ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಶಿವಮೊಗ್ಗ

ಸಂಘಟನೆ ಮೂಲಕ ಜನತೆಗೆ ನೆರವಾಗಿ

Lingaraj Badiger
Updated On : 19 May 2014, 10:33 am

ಸಾಗರ: ಸಂಘಟನೆಯೊಂದನ್ನು ಸ್ಥಾಪಿಸಿ ಆ ಮೂಲಕ ಸಮಾಜಮುಖಿಯಾಗಿ ಏನೆಲ್ಲಾ ಮಾಡಬಹುದು ಎನ್ನುವುದನ್ನು ಧ್ಯೇಯೋದ್ದೇಶದಡಿ ಎಳೆದು ತಂದು ನಾಲ್ಕಾರು ಜನರಿಗೆ ಉಪಯೋಗವಾಗುವಂತೆ ಸಂಘಟನೆಯನ್ನು ಬೆಳೆಸಿಕೊಂಡು ಹೋಗುವುದು ಗಮನಾರ್ಹ ಎಂದು ನಿವೃತ್ತ ಪ್ರಾಚಾರ್ಯ ಡಾ. ಜಿ.ಎಸ್. ಭಟ್ ಹೇಳಿದರು.
ಇಲ್ಲಿನ ಸರ್ಕಾರಿ ನೌಕರರ ಭವನದಲ್ಲಿ ಭಾನುವಾರ ನಿವೃತ್ತ ನೌಕರರ ಸಂಘ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿ, ಅನೇಕ ಸಂಸ್ಥೆಗಳು ಆರಂಭ ಶೂರತ್ವ ಮೆರೆಯುತ್ತದೆ. ನಂತರ ದಿನಗಳಲ್ಲಿ ವಿಮುಖವಾಗಿ ಹೇಳಹೆಸರಿಲ್ಲದಂತೆ ಮಾಯವಾಗುವುದನ್ನು ನಾವು ನೋಡುತ್ತೇವೆ. ಆದರೆ ನಿವೃತ್ತ ನೌಕರರ ಸಂಘ ಉದ್ದೇಶ ಹಾಗೂ ಶ್ರೇಷ್ಠತೆ ಎರಡನ್ನೂ ಕ್ರೋಢಿಕರಿಸಿಕೊಂಡು ಪ್ರತಿಭಾ ಪುರಸ್ಕಾರ, ನಿವೃತ್ತ ನೌಕರರಿಗೆ ಸನ್ಮಾನದಂತಹ ಅನುಕರಣೀಯ ಕೆಲಸ ಮಾಡುತ್ತಿರುವುದು ಮೆಚ್ಚುವಂಥದ್ದು ಎಂದರು.
ವೃದ್ಧಾಶ್ರಮದ ಪರಿಕಲ್ಪನೆ: ಸರ್ಕಾರಿ ನೌಕರರ ಸಂಘದ ರಾಜ್ಯ ಸಂಘಟನಾ ಕಾರ್ಯದರ್ಶಿ ಮ.ಸ.ನಂಜುಂಡಸ್ವಾಮಿ ಮಾತನಾಡಿ, ಇತ್ತೀಚಿನ ವರ್ಷಗಳಲ್ಲಿ ಹಿರಿಯರನ್ನು ಗೌರವಿಸುವ ಸಂಸ್ಕೃತಿ ದೂರವಾಗುತ್ತಿದೆ. ಹಿರಿಯರು ಹಾಗೂ ಕಿರಿಯರ ನಡುವಿನ ಸಂಬಂಧಗಳ ಕಂದಕವನ್ನು ತುಂಬುವ ಕೆಲಸವನ್ನು ಪ್ರಜ್ಞಾವಂತರು ಮಾಡಬೇಕು. ವೃದ್ಧಾಶ್ರಮದ ಪರಿಕಲ್ಪನೆ ಹೆಚ್ಚುತ್ತಿರುವ ಈ ಕಾಲಘಟ್ಟದಲ್ಲಿ ಮಕ್ಕಳಿಗೆ ಬಾಲ್ಯದಲ್ಲಿಯೆ ಪೋಷಕರು ಗುರುಹಿರಿಯರ ಬಗ್ಗೆ ಗೌರವ ತರುವ ಸನ್ನಿವೇಶ ಸೃಷ್ಟಿಸಬೇಕು ಎಂದು ಹೇಳಿದರು.
ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಎಚ್.ಆರ್.ನಾಗಭೂಷಣ್ ಮಾತನಾಡಿ, ಸಂಘದ ಮುಂದಿನ ಕಾರ್ಯಚಟುವಟಿಕೆಗಾಗಿ ವೈಯಕ್ತಿಕವಾಗಿ 10 ಸಾವಿರ ರು. ನೀಡುವ ಜೊತೆಗೆ ಸಂಘವು ಕಟ್ಟಲು ಉದ್ದೇಶಿಸಿರುವ ಕಟ್ಟಡಕ್ಕೆ ನೌಕರರ ಸಂಘದಿಂದ 25 ಸಾವಿರ ರೂ. ದೇಣಿಗೆ ನೀಡುವುದಾಗಿ ಭರವಸೆ ನೀಡಿದರು.
ಕಾರ್ಯಕ್ರಮವನ್ನು ನಿವೃತ್ತ ನೌಕರರ ಸಂಘದ ಜಿಲ್ಲಾಧ್ಯಕ್ಷ ಎಸ್.ಎಂ.ಜಯದೇವಯ್ಯ ಉದ್ಘಾಟಿಸಿದರು. ಸಂಘದ ಅಧ್ಯಕ್ಷ ಎಸ್.ಬಸವರಾಜ್ ಅಧ್ಯಕ್ಷತೆ ವಹಿಸಿದ್ದರು.
ಎಸ್.ಎಸ್.ಎಲ್.ಸಿ. ಹಾಗೂ ದ್ವಿತೀಯ ಪಿಯುಸಿಯಲ್ಲಿ ಅತಿಹೆಚ್ಚು ಅಂಕ ಗಳಿಸಿದವರಿಗೆ ಪ್ರತಿಭಾ ಪುರಸ್ಕಾರ ಹಾಗೂ ನಿವೃತ್ತ ನೌಕರರಿಗೆ ಸನ್ಮಾನಿಸಲಾಯಿತು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement