ಮನಸ್ಸು ಹಾಗೂ ಮನೆಯಲ್ಲಿ ಅಂತರ್ಮುಖಿಯಾಗಿವೆ. ಸರಳವಾದ ಬೌದ್ಧ ಧರ್ಮದ ತತ್ವಗಳನ್ನು ಮನಸ್ಸು ಹಾಗೂ ಮನೆಯಲ್ಲಿ ಇಟ್ಟುಕೊಂಡು ಆರಾಧಿಸಿದ್ದರೆ ಈ ವೇಳೆಗೆ ಭಾರತದ ರಾಜಕೀಯ, ಧಾರ್ಮಿಕ, ಆರ್ಥಿಕ ಸ್ಥಿತಿ ಕೂಡ ಇನ್ನಷ್ಟು ಬಲಿಷ್ಠವಾಗುತ್ತಿತ್ತು ಎಂದು ಅಭಿಪ್ರಾಯಪಟ್ಟರು.
ಬೌದ್ಧ ಧರ್ಮದ ಸರಳವಾದ ವಿಚಾರಗಳನ್ನು ಜನರಿಗೆ ತಿಳಿಸುವಲ್ಲಿ ವಿಫಲ ಆಗಿರುವುದರಿಂದ ಇಂದು ಬೌದ್ಧ ಧರ್ಮದ ಅನುಯಾಯಿಗಳು ಹೆಚ್ಚಿನ ಸಂಖ್ಯೆಯಲ್ಲಿ ಕಾಣಲು ಸಾಧ್ಯವಿಲ್ಲ ಎಂದು ಹೇಳಿದರು.
ವಿಷಾದ:  ಮಹಿಳೆಯರು ಹಾಗೂ ದಲಿತರ ದಾಸ್ಯ ಮುಕ್ತಿಯನ್ನು ಗುರಿಯಾಗಿಟ್ಟುಕೊಂಡು ಹುಟ್ಟಿದ್ದು ಬೌದ್ಧ ಧರ್ಮ. ಆದರೆ, ಈ ಧರ್ಮವನ್ನು ಅನುಸರಿಸಲು ಹಿಂದೇಟು ಹಾಕಲಾಗುತ್ತಿದೆ. ಅಂಬೇಡ್ಕರ್ ಬೌದ್ಧ ಧರ್ಮವನ್ನು ಅನುಸರಿಸುವ ಮೂಲಕ ಸಮಾಜವನ್ನು ತಿದ್ದಲು ಪ್ರಯತ್ನಿಸಿದರು. ಹಿಂಸೆಯನ್ನು ದೂರವಿಡಬೇಕೆಂದು ಬುದ್ಧ, ಅಂಬೇಡ್ಕರ್ ಹೇಳಿದರೂ ಕೂಡ ಇಂದು ಮಾರಿ ಹಬ್ಬದಲ್ಲಿ ಪ್ರಾಣಿವಧಿಸುವ ಆಚರಣೆ ಮಾಡುವ ಮೂಲಕ ಹಿಂಸೆಯನ್ನು ಜೀವಂತವಾಗಿಟ್ಟಿದ್ದೇವೆ ಎಂದು ವಿಷಾದಿಸಿದರು.
ನಾಳೆ ತಾನೆ ಜೈಲಿಗೆ ಹೋಗುತ್ತೇನೆ ಎಂಬುದು ಗೊತ್ತಿಲ್ಲದ ವ್ಯಕ್ತಿ ಇಂದು ನಮ್ಮ ಭವಿಷ್ಯ ಹೇಳುತ್ತಾನೆ. ಆತನನ್ನು ಕುರಿತು ಧ್ಯಾನ ಮಾಡುತ್ತೇವೆ. ನೂರಾರು ಬಡವರು ಮನೆ ಕಟ್ಟಿಕೊಂಡು ವಾಸ ಮಾಡಬಹುದಾಷ್ಟು ಜಾಗದಲ್ಲಿ ಆಶ್ರಮಗಳನ್ನು ಕಟ್ಟಿಕೊಂಡು ಪ್ರವಚನ ಮಾಡಲಾಗುತ್ತಿದೆ ಎಂದು ವಿಷಾದಿಸಿದ ಅವರು ಬುದ್ಧ ಹೇಳಿದ ಅಷ್ಟಾಂಗ ಮಾರ್ಗಗಳು ಇಂದು ಅಗತ್ಯವಾಗಿ ಬೇಕಿವೆ. ಬುದ್ಧ ಕಲಿಸಿಕೊಟ್ಟ ಧ್ಯಾನಕ್ಕೂ ಇಂದಿನ ಧ್ಯಾನಕ್ಕೂ ಬಹಳ ವ್ಯತ್ಯಾಸವಿದೆ. ಬುದ್ಧ ಈ ರೀತಿಯ ಧ್ಯಾನವನ್ನು ಕಲಿಸಿಲ್ಲ. ವೈರಾಗ್ಯ ಮತ್ತು ಜ್ಞಾನೋದಯವನ್ನು ಕೇವಲ ಒಂದೆರಡು ವ್ಯಾಕ್ಯಗಳಿಗೆ ಮಾತ್ರ ಸೀಮಿತ ಮಾಡಿದ್ದೇವೆ. ಅದರಿಂದ ಆಚೆಗಿನ ಅನೇಕ ಅಂಶಗಳ ಮೂಲಕ ಬುದ್ಧನಿಗೆ ಜ್ಞಾನೋದಯವಾಗಿತ್ತು ಎಂಬ ಅಂಶಗಳನ್ನು ಜನರಿಗೆ ಅರ್ಥ ಮಾಡಿಸಬೇಕೆಂದರು.
ಸಲಹೆ:  ಬೌದ್ಧ ಧರ್ಮದಲ್ಲಿ ಹೇಳಿದ ಅನೇಕ ಅಂಶಗಳು ಜನರ ಬದುಕಿನಲ್ಲಿ ಇಲ್ಲದ ಕಾರಣದಿಂದಾಗಿ ಅದು ಜನರ ಮನಸ್ಸಿನಲ್ಲಿ ಉಳಿಯಲಿಲ್ಲ. ಜನರು ಕೂಡ ಆ ಧರ್ಮದಿಂದ ವಿಮುಖರಾಗುತ್ತಾ ಬಂದಿದ್ದಾರೆ. ಅದನ್ನು ಹೋಗಲಾಡಿಸಿ ಬೌದ್ಧ ಧರ್ಮದ ತತ್ವಗಳು ಹೆಚ್ಚು ಪ್ರಸಾರ ಮಾಡಲು ವಿಶ್ವವಿದ್ಯಾಲಯಗಳು ಮುಂದೆ ಬರಬೇಕೆಂದು ಸಲಹೆ ನೀಡಿದರು.
ಉದ್ಘಾಟನಾ ಸಮಾರಂಭದಲ್ಲಿ ಅಂಬೇಡ್ಕರ್ ಹಾಗೂ ಬೌದ್ಧ ಅಧ್ಯಯನ ಕೇಂದ್ರದ ನಿರ್ದೇಶಕ ಡಾ.ರವೀಂದ್ರ ಡಿ.ಗಡ್ಕರ್, ನಿವೃತ್ತ ಅಬಕಾರಿ ಅಧಿಕಾರಿ ಸಾವಕ್ಕನವರ್, ಬುದ್ಧ ಧಮ್ಮಾಂಕುರ ಟ್ರಸ್ಟ್‌ನ ಅಧ್ಯಕ್ಷ ಎಚ್.ರಾಚಪ್ಪ, ಜಿಲ್ಲಾ ಬೌದ್ಧ ಮಹಾಸಭಾದ ಅಧ್ಯಕ್ಷ ಎ.ಕೆ.ಚಂದ್ರಪ್ಪ ಮತ್ತಿತರರು ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement