ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಶಿವಮೊಗ್ಗ

ಅನುದಾನಿತ ನೌಕರರಿಗೂ 'ಯಶಸ್ವಿನಿ' ವಿಸ್ತರಿಸಿ

Vishwanath S
Updated On : 22 May 2014, 11:13 am

ಕ.ಪ್ರ.ವಾರ್ತೆ ಟಿ ಶಿವಮೊಗ್ಗ ಟಿ ಮೇ 21
ರಾಜ್ಯದ ಅನುದಾನಿತ ಶಿಕ್ಷಣ ಸಂಸ್ಥೆಗಳ ನೌಕರರ ಸಂಘಗಳ ಸದಸ್ಯರಿಗೂ ಯಶಸ್ವಿನಿ ಯೋಜನೆ ವಿಸ್ತರಿಸುವಂತೆ ಆಗ್ರಹಿಸಿ ಶಿವಮೊಗ್ಗ ಜಿಲ್ಲಾ ಅನುದಾನಿತ ಶಿಕ್ಷಣ ಸಂಸ್ಥೆಗಳ ನೌಕರರ ಸಂಘದ ನಿಯೋಗ ಬುಧವಾರ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಸಹಕಾರ ಸಚಿವರಿಗೆ ಜಿಲ್ಲಾಧಿಕಾರಿಗಳ ಮೂಲಕ ಮನವಿ ಸಲ್ಲಿಸಿತು.
ಸಂಘದ ಗೌರವಾಧ್ಯಕ್ಷ ಡಾ. ಬಾಲಕೃಷ್ಣ ಹೆಗಡೆ ಹಾಗೂ ಅಧ್ಯಕ್ಷ ಡಾ. ಕೆ.ಎಚ್. ಕುಮಾರಸ್ವಾಮಿ ನೇತೃತ್ವದ ನಿಯೋಗ ಈ ಮನವಿ ಸಲ್ಲಿಸಿದ್ದು, 2014- 15ನೇ ಸಾಲಿನಿಂದ ಯಶಸ್ವಿನಿ ನಗರ ಸಹಕಾರಿಗಳ ಆರೋಗ್ಯ ರಕ್ಷಣಾ ಯೋಜನೆ ಜಾರಿಗೊಳಿಸಲು ಹಾಗೂ ಸದಸ್ಯರನ್ನು ನೋಂದಾಯಿಸಲು ಸಹಕಾರ ಇಲಾಖೆ ಫೆ. 26ರಂದು ಮಾರ್ಗಸೂಚಿ ಹೊರಡಿಸಿದ್ದು, ವಿವಿಧ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸುತ್ತಿರುವ ನೌಕರರನ್ನು ಮಹತ್ವಾಕಾಂಕ್ಷಿ ಯೋಜನೆಯಾದ ಯಶಸ್ವಿನಿ ಯೋಜನೆಯಡಿಲ್ಲಿ ತಂದಿದ್ದು, ಸದಸ್ಯತ್ವ ನೋಂದಣಿ ಪ್ರಕ್ರಿಯೆ ಆರಂಭವಾಗಿದ್ದುದು ಸ್ವಾಗತಾರ್ಹ ವಿಷಯ.
ಆದರೆ, ಇದೇ ಸಂದರ್ಭದಲ್ಲಿ ರಾಜ್ಯದ ಅನುದಾನಿತ ಶಿಕ್ಷಣ ಸಂಸ್ಥೆಗಳಲ್ಲಿ ಸೇವೆ ಸಲ್ಲಿಸುತ್ತಿರುವ ನೌಕರರನ್ನು ಯೋಜನೆಯಿಂದ ಹೊರಗಿಟ್ಟಿದ್ದು ಲಕ್ಷಾಂತರ ನೌಕರರು ಸದರಿ ಯೋಜನೆಯಿಂದ ವಂಚಿತರಾಗಿದ್ದಾರೆ. ಜಿಲ್ಲಾ ಸಹಕಾರ ಸಂಘಗಳ ಉಪನಿಬಂಧಕರ ಕಚೇರಿ ಸಂಪರ್ಕಿಸಿದಾಗಲೂ ಅನುದಾನಿತ ನೌಕರರ ಸಂಘ- ಅನುದಾನಿತ ನೌಕರರ ಸಹಕಾರ ಸಂಘಗಳು ಯಶಸ್ವಿನಿ ವ್ಯಾಪ್ತಿಗೆ ಬರುವುದಿಲ್ಲ ಎಂಬ ಉತ್ತರ ಸಂಘದ ಸದಸ್ಯರ ಅಸಮಾಧಾನಕ್ಕೆ ಕಾರಣವಾಗಿದೆ ಎಂದು ಉಲ್ಲೇಖಿಸಲಾಗಿದೆ. ಹಾಲಿ ರಾಜ್ಯದಲ್ಲಿ ಸರ್ಕಾರಿ ಶಾಲಾ- ಕಾಲೇಜುಗಳ ನೌಕರರಿಗೆ ವೈದ್ಯಕೀಯ ವೆಚ್ಚದ ಮರುಭರಣ ಸೌಲಭ್ಯವಿದೆ. ಅನುದಾನಿತ ಶಿಕ್ಷಣ ಸಂಸ್ಥೆಗಳ ನೌಕರರಿಗೆ ಇಲ್ಲವಾಗಿದೆ. ಯಶಸ್ವಿನಿ ನಗರ ಯೋಜನೆಯನ್ನು ಅನುದಾನಿತ ನೌಕರರಿಗೂ ವಿಸ್ತರಿಸುವುದು ಅವಶ್ಯಕ.
ಉತ್ತಮ ಕಾರ್ಯ: ರಾಜ್ಯದಲ್ಲಿ ಕರ್ನಾಟಕ ಸಹಕಾರ ಸಂಘಗಳ ಅಧಿನಿಯಮ 1994ರ ಅಡಿ ಅಥವಾ ಕರ್ನಾಟಕ ಸೌಹಾರ್ದ ಸಹಕಾರ ಅಧಿನಿಯಮ 1997ರ ಅಡಿ ಅಥವಾ ಬಹುರಾಜ್ಯ ಸಹಕಾರ ಸಂಘಗಳ ಅಧಿನಿಯಮ 2007ರ ಅಡಿ ನೋಂದಾಯಿಸಿದ ಅನುದಾನಿತ ಶಿಕ್ಷಣ ಸಂಸ್ಥೆಗಳ ನೌಕರರ ಸಂಘ- ಅನುದಾನಿತ ಶಿಕ್ಷಣ ಸಂಸ್ಥೆಗಳ ನೌಕರರ ಸಹಕಾರ ಸಂಘಗಳು ಉತ್ತಮ ರೀತಿಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದು, ಅದರಲ್ಲಿ ಲಕ್ಷಾಂತರ ಸದಸ್ಯರಿದ್ದಾರೆ. ಅವುಗಳಲ್ಲಿ ಶಿವಮೊಗ್ಗ ಜಿಲ್ಲಾ ಅನುದಾನಿತ ಶಿಕ್ಷಣ ಸಂಸ್ಥೆಗಳ ನೌಕರರ ಸಹಕಾರ ಸಂಘವೂ ಒಂದು. ತಿಂಗಳ ವೇತನದಲ್ಲಿ ಜೀವನ ನಡೆಸಲೂ ಕಷ್ಟ- ಕಾರ್ಪಣ್ಯಗಳನ್ನು ಎದುರಿಸುತ್ತಿರುವ ಅನೇಕ ಸದಸ್ಯರಿದ್ದಾರೆ. ಅನಾರೋಗ್ಯಕ್ಕೆ ತುತ್ತಾದರೆ ಔಷಧಿಗೂ ಹಣ ವೆಚ್ಚ ಮಾಡದಂತಹ ಪರಿಸ್ಥಿತಿಯವರಿದ್ದಾರೆ. ಇಂತಹ ಸನ್ನಿವೇಶದಲ್ಲಿ ಯಶಸ್ವಿನಿ ಯೋಜನೆಯನ್ನು ಅನುದಾನಿತ ಶಿಕ್ಷಣ ಸಂಸ್ಥೆಗಳ ನೌಕರರಿಗೂ ವಿಸ್ತರಿಸಬೇಕು ಎಂದು ಅವರು ಒತ್ತಾಯಿಸಿದ್ದಾರೆ.
ಸಹಕಾರ ಇಲಾಖೆಯ ಫೆ.26ರ ಆದೇಶಕ್ಕೆ ತಕ್ಷಣ ತಿದ್ದುಪಡಿ ತಂದು ಯಶಸ್ವಿನಿ ಯೋಜನೆಯ ಸೌಲಭ್ಯ ಪಡೆಯುವಂತೆ ಅವಕಾಶ ಕಲ್ಪಿಸಿಕೊಡಬೇಕು ಎಂದು ಆಗ್ರಹಿಸಲಾಗಿದೆ.
ಸಂಘಟನೆಯ ಪ್ರಧಾನ ಕಾರ್ಯದರ್ಶಿ ಶಿವಕುಮಾರ್ ಎಂ.ಎಲ್., ಜಿಲ್ಲಾ ಸಂಚಾಲಕ ಅಮಿರ್‌ಜಾನ್, ಉಪಾಧ್ಯಕ್ಷ ಟಿ.ಎಂ. ಕುಮಾರ್, ಮಂಜುನಾಥಸ್ವಾಮಿ ಟಿ.ಬಿ., ನಿರ್ದೇಶಕ ಶಶಿಕುಮಾರ್ ಮತ್ತಿತರರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement