'ರೈತರ ಏಳಿಗೆಗೆ ಸಂಘಟನೆ ಅಗತ್ಯ'
ಹೊಸನಗರ: ರೈತರು ಎದುರಿಸುತ್ತಿರುವ ಅನೇಕ ಸಮಸ್ಯೆಗಳಿಗೆ ಮೂಲ ಕಾರಣ ಸಂಘಟನೆ ಕೊರತೆ. ತಮ್ಮ ಏಳಿಗೆಗಾಗಿ ಕೃಷಿಕರು ಒಗ್ಗಟ್ಟಾಗುವುದು ಅಗತ್ಯ ಎಂದು ಪ್ರಗತಿಪರ ಕೃಷಿಕ ಜಗದೀಶ ರಾವ್ ಹೇಳಿದರು.
ತಾಲೂಕಿನ ನಗರದ ಸಮೀಪ ನೂಲಿಗ್ಗೇರಿಯಲ್ಲಿ ಕೊಡಚಾದ್ರಿ ರೈತ ಶಕ್ತಿ ಕೇಂದ್ರದ ಆಶ್ರಯದಲ್ಲಿ ನಡೆದ ಕೃಷಿ ವಿಚಾರಸಂಕಿರಣದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಅವರು ಮಾತನಾಡಿದರು.
ರೈತರು ಸ್ವಸಹಾಯ ಸಂಘಗಳ ಮಾದರಿಯಲ್ಲಿ ಚಿಕ್ಕ ಚಿಕ್ಕ ಗುಂಪುಗಳನ್ನು ರಚಿಸಿಕೊಂಡರೆ ಜ್ವಲಂತ ಸಮಸ್ಯೆಗಳನ್ನು ಒಗ್ಗಟ್ಟಿನಿಂದ ಎದುರಿಸುವುದು ಸಾಧ್ಯವಾಗುತ್ತದೆ. ದುಬಾರಿ ಕೃಷಿ ಯಂತ್ರೋಪಕರಣಗಳನ್ನು ಸಂಘದ ಮೂಲಕ ಖರೀದಿಸಿ ಬಳಸಬಹುದು. ರಸಗೊಬ್ಬರ ಸೇರಿದಂತೆ ಎಲ್ಲಾ ಕೃಷಿ ಉಪಯೋಗಿ ವಸ್ತುಗಳನ್ನು ಕಡಿಮೆ ದರದಲ್ಲಿ ಕೊಳ್ಳುವುದು ಸಾಧ್ಯವಿದೆ. ಎಲ್ಲಾ ಊರುಗಳಲ್ಲೂ ಈ ಬಗ್ಗೆ ಜಾಗೃತಿ ಮೂಡಿಸಬೇಕಾದ ಅಗತ್ಯವಿದೆ ಎಂದರು.
ಅಧಿಕ ಇಳುವರಿ ಪಡೆಯಲು ಸರಿಯಾದ ಕಾಲದಲ್ಲಿ ಸರಿಯಾದ ಪ್ರಮಾಣದ ಪೋಷಕಾಂಶ ಪೂರೈಸುವುದು ಅಗತ್ಯ ಎಂದ ಅವರು, ಬೇರೆ ಉದ್ಯಮಗಳಿಗೆ ಹೋಲಿಸಿದರೆ ಕೃಷಿಯಲ್ಲಿ ಸಾಕಷ್ಟು ಆದಾಯವಿದೆ. ಆದರೆ, ಸಾಂಪ್ರದಾಯಿಕ ಚೌಕಟ್ಟಿನಿಂದ ಹೊರಬಂದು ಆಧುನಿಕ ಆವಿಷ್ಕಾರ ಅಳವಡಿಸಿಕೊಳ್ಳಬೇಕು. ಕೃಷಿಯೆಡೆಗೆ ಬದ್ಧತೆಯಿದ್ದಾಗ ಲಾಭ ಗಳಿಕೆ ಸಾಧ್ಯ ಎಂದರು.
ಅಡಕೆಯೊಂದಿಗೆ ಕಾಳುಮೆಣಸು ಬೆಳೆಯುವಾಗ ಅನುಸರಿಸಬೇಕಾದ ಕ್ರಮ ವಿವರಿಸಿದರು. ರೈತಶಕ್ತಿ ಕೇಂದ್ರದ ವಿಷ್ಣುಮೂರ್ತಿ, ಕೆಸರೆಮನೆ ಮಧು, ಬಾಳೆಕೊಪ್ಪ ಸುಬ್ರಹ್ಮಣ್ಯ, ಅರುಣಕುಮಾರ್, ಹನಿಯ ಗೋಪಾಲ ಉಡುಪ ಮತ್ತಿತರರು ಇದ್ದರು.