ಚಿತ್ಪಾವನ ಸಮ್ಮೇಳನ ನಾಳೆ
ಸಾಗರ: ಅಖಿಲ ಕರ್ನಾಟಕ ಚಿತ್ಪಾವನ ಸಂಘ, ಸಾಗರದ ಚಿತ್ಪಾವನ ಸಮಾಜವು ಮೇ 25ರಂದು ಚಿತ್ಪಾವನ ಘಟಕಗಳ ಶಿವಮೊಗ್ಗ ಪ್ರಾಂತ್ಯ -4ರ ಸಮ್ಮೇಳನವನ್ನು ಹಮ್ಮಿಕೊಂಡಿದೆ. ಪಟ್ಟಣದ ಎಸ್.ಪಿ.ಎಂ. ರಸ್ತೆಯಲ್ಲಿರುವ ಶ್ರೀಧರ ಸಂಸ್ಕೃತಿ ಭವನದಲ್ಲಿ ನಡೆಯುವ ಈ ಸಮ್ಮೇಳನದಲ್ಲಿ ಸಮಾಜದ ಸಂಘಟನೆ, ಶಿಕ್ಷಣ, ವೈದ್ಯಕೀಯ ಸಹಾಯ, ಸಮಾಜದ ಪ್ರತಿಷ್‌ಠಿತ ವ್ಯಕ್ತಿಗಳನ್ನು ಗುರುತಿಸಿ ಸನ್ಮಾನಿಸುವುದು ಮುಂತಾದ ವಿಚಾರಗಳ ಬಗ್ಗೆ ಚರ್ಚಿಸಿ ನಿರ್ಣಯ ಕೈಗೊಳ್ಳಲಾಗುವುದು. ಇದೇ ಸಂದರ್ಭದಲ್ಲಿ ಸಮಾಜದ ಒಂದು ವೆಬಬ್ಸೈಟಿಗೆ ಚಾಲನೆ ನೀಡಲಾಗುವುದು. ಸಂಸ್ಕಾರ ಭಾರತಿ ಮಂಗಳೂರು ವಿಭಾಗದ ಸಂಚಾಲಕ ಆದರ್ಶ ಗೋಖಲೆ ರಾಷ್ಟೀಯ ಜಾಗೃತಿ ಮತ್ತು ಚಿತ್ಪಾವನರು ವಿಷಯ ಕುರಿತು ಉಪನ್ಯಾಸ ನೀಡಲಿದ್ದಾರೆ. ಸಮ್ಮೇಳನದಲ್ಲಿ ಅಖಿಲ ಕರ್ನಾಟಕ ಚಿತ್ಪಾವನ ಸಂಘದ ಅಧ್ಯಕ್ಷ ಜಿ.ಎನ್.ಫಡ್ಕೆ, ಗೌರವಾಧ್ಯಕ್ಷ ಬಾಲಚಂದ್ರ ಡೋಂಗ್ರೆ, ದಿವಾಕರ ಡೋಂಗ್ರೆ ಮೊದಲಾದವರು ಪಾಲ್ಗೊಳ್ಳಲಿದ್ದಾರೆ. ಸಮಾಜಬಾಂಧವರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಸಂಘಟಕರು ಕೋರಿದ್ದಾರೆ.
ಸಹಾಯಧನ
ವಿತರಣೆ ನಾಳೆ
ಸಾಗರ: ಮೇ 25ರಂದು ಬೆಳಿಗ್ಗೆ ಆವಿನಹಳ್ಳಿ ರಸ್ತೆಯಲ್ಲಿರುವ ಸಮಾಜದ ಸಭಾಭವನದಲ್ಲಿ ಮೊಗವೀರ ಜನಾಂಗದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ನೋಟ್ ಪುಸ್ತಕ ಹಾಗೂ ಸಹಾಯಧನ ವಿತರಣೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದು ತಾಲ್ಲೂಕು ಮೊಗವೀರ ಮಹಾಜನ ಸಂಘದ ಅಧ್ಯಕ್ಷ ರಾಮ ಮೊಗವೀರ ತಿಳಿಸಿದರು. ಡಾ.ಜಿ.ಶಂಕರ್ ಫ್ಯಾಮಿಲಿ ಟ್ರಸ್ಟ್ ವತಿಯಿಂದ ಅನೇಕ ವರ್ಷಗಳಿಂದ ಜಿಲ್ಲೆಯ ವಿವಿಧ ತಾಲ್ಲೂಕುಗಳಲ್ಲಿ ಈ ಕಾರ್ಯಕ್ರಮವನ್ನು ನಡೆಸಿಕೊಂಡು ಬರಲಾಗುತ್ತಿದೆ. ತಾಲೂಕಿನ 500ಕ್ಕೂ ಹೆಚ್ಚು ಮೊಗವೀರ ಸಮಾಜದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ನೋಟ್ ಪುಸ್ತಕ ಹಾಗೂ 300 ಜನ ಬಡ ವಿದ್ಯಾರ್ಥಿಗಳಿಗೆ ಸಹಾಯಧನ ವಿತರಣೆ ಮಾಡಲಾಗುವುದು ಎಂದು ಅವರು ಪತ್ರಿಕಾ ಗೋಷ್ಠಿಯಲ್ಲಿ ತಿಳಿಸಿದರು ಸಂಘದ ಕಾರ್ಯಾಧ್ಯಕ್ಷ ಜಿ.ಕೃಷ್ಣಪ್ಪ, ಗಣೇಶ್, ಮಂಜುನಾಥ್, ಆನಂದ ಮರಕಾಲು, ದಿನೇಶ್ ಹಾಜರಿದ್ದರು.
ಪ್ರತಿಭಾ ಪುರಸ್ಕಾರ
ಶಿವಮೊಗ್ಗ: ಡಾ. ಜಿ. ಶಂಕರ್ ಫ್ಯಾಮಿಲಿ ಟ್ರಸ್ಟ್ ವತಿಯಿಂದ ಪ್ರತಿವರ್ಷದಂತೆ ಈ ಬಾರಿಯೂ ಸಹ ಜಿಲ್ಲಾ ಮಟ್ಟದ ಪ್ರತಿಭಾ ಪುರಸ್ಕಾರ ಕಾರ್ಯಕ್ರಮವನ್ನು ನಗರದ ಜಿಲ್ಲಾ ಸರ್ಕಾರಿ ನೌಕರರ ಭವನದಲ್ಲಿ ಆಯೋಜಿಸಲಾಗಿದೆ. ಕಾರ್ಯಕ್ರಮವು ಮೇ 25ರಂದು ಮಧ್ಯಾಹ್ನ 3 ಗಂಟೆಗೆ ನಡೆಯಲಿದ್ದು, ಮುಖ್ಯ ಅತಿಥಿಯಾಗಿ ಜಿ. ಶಂಕರ್ ಆಗಮಿಸಲಿದ್ದಾರೆ. ಅಧ್ಯಕ್ಷತೆಯನ್ನು ಜಿಲ್ಲಾ ಗಂಗಾಮತಸ್ಥರ ಸಂಘದ ಅಧ್ಯಕ್ಷ ಡಿ.ಬಿ.ಕೆಂಚಪ್ಪ ವಹಿಸಲಿದ್ದಾರೆ ಎಂದು ಎಸ್.ಬಿ. ಅಶೋಕ್ ಕುಮಾರ್ ತಿಳಿಸಿದ್ದಾರೆ.