ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಶಿವಮೊಗ್ಗ

ದೇಶದ ತಂತ್ರಜ್ಞಾನ ಪ್ರಗತಿಗೆ ರಾಜೀವ್ ಗಾಂಧಿ ಕಾರಣ

Vishwanath S
Updated On : 22 May 2014, 11:14 am

ಶಿವಮೊಗ್ಗ: ರಾಜೀವ್ ಗಾಂಧಿಯವರು 1984-89ರ ತಮ್ಮ ಆಡಳಿತಾವಧಿಯಲ್ಲಿ ತೆಗೆದುಕೊಂಡ ನಿರ್ಧಾರಗಳು ಇಂದು ದೇಶದ ಆರೋಗ್ಯ, ಕೃಷಿ, ಕೈಗಾರಿಕಾ ಕ್ಷೇತ್ರದಲ್ಲಿ ವಿಶ್ವದ ಭೂಪಟದಲ್ಲಿ ಭಾರತಕ್ಕೆ ವಿಶೇಷ ಸ್ಥಾನ ನೀಡಿದೆ ಎಂದು  ಕಾಂಗ್ರೆಸ್ ಮುಖಂಡ ಮಂಜುನಾಥ ಭಂಡಾರಿ ತಿಳಿಸಿದರು.
ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಆಯೋಜಿಸಿದ್ದ ರಾಜೀವ್ ಗಾಂಧಿಯವರ 23ನೇ ಪುಣ್ಯತಿಥಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಹಲವು ಪ್ರಗತಿ: ರಾಜೀವ್ ಗಾಂಧಿಯವರ ಅಧಿಕಾರಾವಧಿಯಲ್ಲಿ ಉಂಟಾದ ದೂರ ಸಂಪರ್ಕ ಕ್ರಾಂತಿಯಿಂದ ಇಂದು ದೇಶದಲ್ಲಿ ಉದ್ಯೋಗ, ಕೃಷಿ, ಮಾಹಿತಿ ತಂತ್ರಜ್ಞಾನದಲ್ಲಿ ಸಾಕಷ್ಟು ಪ್ರಗತಿ ಸಾಧಿಸಿದ್ದೇವೆ ಎಂದು ಹೇಳಿದ ಅವರು, ದೇಶಕ್ಕೆ ರಾಜೀವ್ ಗಾಂಧಿಯವರ ಕೊಡುಗೆ ಅಪಾರ. ಅವರು ದೂರಸಂಪರ್ಕ ಕ್ಷೇತ್ರದಲ್ಲಷ್ಟೇ ಪ್ರಗತಿ ಸಾಧಿಸುವ ನಿರ್ಣಯ ಕೈಗೊಂಡಿದ್ದಲ್ಲದೆ, ಮತದಾನದ ವಯಸ್ಸನ್ನು 18 ವರ್ಷಕ್ಕಿಳಿಸಿ, ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಯುವಕರು ಪಾಲ್ಗೊಳ್ಳಲು ಪ್ರಮುಖ ಕಾರಣರಾದರು ಎಂದರು.
ಕ್ಷುಲ್ಲಕ ಕಾರಣಕ್ಕೆ ರಾಜೀವ್ ಗಾಂಧಿಯವರನ್ನು ಹತ್ಯೆ ಮಾಡಲಾಯಿತು. ಆದರೆ, ಅವರ ಆದರ್ಶ, ದೂರದೃಷ್ಟಿ, ಮಾಡಿದ ಕಾರ್ಯ, ನಡೆದ ಹಾದಿ ನಮ್ಮ ಕಣ್ಣಮುಂದಿದೆ. ಅವರ ಕನಸು ನನಸು ಮಾಡುವ ಹೊಣೆ ನಮ್ಮೆಲ್ಲರ ಮೇಲಿದೆ. ಕಾರಣಾಂತರಗಳಿಂದ ಇಂದು ಕಾಂಗ್ರೆಸ್ ಆಡಳಿತದಲ್ಲಿಲ್ಲ. ಆದರೆ, ಪಕ್ಷವನ್ನು ಸದೃಢವಾಗಿ ಕಟ್ಟುವ ಮೂಲಕ ಕೇಂದ್ರದಲ್ಲಿ ಮತ್ತೊಮ್ಮೆ ಕಾಂಗ್ರೆಸ್ ಪಕ್ಷವನ್ನು ಆಡಳಿತಕ್ಕೆ ತಂದು ಆ ಮೂಲಕ ಅವರಿಗೆ ಶ್ರದ್ಧಾಂಜಲಿ ಸಲ್ಲಿಸೋಣ ಎಂದು ಕಾರ್ಯಕರ್ತರಿಗೆ ಕರೆ ನೀಡಿದರು.
ಇದಕ್ಕೂ ಮೊದಲು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಆರ್. ಪ್ರಸನ್ನಕುಮಾರ್ ಮಾತನಾಡಿ, ರಾಜೀವ್ ಗಾಂಧಿಯವರು ಪ್ರಪಂಚದಲ್ಲೇ ಒಬ್ಬ ಅತ್ಯುತ್ತಮ ಪ್ರಧಾನಿಯಾಗಿ ಆಡಳಿತ ನಡೆಸಿದರು. ಅವರು ದೇಶಕ್ಕೆ ನೀಡಿದ ಕೊಡುಗೆ ಸ್ಮರಣೀಯ ಎಂದರು.
ತಂತ್ರಜ್ಞಾನ ಪ್ರಗತಿ: ದೇಶಕ್ಕಾಗಿ ರಾಜೀವ್ ಅವರು ಮಾನವ ಬಾಂಬ್ ದಾಳಿಗೆ ತುತ್ತಾಗಿ ತಮ್ಮ ಪ್ರಾಣವನ್ನೇ ತೆತ್ತರು. ದೇಶ ಇಂದು ಸಾಧಿಸಿರುವ ಪ್ರಗತಿಗೆ ಅವರ ಕೊಡುಗೆ ಪ್ರಮುಖ ಕಾರಣ. ಅವರ ಅವಧಿಯಲ್ಲಾದ ದೂರ ಸಂಪರ್ಕ ಕ್ರಾಂತಿಯಿಂದಾಗಿ ಇಂದು ಎಲ್ಲರ ಕೈಯಲ್ಲೂ ಮೊಬೈಲ್, ಕಂಪ್ಯೂಟರ್ ಬಂದಿದ್ದು, ದೇಶದ ದಿಕ್ಕನ್ನೇ ಬದಲಾಯಿಸಿದೆ ಎಂದು ಅಭಿಪ್ರಾಯಪಟ್ಟರು.
ಕಾರ್ಯಕ್ರಮದಲ್ಲಿ ಜಿಪಂ ಸದಸ್ಯ ಕಲಗೋಡು ರತ್ನಾಕರ್, ಪ್ರಮುಖರಾದ ರವಿಕುಮಾರ್, ಪಿ. ರುದ್ರೇಶ್, ಶಿವಾನಂದ್, ರಾಮೇಗೌಡ, ಪೂರ್ಣೇಶ್, ಲಕ್ಷ್ಮೀಕಾಂತ್, ಮೋಹನ್ ಸೇರಿದಂತೆ ಹಲವರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement